IPL 2025 | ಉದಯಿಸಿದ ಹೈದರಾಬಾದ್ ಕಿʼಶಾನ್ʼ; ರಾಜಸ್ಥಾನ ರಾಯಲ್ಸ್ ಗೆ ಬೃಹತ್ ಗುರಿ

Photo :x/@IPL
ಹೈದರಾಬಾದ್ : ಇಲ್ಲಿನ ಉಪ್ಪಳದ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಹೈದರಾಬಾದ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 287 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದ ರಾಜಸ್ಥಾನ್ ರಾಯಲ್ಸ್ ತಂಡವು ಅಕ್ಷರಶಃ ಕೈಸುಟ್ಟುಕೊಂಡಿತು. ಹೈದರಾಬಾದ್ ಪರವಾಗಿ ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ, ಟ್ರಾವೆಸ್ ಹೆಡ್ ಜೋಡಿಯು ರಾಜಸ್ಥಾನದ ಬೌಲರ್‌ಗಳ ಬೆವರಿಳಿಸಿದರು.
11 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 24 ರನ್ ಗಳಿಸಿದ ಅಭಿಷೇಕ್ ಶರ್ಮಾ ಮಹೀಶ್ ತೀಕ್ಷಣ ಅವರ ಎಸೆತದಲ್ಲಿ ಯಶಶ್ವಿ ಜೈಸ್ವಾಲ್ ಗೆ ಕ್ಯಾಚಿತ್ತರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಇಶಾನ್ ಕಿಶನ್ ಟ್ರಾವೆಸ್ ಹೆಡ್ ಗೆ ಜೊತೆಯಾದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಟ್ರಾವೆಸ್ ಹೆಡ್ 31 ಎಸೆತಗಳಲ್ಲಿ 3 ಸಿಕ್ಸರ್ 9 ಬೌಂಡರಿಗಳ ಸಹಿತ 67 ರನ್ ಗಳಿಸಿದ್ದಾಗ ಮುಂಬೈಕರ್ ತುಷಾರ್ ದೇಶಪಾಂಡೆ ಬೌಲಿಂಗ್ ನಲ್ಲಿ ಶಿಮ್ರೋನ್ ಹೆಟ್ಮೈರ್ ಅವರಿಗೆ ಕ್ಯಾಚ್ ನೀಡಿದರು.
ಆ ಹೊತ್ತಿಗೆ ಹೈದರಾಬಾದ್ ತಂಡವು 9 .3 ಓವರ್ ಗಳಲ್ಲಿ 130 ರನ್ ಗಳಿಸಿತ್ತು. ಆ ಬಳಿಕ ಕ್ರೀಸ್ ಗೆ ಬಂದ ನಿತೀಶ್ ಕುಮಾರ್ ರೆಡ್ಡಿ ಬೀಸುವ ಬ್ಯಾಟ್ ಗೆ ವೇಗ ನೀಡಿದರು.
ಮಿಂಚಿದ ಇಶಾನ್ ಕಿಶನ್:
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ನಿಂದ ಹೈದರಾಬಾದ್ ತೆಕ್ಕೆಗೆ ಬಂದ ಇಶಾನ್ ಕಿಶನ್, ತಮ್ಮ ಟೀಕೆಕಾರರಿಗೆ ಬ್ಯಾಟ್ ನಿಂದಲೇ ಉತ್ತರ ನೀಡಿದರು. 47 ಎಸೆತ ಎದುರಿಸಿದ ಇಶಾನ್ 106 ರನ್ ಗಳಿಸಿ ಅಜೇಯರಾಗಿ ಉಳಿದರು. ಶತಕಗಳಿಸಿ ಅವರು ಉಪ್ಪಳ ಸ್ಟೇಡಿಯಂನಲ್ಲಿ ಸಂಭ್ರಮಿಸಿದ ಪರಿಯು ಭಾರತೀಯ ಕ್ರಿಕೆಟ್ ತಂಡದ ಆಯ್ಕೆದಾರರಿಗೆ, ಎಲ್ಲ ಟೀಕೆಗಳಿಗೆ ಉತ್ತರ ನೀಡಿದಂತಿತ್ತು.
47 ಎಸೆತಗಳಲ್ಲಿ 11 ಬೌಂಡರಿ ಬಾರಿಸಿದ ಇಶಾನ್ ಬಾರಿ ಸಿಕ್ಸರ್ ಗೆ ಎತ್ತಿದರು. ಸ್ಟೇಡಿಯಂನ ಎಲ್ಲಾ ಕಾರ್ನರ್ ಗಳಿಗೂ ಚೆಂಡನ್ನು ಅಟ್ಟಿದ್ದ ಅವರ ಆಟವು ಕಿಕ್ಕಿರಿದು ತುಂಬಿದ್ದ ಹೈದರಾಬಾದ್ ನ ಕ್ರಿಕೆಟ್ ಪ್ರೇಮಿಗಳಿಗೆ ವಾರಾಂತ್ಯದ ಭರ್ಜರಿ ಮನೋರಂಜನೆ ನೀಡಿತು.ತಮ್ಮ ಅಮೋಘ ಆಟದ ಮೂಲಕ ಇಶಾನ್ ಕಿಶನ್ ಭಾರತ ಕ್ರಿಕೆಟ್ ತಂಡದ ಕದವನ್ನು ಮತ್ತೆ ತಟ್ಟಿದ್ದಾರೆ.
ಅಭಿನವ್ ಮನೋಹರ್ 0(1), ಪ್ಯಾಟ್ ಕಮಿನ್ಸ್ 0*(1), ನಿತೀಶ್ ಕುಮಾರ್ ರೆಡ್ಡಿ 30(14), ಹೆನ್ರಿಚ್ ಕ್ಲಾಸೆನ್ 34(14), ಅನಿಕೇತ್ ವರ್ಮಾ 7(3) ರನ್ ಗಳಿಸಿದರು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಎರಡನೇ ಅತೀ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿತು. ಈ ಹಿಂದೆ ಹೈದರಾಬಾದ್ ತಂಡವು ಆರ್ ಸಿ ಬಿ ವಿರುದ್ಧ 287 ರನ್ ಗಳಿಸಿತ್ತು.
ರಾಜಸ್ಥಾನ್ ರಾಯಲ್ಸ್ ಪರ ತುಷಾರ್ ದೇಶಪಾಂಡೆ 3 ವಿಕೆಟ್ ಪಡೆದರು. ಮಹೀಶ್ ತೀಕ್ಷಣ 2 ವಿಕೆಟ್ ಪಡೆದರು. ಸಂದೀಪ್ ಶರ್ಮ 1 ವಿಕೆಟ್ ಪಡೆದರು. ಜೋಫ್ರಾ ಆರ್ಚರ್ 4 ಓವರ್ ಗೆ 76 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು.