IPL 2025 | ಲಕ್ನೋ ವಿರುದ್ಧ ಡೆಲ್ಲಿಗೆ ಜಯದ ಪಾರಿತೋಷಕ ಕೊಟ್ಟ ಅಶುತೋಷ್

Photo : x/@IPL
ವಿಶಾಖಪಟ್ಟಣಂ: ಮಧ್ಯಮ ಸರದಿಯ ಬ್ಯಾಟರ್ ಅಶುತೋಶ್ ಶರ್ಮಾ(ಔಟಾಗದೆ 66 ರನ್, 31 ಎಸೆತ, 5 ಬೌಂಡರಿ, 5ಸಿಕ್ಸರ್ )ವೀರೋಚಿತ ಬ್ಯಾಟಿಂಗ್ ನೆರವಿನಿಂದ ಐಪಿಎಲ್‌ನ 4ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಲಕ್ನೊ ಸೂಪರ್ ಜಯಂಟ್ಸ್ ತಂಡವನ್ನು 1 ವಿಕೆಟ್ ಅಂತರದಿಂದ ರೋಚಕವಾಗಿ ಮಣಿಸಿದೆ.
ಸೋಮವಾರ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲಕ್ನೊ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 209 ರನ್ ಗಳಿಸಿತು. ಗೆಲ್ಲಲು 210 ರನ್ ಗುರಿ ಬೆನ್ನಟ್ಟಿದ ಡೆಲ್ಲಿ ತಂಡವು 19.3 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 211 ರನ್ ಗಳಿಸಿ ಶುಭಾರಂಭ ಮಾಡಿತು.
ಮೊದಲ ಓವರ್‌ನ 3ನೇ ಎಸೆತದಲ್ಲಿ ಆರಂಭಿಕ ಬ್ಯಾಟರ್ ಜಾಕ್ ಫ್ರೆಸರ್(0)ವಿಕೆಟ್ ಒಪ್ಪಿಸಿದರು. ಡೆಲ್ಲಿ ತಂಡ 7 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ಆಗ ಡು ಪ್ಲೆಸಿಸ್ ಹಾಗೂ ನಾಯಕ ಅಕ್ಷರ್ ಪಟೇಲ್ 4ನೇ ವಿಕೆಟ್‌ಗೆ 43 ರನ್ ಸೇರಿಸಿ ತಂಡವನ್ನು ಆಧರಿಸಿದರು. ಈ ಇಬ್ಬರು ಬೇರ್ಪಟ್ಟ ನಂತರ ಸ್ಟಬ್ಸ್ ಜೊತೆ 48 ರನ್ ಸೇರಿಸಿದ ಅಶುತೋಶ್ ಶರ್ಮಾ ತಂಡಕ್ಕೆ ಆಪತ್‌ಬಾಂಧವನಾದರು.
ಅಶುತೋಶ್ ಹಾಗೂ ವಿಪ್ರಾಜ್ ನಿಗಮ್ 7ನೇ ವಿಕೆಟ್‌ಗೆ 22 ಎಸೆತಗಳಲ್ಲಿ 55 ರನ್ ಸೇರಿಸಿ ತಂಡವನ್ನು ಗೆಲುವಿನ ಸನಿಹ ತಲುಪಿಸಿದರು. ಕುಲದೀಪ್ ಯಾದವ್ ಹಾಗೂ ಮೋಹಿತ್ ಶರ್ಮಾ ಜೊತೆ ನಿರ್ಣಾಯಕ ಜೊತೆಯಾಟ ನಡೆಸಿದ ಅಶುತೋಶ್ ಡೆಲ್ಲಿಗೆ ಅನಿರೀಕ್ಷಿತ ಗೆಲುವು ತಂದುಕೊಟ್ಟರು.
ಟ್ರಿಸ್ಟನ್ ಸ್ಟಬ್ಸ್(34 ರನ್), ವಿಪ್ರಾಜ್ ನಿಗಮ್ (39 ರನ್), ಎಫ್ ಡು ಪ್ಲೆಸಿಸ್ (29 ರನ್), ಅಕ್ಷರ್ ಪಟೇಲ್(22 ರನ್) ಎರಡಂಕೆ ಸ್ಕೋರ್ ಗಳಿಸಿದರು.
