ಐಪಿಎಲ್ ಪಾದಾರ್ಪಣೆ ಪಂದ್ಯದಲ್ಲೇ ಮೂರು ವಿಕೆಟ್; ಯಾರು ವಿಘ್ನೇಶ್ ಪುತ್ತೂರು?

Update: 2025-03-24 20:06 IST
ಐಪಿಎಲ್ ಪಾದಾರ್ಪಣೆ ಪಂದ್ಯದಲ್ಲೇ ಮೂರು ವಿಕೆಟ್; ಯಾರು ವಿಘ್ನೇಶ್ ಪುತ್ತೂರು?

ವಿಘ್ನೇಶ್ ಪುತ್ತೂರು | PC : PTI 

  • whatsapp icon

ಚೆನ್ನೈ: ರವಿವಾರ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ನಂತರ, ಯುವ ಆಟಗಾರ ವಿಘ್ನೇಶ್ ಪುತ್ತೂರು ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿಯಿಂದ ಮುಂಬೈ ತಂಡದ ಅತ್ಯುತ್ತಮ ಬೌಲರ್ ಪ್ರಶಸ್ತಿ ಸ್ವೀಕರಿಸಿದರು.

ಈ ಋತುವಿನ ಐಪಿಎಲ್ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು ಮುಂಬೈ ಇಂಡಿಯನ್ಸ್ ತಂಡ ಪರಾಭವಗೊಂಡ ನಂತರ, ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ಅವರು ಮುಂಬೈ ಇಂಡಿಯನ್ಸ್ ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ವಿಘ್ನೇಶ್ ಪುತ್ತೂರು ಅವರಿಗೆ ಮುಂಬೈ ತಂಡದ ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ವೇಳೆ, ತಮಗೆ ತಂಡದಲ್ಲಿ ಸ್ಥಾನ ನೀಡಿದ್ದಕ್ಕಾಗಿ ವಿನಮ್ರತೆ ಹಾಗೂ ಕೃತಜ್ಞತೆ ಸಲ್ಲಿಸುವ ಭಾಗವಾಗಿ ಅವರು ನೀತಾ ಅಂಬಾನಿಯ ಕಾಲಿಗೆರಗಿದರು.

ನಂತರ, ನೀತಾ ಅಂಬಾನಿ ಅವರಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ ವಿಘ್ನೇಶ್ ಪುತ್ತೂರ್, “ನನಗೆ ಪಂದ್ಯದಲ್ಲಿ ಆಡಲು ಅವಕಾಶ ನೀಡಿದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಧನ್ಯವಾದ ಸಲ್ಲಿಸುತ್ತೇನೆ. ನಾನು ಜೀವನದಲ್ಲೆಂದಾದರೂ ಈ ಆಟಗಾರರೊಂದಿಗೆ ಆಡುತ್ತೇನೆ ಎಂದು ಭಾವಿಸಿಯೇ ಇರಲಿಲ್ಲ” ಎಂದು ಹೇಳಿದರು.

“ನನಗೆ ತುಂಬಾ ಸಂತೋಷವಾಗಿದೆ. ನಾವು ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದ್ದರೂ, ತಂಡಕ್ಕೆ, ವಿಶೇಷವಾಗಿ, ನನಗೆ ಅಪಾರ ಬೆಂಬಲ ನೀಡಿದ ನಾಯಕ ಸೂರ್ಯಣ್ಣನಿಗೆ (ಸೂರ್ಯಕುಮಾರ್ ಯಾದವ್) ತುಂಬಾ ಧನ್ಯವಾದಗಳು. ಅದರಿಂದಾಗಿಯೇ ನಾನು ಪಂದ್ಯದಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗಲಿಲ್ಲ. ನನಗೆ ಬೆಂಬಲ ನೀಡಿದ ತಂಡದ ಎಲ್ಲ ಸಹ ಆಟಗಾರರಿಗೂ ನನ್ನ ಧನ್ಯವಾದಗಳು” ಎಂದು ಅವರು ಕೃತಜ್ಞತೆ ಸಲ್ಲಿಸಿದರು.

