ನಾಳೆ ಆರ್ ಸಿ ಬಿಗೆ ಚೆನ್ನೈ ಕಿಂಗ್ಸ್ ಕಠಿಣ ಸವಾಲು

PC | @cricbuzz
ಚೆನ್ನೈ : ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿ ಬಿ)ತಂಡ ಶುಕ್ರವಾರ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಭಾರೀ ಸವಾಲನ್ನು ಎದುರಿಸಲಿದೆ. 17 ವರ್ಷಗಳಿಂದ ಚೆನ್ನೈನಲ್ಲಿ ಎದುರಿಸುತ್ತಿರುವ ಗೆಲುವಿನ ಬರವನ್ನು ನೀಗಿಸಿಕೊಳ್ಳುವ ಗುರಿ ಇಟ್ಟುಕೊಂಡಿದೆ.
ಆರ್ ಸಿ ಬಿ ತಂಡವು 2008ರ ಮೊದಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚಿಪಾಕ್ ನ ಚಿದಂಬರಂ ಸ್ಟೇಡಿಯಮ್ ನಲ್ಲಿ ಸಿ ಎಸ್ ಕೆ ವಿರುದ್ಧ ಏಕೈಕ ಪಂದ್ಯ ಗೆಲ್ಲುವಲ್ಲಿ ಶಕ್ತವಾಗಿತ್ತು.
ಚಿದಂಬರಂ ಕ್ರೀಡಾಂಗಣವು ಸ್ಪಿನ್ ಸ್ನೇಹಿಯಾಗಿದ್ದು, ಸಿ ಎಸ್ ಕೆ ಸಾಮರ್ಥ್ಯಕ್ಕೆ ತಕ್ಕಂತೆ ಇದೆ. ಆರ್.ಅಶ್ವಿನ್ ಪುನರಾಗಮನದಿಂದ ಚೆನ್ನೈ ತಂಡದ ಸ್ಪಿನ್ ವಿಭಾಗವು ಮತ್ತಷ್ಟು ಬಲಿಷ್ಠವಾಗಿದೆ. ರವೀಂದ್ರ ಜಡೇಜ ಹಾಗೂ ಅಫ್ಘಾನಿಸ್ತಾನದ ಭರವಸೆಯ ಸ್ಪಿನ್ನರ್ ನೂರ್ ಅಹ್ಮದ್ ಜೊತೆ ಸ್ಪಿನ್ ವಿಭಾಗಕ್ಕೆ ಅಶ್ವಿನ್ ಶಕ್ತಿ ತುಂಬುತ್ತಿದ್ದಾರೆ. ಈ ಮೂವರು ಸ್ಪಿನ್ನರ್ ಗಳು ಮುಂಬೈ ಇಂಡಿಯನ್ಸ್ ವಿರುದ್ಧ ತಮ್ಮ ಶಕ್ತಿ ಪ್ರದರ್ಶಿಸಿದ್ದು, 11 ಓವರ್ ಗಳಲ್ಲಿ 70 ರನ್ ಗೆ ಐದು ವಿಕೆಟ್ಗಳನ್ನು ಉರುಳಿಸಿದ್ದರು.
ರಜತ್ ಪಾಟಿದಾರ್ ನೇತೃತ್ವದ ಆರ್ ಸಿ ಬಿ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ ಅವರಿದ್ದು, ಸಿ ಎಸ್ ಕೆ ತಂಡದ ಸ್ಪಿನ್ ಭೀತಿಯನ್ನು ಎದುರಿಸಲು ಅಮೋಘ ಕೌಶಲ್ಯ ಪ್ರದರ್ಶಿಸಬೇಕಾದ ಅಗತ್ಯವಿದೆ.
ವಿರಾಟ್ ಕೊಹ್ಲಿ ಇತ್ತೀಚೆಗಿನ ದಿನಗಳಲ್ಲಿ ಸ್ಪಿನ್ನರ್ ವಿರುದ್ಧ ಗಮನಾರ್ಹ ಸುಧಾರಣೆ ಕಂಡಿದ್ದಾರೆ. ಕೊಹ್ಲಿ ಒಬ್ಬರೇ ಹೊಣೆಗಾರಿಕೆ ನಿಭಾಯಿಸಲು ಸಾಧ್ಯವಿಲ್ಲ. ಆರ್ ಸಿ ಬಿ ಸ್ಪರ್ಧಾತ್ಮಕ ಮೊತ್ತ ಗಳಿಸಲು ಫಿಲ್ ಸಾಲ್ಟ್, ಕೃನಾಲ್ ಪಾಂಡ್ಯ ಹಾಗೂ ಟಿಮ್ ಡೇವಿಡ್ ದೊಡ್ಡ ಕೊಡುಗೆ ನೀಡುವ ಅಗತ್ಯವಿದೆ.
