ಮಹಿಳೆಯರ ಅಂಡರ್-23 ಏಕದಿನ ಟ್ರೋಫಿ: ‘ಹ್ಯಾಟ್ರಿಕ್’ ಮೂಲಕ ಮಿಂಚಿದ ಶೆಫಾಲಿ ವರ್ಮಾ
Photo PTI
ಗುವಾಹಟಿ: ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿರುವ ಶೆಫಾಲಿ ವರ್ಮಾ ಇದೀಗ ಬೌಲಿಂಗ್ನಲ್ಲೂ ಮಿಂಚಿದ್ದಾರೆ. ಮಹಿಳೆಯರ ಅಂಡರ್-23 ಏಕದಿನ ಟ್ರೋಫಿ ಟೂರ್ನಿಯಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ವಿರುದ್ಧ ಹರ್ಯಾಣ ತಂಡದ ಪರ ಹ್ಯಾಟ್ರಿಕ್ ವಿಕೆಟ್ ಗಳನ್ನು ಪಡೆದಿದ್ದಾರೆ.
ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಶೆಫಾಲಿ, ಆಫ್ ಸ್ಪಿನ್ ಬೌಲಿಂಗ್ನ ಮೂಲಕ 44ನೇ ಓವರ್ನಲ್ಲಿ ಕೊನೆಯ ಎರಡು ಎಸೆತಗಳಲ್ಲಿ ಸಲೋನಿ ಪಿ. ಹಾಗೂ ಸೌಮ್ಯ ವರ್ಮಾ ವಿಕೆಟ್ಗಳನ್ನು ಪಡೆದರು. 46ನೇ ಓವರ್ನ ಮೊದಲ ಎಸೆತದಲ್ಲಿ ನಮಿತಾ ಡಿ’ಸೋಝಾ ವಿಕೆಟ್ ಪಡೆದು ಸ್ಮರಣೀಯ ಹ್ಯಾಟ್ರಿಕ್ ಪೂರೈಸಿದರು. ಪಾರ್ಟ್ಟೈಮ್ ಬೌಲರ್ ಶೆಫಾಲಿ ಅವರು ಪಂದ್ಯದಲ್ಲಿ 20 ರನ್ಗೆ 3 ವಿಕೆಟ್ಗಳನ್ನು ಪಡೆದಿದ್ದಾರೆ.
21ರ ಹರೆಯದ ಶೆಫಾಲಿ ಪ್ರಯತ್ನದ ಫಲವಾಗಿ ಹರ್ಯಾಣ ತಂಡವು ಕರ್ನಾಟಕ ತಂಡವನ್ನು 6 ವಿಕೆಟ್ಗಳಿಂದ ಮಣಿಸಿ ಕ್ವಾರ್ಟರ್ ಫೈನಲ್ನಲ್ಲಿ ಸ್ಥಾನ ಪಡೆದಿದೆ.
ಕಳೆದ ವರ್ಷ ಯುಎಇನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಿಂದ ಕೈಬಿಡಲ್ಪಟ್ಟ ನಂತರ ಶೆಫಾಲಿ ಅವರು ದೇಶಿ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡಿ ರನ್ ಕಲೆ ಹಾಕುತ್ತಿದ್ದು, ರಾಷ್ಟ್ರೀಯ ತಂಡಕ್ಕೆ ವಾಪಸಾಗುವ ಗುರಿ ಇಟ್ಟುಕೊಂಡಿದ್ದಾರೆ.
ಇತ್ತೀಚೆಗೆ ಕೊನೆಗೊಂಡಿರುವ ಮಹಿಳೆಯರ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿದೇಶಿ ಆಟಗಾರ್ತಿಯರಾದ ನ್ಯಾಟ್ ಸಿವೆರ್-ಬ್ರಂಟ್, ಎಲ್ಲಿಸ್ ಪೆರ್ರಿ ಹಾಗೂ ಹೇಲಿ ಮ್ಯಾಥ್ಯೂಸ್ ನಂತರ 4ನೇ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ.
ಈ ವರ್ಷದ ಡಬ್ಲ್ಯುಪಿಎಲ್ ಟೂರ್ನಿಯ ಫೈನಲ್ನಲ್ಲಿ ಸತತ 3ನೇ ಬಾರಿ ಶೆಫಾಲಿ ಪ್ರತಿನಿಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸೋಲುಂಡಿದೆ.