ಪಾಕಿಸ್ತಾನದ ಪರ ವೇಗದ ಟಿ20 ಶತಕ ; ಬಾಬರ್ ಆಝಮ್ ದಾಖಲೆ ಮುರಿದ ಹಸನ್ ನವಾಝ್

ಹಸನ್ ನವಾಝ್ | PC : X \ @TheRealPCB
ಆಕ್ಲ್ಲೆಂಡ್: ಟಿ20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ವೇಗವಾಗಿ ಶತಕ ಸಿಡಿಸಿದ ಪಾಕಿಸ್ತಾನದ ಆಟಗಾರ ಎನಿಸಿಕೊಂಡಿರುವ ಯುವ ಬ್ಯಾಟರ್ ಹಸನ್ ನವಾಝ್ ಇತಿಹಾಸ ನಿರ್ಮಿಸಿದರು.
ಶುಕ್ರವಾರ ಇಲ್ಲಿನ ಈಡೆನ್ ಪಾರ್ಕ್‌ನಲ್ಲಿ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ 22ರ ಹರೆಯದ ಬಲಗೈ ಬ್ಯಾಟರ್ ಕೇವಲ 44 ಎಸೆತಗಳಲ್ಲಿ ಶತಕ ಪೂರೈಸಿದರು.
ನವಾಝ್ 10 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದರು. ಈ ಮೂಲಕ ರನ್ ಚೇಸ್ ವೇಳೆ ತನ್ನ ಪವರ್ ಹಿಟ್ಟಿಂಗ್ ಸಾಮರ್ಥ್ಯವನ್ನು ತೋರ್ಪಡಿಸಿದರು.
ಪಾಕಿಸ್ತಾನದ ನಾಯಕ ಸಲ್ಮಾನ್ ಆಘಾರಿಂದ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಝಿಲ್ಯಾಂಡ್ ತಂಡವು 19.5 ಓವರ್‌ಗಳಲ್ಲಿ 204 ರನ್ ಸವಾಲಿನ ಮೊತ್ತ ಗಳಿಸಿತು.
ಗೆಲ್ಲಲು 205 ರನ್ ಗಳಿಸಿದ ಪಾಕಿಸ್ತಾನ ತಂಡ ಮಿಂಚಿನ ಆರಂಭ ಪಡೆದಿದ್ದು ಮೊದಲ ವಿಕೆಟ್‌ನಲ್ಲಿ 74 ರನ್ ಸೇರಿಸಿತು. ವಿಕೆಟ್‌ಕೀಪರ್-ಬ್ಯಾಟರ್ ಮುಹಮ್ಮದ್ ಹಾರಿಸ್ ಕೇವಲ 20 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ 41 ರನ್ ಗಳಿಸಿದರು.
ಹಾರಿಸ್ ಔಟಾದ ನಂತರ ನಾಯಕ ಸಲ್ಮಾನ್(ಔಟಾಗದೆ 51) ಜೊತೆ ಕೈಜೋಡಿಸಿದ ನವಾಝ್ ಭರ್ಜರಿ ಜೊತೆಯಾಟ ನಡೆಸಿ ಪಾಕಿಸ್ತಾನಕ್ಕೆ 9 ವಿಕೆಟ್‌ಗಳ ಅಂತರದಿಂದ ಗೆಲುವು ತಂದುಕೊಟ್ಟರು. ನವಾಝ್ ಔಟಾಗದೆ 105 ರನ್ ಗಳಿಸಿದರು.
ಉಭಯ ತಂಡಗಳ ನಡುವೆ 4ನೇ ಟಿ20 ಪಂದ್ಯವು ಮೌಂಟ್ ಮೌಂಗನುಯಿಯಲ್ಲಿ ರವಿವಾರ(ಮಾ.23) ನಡೆಯಲಿದೆ. 5ನೇ ಹಾಗೂ ಅಂತಿಮ ಟಿ20 ಪಂದ್ಯವು ವೆಲ್ಲಿಂಗ್ಟನ್‌ನಲ್ಲಿ ಬುಧವಾರ(ಮಾ.26)ನಡೆಯಲಿರುವುದು.
►ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ ಗಳಿಸಿದ ಪಾಕಿಸ್ತಾನದ ಬ್ಯಾಟರ್‌ಗಳು
ಹಸನ್ ನವಾಝ್-ನ್ಯೂಝಿಲ್ಯಾಂಡ್ ವಿರುದ್ಧ 44 ಎಸೆತಗಳಲ್ಲಿ, ಆಕ್ಲೆಂಡ್, 2025
ಬಾಬರ್ ಆಝಮ್-ದಕ್ಷಿಣ ಆಫ್ರಿಕಾ ವಿರುದ್ಧ 49 ಎಸೆತಗಳಲ್ಲಿ, ಸೆಂಚೂರಿಯನ್, 2021
ಅಹ್ಮದ್ ಶೆಹಝಾದ್-ಬಾಂಗ್ಲಾದೇಶ ವಿರುದ್ಧ 58 ಎಸೆತಗಳಲ್ಲಿ, ಢಾಕಾ(2014)
ಬಾಬರ್ ಆಝಮ್-ನ್ಯೂಝಿಲ್ಯಾಂಡ್ ವಿರುದ್ಧ 58 ಎಸೆತಗಳಲ್ಲಿ, ಲಾಹೋರ್(2023)