ಇದಕ್ಕೂ ಮುನ್ನ, ಮುಂಬೈ ಇಂಡಿಯನ್ಸ್ ತಂಡ ನೀಡಿದ 156 ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಎರಡನೇ ಓವರ್ ನಲ್ಲೇ ಆರಂಭಿಕ ಆಟಗಾರ ರಾಹುಲ್ ತ್ರಿಪಾಠಿಯ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ, ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ರಚಿನ್ ರವೀಂದ್ರ ಜೋಡಿ ಎರಡನೆ ವಿಕೆಟ್ ಜೊತೆಯಾಟದಲ್ಲಿ ಕೇವಲ 6.1 ಓವರ್ ಗಳಲ್ಲಿ 67 ರನ್ ಗಳನ್ನು ಸೂರೆಗೈದಿತು. ಈ ಪೈಕಿ ಋತುರಾಜ್ ಗಾಯಕ್ವಾಡ್ ಒಬ್ಬರೇ ಕೇವಲ 22 ಬಾಲ್ ಗಳಲ್ಲಿ ವೇಗದ ಅರ್ಧ ಶತಕ ಸಿಡಿಸಿದರು.

ಆದರೆ, ತಮ್ಮ ಚೊಚ್ಚಲ ಐಪಿಎಲ್ ಪಂದ್ಯವಾಡುತ್ತಿರುವ ವಿಘ್ನೇಶ್ ಪುತ್ತೂರು, ತಮ್ಮ ರೋಚಕ ಬೌಲಿಂಗ್ ದಾಳಿಯಿಂದ ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟರು. ಇದುವರೆಗೆ ಯಾವುದೇ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಗಳಲ್ಲಿ ಆಡಿದ ಅನುಭವವಿಲ್ಲದ 24 ವರ್ಷದ ಸ್ಪಿನ್ನರ್ ವಿಘ್ನೇಶ್ ಪುತ್ತೂರು, ಮೂವರು ಅನುಭವಿ ಬ್ಯಾಟರ್ ಗಳಾದ ಋತುರಾಜ್ ಗಾಯಕ್ವಾಡ್, ಶಿವಂ ದುಬೆ ಹಾಗೂ ದೀಪಕ್ ಹೂಡಾರನ್ನು ಪೆವಿಲಿಯನ್ ಗೆ ವಾಪಸ್ ಕಳಿಸಿದರು. ಇದರಿಂದ ಒಂದು ಹಂತದಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು, 12 ಓವರ್ ಗಳ ಹೊತ್ತಿಗೆ 107 ರನ್ ಗಳನ್ನು ಗಳಿಸಿ, 4 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಆತಂಕಕ್ಕೀಡಾಗಿತ್ತು. ಪಂದ್ಯದುದ್ದಕ್ಕೂ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ವಿಘ್ನೇಶ್ ಪುತ್ತೂರು, ತಮ್ಮ ನಿಗದಿತ ನಾಲ್ಕು ಓವರ್ ಗಳಲ್ಲಿ ಕೇವಲ 32 ರನ್ ನೀಡಿ, 3 ಪ್ರಮುಖ ವಿಕೆಟ್ ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.

ಆದರೆ, ರಚಿನ್ ರವೀಂದ್ರರ ಅಮೋಘ ಅಜೇಯ ಅರ್ಧಶತಕ(45 ಬಾಲ್ ಗಳಲ್ಲಿ 65 ರನ್)ದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇನ್ನೂ 5 ಬಾಲ್ ಗಳು ಬಾಕಿಯಿರುವಾಗಲೇ ಗೆಲುವಿನ ನಗೆ ಬೀರಿತು. ಹೀಗಿದ್ದೂ, ಪಂದ್ಯದಲ್ಲಿ ವಿಘ್ನೇಶ್ ಪುತ್ತೂರು ತೋರಿದ ವೀರೋಚಿತ ಪ್ರದರ್ಶನದ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

24 ವರ್ಷದ ಕೇರಳದ ವಿಘ್ನೇಶ್‌ ಇದುವರೆಗೂ ಕೇರಳ ರಾಜ್ಯದ ಪರ ಒಂದೇ ಒಂದು ಪಂದ್ಯ ಆಡಿಲ್ಲ. ಕುಲದೀಪ್ ಯಾದವ್ ಮಾದರಿಯಲ್ಲಿ ಎಡಗೈ ರಿಸ್ಟ್ ಸ್ಪಿನ್ನರ್ ಆಗಿದ್ದ ವಿಘ್ನೇಶ್, ರವಿವಾರದ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಪ್ಯಾಕ್ಟ್ ಬದಲಿ ಆಟಗಾರನಾಗಿ ರೋಹಿತ್‌ ಶರ್ಮಾ ಬದಲಿಗೆ ವಿಘ್ನೇಶ್‌ ತಂಡ ಸೇರಿದ್ದರು.

