ಐಪಿಎಲ್‌ನಲ್ಲಿ ಸುಂದರ್‌ಗೆ ಅವಕಾಶ ಯಾಕಿಲ್ಲ ಎಂದು ಪ್ರಶ್ನಿಸಿದ ಅಭಿಮಾನಿ: ನನಗೂ ಸೋಜಿಗವೆನಿಸುತ್ತಿದೆ ಎಂದ ಗೂಗಲ್ ಸಿಇಒ ಸುಂದರ್ ಪಿಚ್ಚೈ

ಗೂಗಲ್ ಸಿಇಒ ಸುಂದರ್ ಪಿಚ್ಚೈ | PC : PTI
ಅಹಮದಾಬಾದ್: ಐಪಿಎಲ್ 2025ರ ಋತುವಿನಲ್ಲಿ ಮಂಗಳವಾರ ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವೆ ನಡೆದ ಚೊಚ್ಚಲ ಪಂದ್ಯದ ನಂತರ, ಭಾರತ ತಂಡದ ಆಲ್ ರೌಂಡರ್ ವಾಶಿಂಗ್ಟನ್ ಸುಂದರ್ ಅವರು ಯಾವುದೇ ಐಪಿಎಲ್ ತಂಡಗಳಲ್ಲಿ ಸ್ಥಾನ ಪಡೆಯದಿರುವ ಕುರಿತು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪುಷ್ಕರ್ ಎಂಬವರು, “ವಾಶಿಂಗ್ಟನ್ ಸುಂದರ್ ಭಾರತ ತಂಡದ 15 ಮಂದಿ ಆಟಗಾರರ ಪೈಕಿ ಒಬ್ಬರಾಗಿದ್ದರೂ, ಐಪಿಎಲ್ ನಲ್ಲಿರುವ ಯಾವುದೇ 10 ತಂಡಗಳಲ್ಲಿ ಸ್ಥಾನ ಪಡೆಯದಿರುವುದು ನಿಗೂಢವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟ್ ಗೆ ಅನಿರೀಕ್ಷಿತ ಪ್ರತಿಕ್ರಿಯೆ ನೀಡಿರುವ ಗೂಗಲ್ ಸಿಇಒ ಸುಂದರ್ ಪಿಚ್ಚೈ, “ನನಗೂ ಇದೇ ಸೋಜಿಗವಾಗುತ್ತಿದೆ” ಎಂದು ತಮ್ಮ ಪ್ರತಿಕ್ರಿಯೆಯ ಕೊನೆಯಲ್ಲಿ ನಗುವಿನ ಇಮೋಜಿಯೊಂದಿಗೆ ತಮಾಷೆ ಮಾಡಿದ್ದಾರೆ.
ಸುಂದರ್ ಪಿಚ್ಚೈರ ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯೆ ನೀಡಿರುವ ಮತ್ತೊಬ್ಬ ಬಳಕೆದಾರರು, “ಇದು ಯಾರೂ ಬಗೆಹರಿಸಲಾಗದ ಸುಂದರ್ ರಹಸ್ಯವಾಗಿದೆ!” ಎಂದು ಹಾಸ್ಯ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರರು, “ನೀವೇನಾದರೂ ತಂಡವೊಂದನ್ನು ಖರೀದಿಸಲು ಬಯಸಿದರೆ, ಯಾವ ತಂಡವನ್ನು ಖರೀದಿಸುತ್ತೀರಿ ಹಾಗೂ ಆ ತಂಡಕ್ಕೆ ಏನೆಂದು ಹೆಸರಿಡುತ್ತೀರಿ?” ಎಂದು ಸುಂದರ್ ಪಿಚ್ಚೈರನ್ನು ಪ್ರಶ್ನಿಸಿದ್ದಾರೆ.
“ಕನಿಷ್ಠ ಪಕ್ಷ ನೀವು ಬ್ಯಾಟರ್ ಅಥವಾ ಬೌಲರೋ ಎಂಬುದನ್ನಾದರೂ ಸ್ಪಷ್ಟಪಡಿಸಿ” ಎಂದು ಮೂರನೆಯ ಬಳಕೆದಾರರು ಸುಂದರ್ ಪಿಚ್ಚೈರನ್ನು ಕಿಚಾಯಿಸಿದ್ದಾರೆ. ಅದಕ್ಕೆ ಪ್ರತಿಯಾಗಿ, “ಕ್ಯಾಲಿಫೋರ್ನಿಯಾ ಸುಂದರ್, ವಾಶಿಂಗ್ಟನ್ ಸುಂದರ್ ಬಗ್ಗೆ ಸೋಜಿಗ ವ್ಯಕ್ತಪಡಿಸುತ್ತಿದ್ದಾರೆ” ಎಂದು ನಾಲ್ಕನೆಯ ಬಳಕೆದಾರರು ಕಾಲೆಳೆದಿದ್ದಾರೆ.
ಮಂಗಳವಾರ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಚೊಚ್ಚಲ ಪಂದ್ಯದಲ್ಲಿ ಗುಜರಾತ್ ನ ತವರು ತಂಡವಾದ ಗುಜರಾತ್ ಟೈಟನ್ಸ್ ನಿರಾಶೆ ಅನುಭವಿಸಿತು. ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್ ಟಾಸ್ ಗೆದ್ದರೂ, ಎದುರಾಳಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಬ್ಯಾಟಿಂಗ್ ಮಾಡುವ ಅವಕಾಶ ನೀಡಿದ್ದು ತಂಡದ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು.
ನಾಯಕ ಶ್ರೇಯಸ್ ಅಯ್ಯರ್ ಅವರ ಅಜೇಯ 97, ಪ್ರಿಯಾಂಶ್ ಆರ್ಯ (47) ಹಾಗೂ ಶಶಾಂಕ್ ಸಿಂಗ್ (ಅಜೇಯ 44) ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು 5 ವಿಕೆಟ್ ಗಳ ನಷ್ಟಕ್ಕೆ 243 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. ಈ ಮೊತ್ತವನ್ನು ಗುಜರಾತ್ ಟೈಟನ್ಸ್ ತಂಡ ವೀರೋಚಿತವಾಗಿ ಬೆನ್ನಟ್ಟಿತಾದರೂ, ಪಂದ್ಯದ ಕೊನೆಗೆ 11 ರನ್ ಗಳಿಂದ ತನ್ನ ತವರಿನಲ್ಲೇ ಪರಾಭವಗೊಂಡಿತು.