ಇದಕ್ಕೂ ಮೊದಲು ನಿಕೊಲಸ್ ಪೂರನ್(75 ರನ್, 30 ಎಸೆತ, 6 ಬೌಂಡರಿ, 7 ಸಿಕ್ಸರ್)ಹಾಗೂ ಮಿಚೆಲ್ ಮಾರ್ಷ್(72 ರನ್, 36 ಎಸೆತ, 6 ಬೌಂಡರಿ, 6 ಸಿಕ್ಸರ್)ಅರ್ಧಶತಕಗಳ ಕೊಡುಗೆಯ ಸಹಾಯದಿಂದ ಲಕ್ನೊ ಸೂಪರ್ ಜಯಂಟ್ಸ್ ತಂಡವು 209 ರನ್ ಗಳಿಸಿತು.
ಲಕ್ನೊ ತಂಡದ ಇನಿಂಗ್ಸ್ ಆರಂಭಿಸಿದ ಮಾರ್ಷ್ ಹಾಗೂ ಮರ್ಕ್ರಮ್(15 ರನ್) 4.4 ಓವರ್‌ಗಳಲ್ಲಿ 46 ರನ್ ಸೇರಿಸಿ ಬಿರುಸಿನ ಆರಂಭ ಒದಗಿಸಿದರು. ವಿಪ್ರಜ್ ನಿಗಮ್ ಈ ಜೋಡಿಯನ್ನು ಬೇರ್ಪಡಿಸಿದರು.
ವಿಂಡೀಸ್ ಆಟಗಾರ ಪೂರನ್ ಹಾಗೂ ಆಸ್ಟ್ರೇಲಿಯದ ಮಾರ್ಷ್ 2ನೇ ವಿಕೆಟ್‌ಗೆ 87 ರನ್ ಜೊತೆಯಾಟ ನಡೆಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಈ ಇಬ್ಬರು ಹೊರತುಪಡಿಸಿ ಬೇರೆ ಆಟಗಾರರಿಂದ ದೊಡ್ಡ ಜೊತೆಯಾಟ ಮೂಡಿ ಬರಲಿಲ್ಲ. ಮಾರ್ಷ್ ಹಾಗೂ ಪೂರನ್ ಕ್ರೀಸ್‌ನಲ್ಲಿದ್ದಾಗ ಲಕ್ನೊ ತಂಡವು 250ಕ್ಕೂ ಅಧಿಕ ರನ್ ಗಳಿಸುವ ನಿರೀಕ್ಷೆ ಮೂಡಿಸಿತ್ತು. ಆದರೆ ಕೊನೆಯ 7 ಓವರ್‌ಗಳಲ್ಲಿ ಕೇವಲ 49 ರನ್ ನೀಡಿದ ಡೆಲ್ಲಿ ತಂಡವು ಲಕ್ನೊದ 6 ವಿಕೆಟ್‌ಗಳನ್ನು ಉರುಳಿಸಿತು.
ಡೇವಿಡ್ ಮಿಲ್ಲರ್ ಔಟಾಗದೆ 27 ರನ್ ಗಳಿಸಿ ಲಕ್ನೊ ತಂಡದ ಮೊತ್ತವನ್ನು 209ಕ್ಕೆ ತಲುಪಿಸಿದರು. ನಾಯಕ ರಿಷಬ್ ಪಂತ್ ರನ್ ಖಾತೆ ತೆರೆಯುವ ಮೊದಲೇ ಕುಲದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು.
ಪ್ರಸಕ್ತ ಇನಿಂಗ್ಸ್‌ನಲ್ಲಿ ಲಕ್ನೊ 16 ಸಿಕ್ಸರ್‌ಗಳನ್ನು ಸಿಡಿಸಿತು. ಐಪಿಎಲ್ ಇನಿಂಗ್ಸ್‌ನಲ್ಲಿ ಲಕ್ನೊದ ಜಂಟಿ ಗರಿಷ್ಠ ಸಿಕ್ಸರ್ ಇದಾಗಿದೆ. ಇದೇ ಎದುರಾಳಿ ವಿರುದ್ಧ 2023ರಲ್ಲಿ ಲಕ್ನೊ ತಂಡವು 16 ಸಿಕ್ಸರ್‌ಗಳನ್ನು ಸಿಡಿಸಿತ್ತು.
ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್(3-42)ಯಶಸ್ವಿ ಬೌಲರ್ ಎನಿಸಿಕೊಂಡರು. ಕುಲದೀಪ್ ಯಾದವ್(2-20) ಎರಡು ವಿಕೆಟ್ ಪಡೆದರು.