ವಿಘ್ನೇಶ್ ಕೇರಳದ ಮಲಪ್ಪುರಂ ಮೂಲದವರು. ಅವರ ತಂದೆ ಸುನಿಲ್ ಕುಮಾರ್ ಆಟೋರಿಕ್ಷಾ ಚಲಾಯಿಸುತ್ತಾರೆ. ತಾಯಿ ಕೆ.ಪಿ. ಬಿಂದು ಗೃಹಿಣಿ. ತಮ್ಮ ಕ್ರಿಕೆಟ್ ಕನಸುಗಳನ್ನು ಈಡೇರಿಸಲು, ವಿಘ್ನೇಶ್ ಮಲಪ್ಪುರಂನಿಂದ ತ್ರಿಶೂರ್‌ಗೆ ಸ್ಥಳಾಂತರಗೊಂಡರು. ಅವರು ಆರಂಭದಲ್ಲಿ ಕಾಲೇಜು ಮಟ್ಟದ ಕ್ರಿಕೆಟ್‌ನಲ್ಲಿ ಮಧ್ಯಮ ವೇಗಿಯಾಗಿ ಪ್ರಾರಂಭಿಸಿದ್ದರು. ನಂತರ ತಮ್ಮ ವೃತ್ತಿಜೀವನದಲ್ಲಿ ಸ್ಪಿನ್ ಬೌಲರ್‌ ಆಗಿ ಪರಿವರ್ತನೆಗೊಂಡರು.

ತ್ರಿಶೂರ್‌ ನ ಸೇಂಟ್ ಥಾಮಸ್ ಕಾಲೇಜಿನಲ್ಲಿ ಆಡುವಾಗ ವಿಘ್ನೇಶ್ ಹೆಚ್ಚಿನ ಗಮನ ಸೆಳೆದರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರ ವಿಘ್ನೇಶ್, ಕೇರಳ ಕ್ರಿಕೆಟ್ ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಅಲೆಪ್ಪಿ ರಿಪಲ್ಸ್‌ ಪರ ಉತ್ತಮ ಪ್ರದರ್ಶನ ನೀಡಿದ್ದರು. ಬಳಿಕ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲೂ ಭಾಗವಹಿಸಿದ್ದರು.

ಕೇರಳ ಕ್ರಿಕೆಟ್ ಲೀಗ್‌ ನಲ್ಲಿ ಆಡುತ್ತಿದ್ದಾಗ ಮುಂಬೈ ಇಂಡಿಯನ್ಸ್ ತಂಡ ವಿಘ್ನೇಶ್ ಅವರ ಸಾಮರ್ಥ್ಯವನ್ನು ಗುರುತಿಸಿತು. 2025 ರ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಅವರನ್ನು 30 ಲಕ್ಷ ರೂ.ಗಳಿಗೆ ಖರೀದಿಸಿತು. ಈ ವರ್ಷದ ಆರಂಭದಲ್ಲಿ, ಫ್ರಾಂಚೈಸಿಯು ಅವರನ್ನು ದಕ್ಷಿಣ ಆಫ್ರಿಕಾಕ್ಕೆ ಎಸ್‌ಎ20 ರ ಮೂರನೇ ಸೀಸನ್‌ ಗೆ ಕಳುಹಿಸಿತ್ತು. ಅಲ್ಲಿ ಅವರು ಎಂಐ ಕೇಪ್ ಟೌನ್ ಪರ ನೆಟ್ ಬೌಲರ್ ಆಗಿ ಆಡಿದರು. ಅಲ್ಲಿ, ಟಿ20 ಕ್ರಿಕೆಟ್‌ನ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ರಶೀದ್ ಖಾನ್ ಅವರೊಂದಿಗೆ ತರಬೇತಿ ಪಡೆಯುವ ಅವಕಾಶವನ್ನು ಪಡೆದರು.ಅದು ವಿಘ್ನೇಶ್‌ ಅವರ ಕ್ರಿಕೆಟ್ ಬದುಕನ್ನೇ ಬದಲಾಯಿಸಿತು.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News