ಮಾ.22ರಂದು ಐಪಿಎಲ್ ಉದ್ಘಾಟನೆ: ಕೋಲ್ಕತಾದ ಈಡನ್‌ಗಾರ್ಡನ್ಸ್ ಸ್ಟೇಡಿಯಮ್ ಸಜ್ಜು

ಕೋಲ್ಕತಾದ ಈಡನ್‌ಗಾರ್ಡನ್ಸ್ | PC : X
ಕೋಲ್ಕತಾ: ವಿಶ್ವದ ಬಹು ನಿರೀಕ್ಷಿತ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಒಂದಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)-2025 ಕೋಲ್ಕತಾದ ಈಡನ್‌ಗಾರ್ಡನ್ಸ್‌ನಲ್ಲಿ ಮಾ.22ರಂದು ಶನಿವಾರ ಅದ್ದೂರಿ ಉದ್ಘಾಟನಾ ಸಮಾರಂಭದೊಂದಿಗೆ ಆರಂಭವಾಗಲಿದೆ.
ಇದು 18ನೇ ಆವೃತ್ತಿಯ ಟೂರ್ನಮೆಂಟ್ ಆಗಿದ್ದು, ರೋಚಕ ಟಿ20 ಕ್ರಿಕೆಟ್‌ನಲ್ಲಿ 10 ಫ್ರಾಂಚೈಸಿ ತಂಡಗಳು ಸೆಣಸಾಡಲಿವೆ.
ಹಿಂದಿನ ಆವೃತ್ತಿಗಳಿಗಿಂತ ಭಿನ್ನವಾಗಿ ಈ ವರ್ಷ ಎಲ್ಲ 13 ಸ್ಥಳಗಳಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭ ನಡೆಯಲಿದೆ. ಕೋಲ್ಕತಾದಲ್ಲಿ ಸಂಜೆ 6ರ ನಂತರ ಸುಮಾರು 1 ಗಂಟೆ ಉದ್ಘಾಟನಾ ಸಮಾರಂಭ ನಡೆದ ನಂತರ ಹಾಲಿ ಚಾಂಪಿಯನ್ ಕೆಕೆಆರ್ ತಂಡವು ಆರ್‌ಸಿಬಿ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ಸ್ಟಾರ್ ಸ್ಪೋರ್ಟ್ಸ್ ಪಂದ್ಯದ ನೇರ ಪ್ರಸಾರ ಮಾಡಲಿದೆ. ಕೋಲ್ಕತಾದಲ್ಲಿ ಮೊದಲ ಪಂದ್ಯದ ಟಿಕೆಟ್ ದರವು 3 ಸಾವಿರದಿಂದ 30 ಸಾವಿರದ ತನಕ ಇರುವ ನಿರೀಕ್ಷೆ ಇದೆ.
ಐಪಿಎಲ್ ಕೇವಲ ಕ್ರಿಕೆಟ್ ಮಾತ್ರವಲ್ಲ, ತನ್ನ ಮನಮೋಹಕ ಹಾಗೂ ಮನರಂಜನೆಯಿಂದ ಕೂಡಿದ ಉದ್ಘಾಟನಾ ಸಮಾರಂಭಗಳಿಗೂ ಹೆಸರುವಾಸಿಯಾಗಿದೆ. 2025ರ ಆವೃತ್ತಿಯು ಕೆಲವು ಪ್ರಮುಖ ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಸಂಗೀತ ದಿಗ್ಗಜರ ಪ್ರದರ್ಶನವನ್ನು ಒಳಗೊಂಡಿದೆ.
ಬಾಲಿವುಡ್ ನಟಿ ದಿಶಾ ಪಟಾನಿ ನೃತ್ಯದ ಮೂಲಕ, ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಇಂಪಾದ ಗಾಯನದ ಮೂಲಕ ರಂಜಿಸಲಿದ್ದಾರೆ. ಖ್ಯಾತ ಪಂಜಾಬಿ ಸಿಂಗರ್ ಹಾಗೂ ರ‍್ಯಾಪರ್ ಕರಣ್ ಆಜ್ಲಾ ಸಂಗೀತ ಸಮ್ಮಿಳನಕ್ಕೆ ಹೊಸ ಸ್ಪರ್ಶ ನೀಡಲಿದ್ದಾರೆ.
►ಐಪಿಎಲ್ 2025 ಟೂರ್ನಿಯ ರಚನೆ ಹಾಗೂ ಸ್ವರೂಪ
2025ರ ಆವೃತ್ತಿಯ ಐಪಿಎಲ್‌ನಲ್ಲಿ 10 ತಂಡಗಳು ಇರುತ್ತವೆ. ಇವುಗಳನ್ನು 2 ಗುಂಪುಗಳಾಗಿ ವಿಭಜಿಸಲಾಗುತ್ತದೆ. ಪ್ರತೀ ತಂಡವು 14 ಲೀಗ್ ಪಂದ್ಯಗಳನ್ನು(ತವರು ಮೈದಾನದಲ್ಲಿ 7, ತವರಿನಿಂದ ಹೊರಗೆ 7)ಆಡುತ್ತದೆ. ಟೂರ್ನಿಯ ಮಾದರಿ ಐಪಿಎಲ್-2024ರಂತೆಯೇ ಇರಲಿದೆ. ಒಂದೇ ಗುಂಪಿನ ತಂಡಗಳು ಎರಡು ಬಾರಿ ಪರಸ್ಪರ ಸೆಣಸಾಡಲಿವೆ. ಎದುರಾಳಿ ಗುಂಪಿನ ಒಂದು ತಂಡದೊಂದಿಗೆ ಎರಡು ಬಾರಿ ಹಾಗೂ ಉಳಿದ ತಂಡಗಳೊಂದಿಗೆ ಒಂದು ಬಾರಿ ಆಡಲಿವೆ.
ಪ್ರತೀ ತಂಡಗಳು ಪ್ಲೇ ಆಫ್‌ನಲ್ಲಿ ಸ್ಥಾನ ಗಿಟ್ಟಿಸಲು ಲೀಗ್ ಹಂತದಲ್ಲಿ ತೀವ್ರ ಹೋರಾಟ ನಡೆಸಲಿವೆ. ಮಾ.25ರಂದು ಫೈನಲ್ ಪಂದ್ಯ ನಡೆಯಲಿದೆ.
‘ಎ’ ಗುಂಪು: ಚೆನ್ನೈಸೂಪರ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್
‘ಬಿ’ ಗುಂಪು: ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೊ ಸೂಪರ್ ಜಯಂಟ್ಸ್.