ಚಿಪಾಕ್ ಪಿಚ್ ನಲ್ಲಿ ಮೇಲುಗೈ ಸಾಧಿಸಲು ಆರ್ ಸಿ ಬಿ ತಂಡವು ತನ್ನ ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡುವ ಅಗತ್ಯವಿದೆ. ಎಡಗೈ ಸ್ಪಿನ್ನರ್ ಜೇಕಬ್ ಬೆಥೆಲ್ ಸೇರ್ಪಡೆಯು ಸ್ಪಿನ್ ಗೆ ಹೆಚ್ಚುವರಿ ಆಯ್ಕೆ ನೀಡಬಹುದು. ಭುವನೇಶ್ವರ ಕುಮಾರ್ ಫಿಟ್ನೆಸ್ ಪ್ರಮುಖ ಅಂಶವಾಗಿದೆ. ಈ ಹಿಂದಿನ ಪಂದ್ಯದಿಂದ ವಂಚಿತರಾಗಿದ್ದ ಅನುಭವಿ ವೇಗದ ಬೌಲರ್ ಕುಮಾರ್ ಅವರು ಫಿಟ್ ಆದರೆ ರಸಿಖ್ ಸಲಾಮ್ ಸ್ಥಾನ ತೆರವುಗೊಳಿಸಬೇಕಾಗಬಹುದು. ಸ್ಪಿನ್ ಸ್ನೇಹಿ ಪಿಚ್ ನಲ್ಲಿ ಲೆಗ್ ಸ್ಪಿನ್ ಆಲ್ರೌಂಡರ್ ಮೋಹಿತ್ ರಥಿ ಅಥವಾ ಎಡಗೈ ಸ್ಪಿನ್ನರ್ ಸ್ವಪ್ನಿಲ್ ಸಿಂಗ್ ರನ್ನು ಆಡಿಸುವ ಸಾಧ್ಯತೆಯಿದೆ.
►ಹೆಡ್-ಟು-ಹೆಡ್
ಐತಿಹಾಸಿಕವಾಗಿ ಆರ್ ಸಿ ಬಿ ವಿರುದ್ಧದ ಹೆಡ್-ಟು-ಹೆಡ್ ದಾಖಲೆಯಲ್ಲಿ ಸಿ ಎಸ್ ಕೆ ಮೇಲುಗೈ ಸಾಧಿಸಿದ್ದು, 33 ಪಂದ್ಯಗಳ ಪೈಕಿ 21ರಲ್ಲಿ ಜಯ ಸಾಧಿಸಿದೆ. ಆರ್ ಸಿ ಬಿ ಕೇವಲ 11ರಲ್ಲಿ ಗೆಲುವು ಪಡೆಯಲು ಶಕ್ತವಾಗಿದೆ. ಚೆನ್ನೈನಲ್ಲಿ ಆರ್ ಸಿ ಬಿ ಈ ತನಕ ಆಡಿರುವ 9 ಪಂದ್ಯಗಳ ಪೈಕಿ ಒಂದರಲ್ಲಿ ಮಾತ್ರ ಜಯ ಸಾಧಿಸಿದ್ದು, ಈ ಬಾರಿ ಸೋಲಿನ ಸುಳಿಯಿಂದ ಹೊರಬರಬಹುದೇ?, ಸಿ ಎಸ್ ಕೆ ತವರು ಮೈದಾನದಲ್ಲಿ ತನ್ನ ಪ್ರಾಬಲ್ಯ ಮುಂದುವರಿಸುವುದೇ?ಎಂಬ ಪ್ರಶ್ನೆ ಉದ್ಭವಿಸಿದೆ.
►ತಂಡಗಳು
*ಚೆನ್ನೈ ಸೂಪರ್ ಕಿಂಗ್ಸ್(ಸಂಭಾವ್ಯ): 1. ರಚಿನ್ ರವೀಂದ್ರ, 2. ಋತುರಾಜ್ ಗಾಯಕ್ವಾಡ್(ನಾಯಕ), 3. ರಾಹುಲ್ ತ್ರಿಪಾಠಿ, 4. ದೀಪಕ್ ಹೂಡಾ, 5. ಶಿವಂ ದುಬೆ, 6. ಸ್ಯಾಮ್ ಕರನ್, 7. ರವೀಂದ್ರ ಜಡೇಜ, 8. ಎಂ.ಎಸ್. ಧೋನಿ(ವಿಕೆಟ್ ಕೀಪರ್),9. ಆರ್.ಅಶ್ವಿನ್, 10. ನಾಥನ್ ಎಲ್ಲಿಸ್, 11. ನೂರ್ ಅಹ್ಮದ್, 12. ಖಲೀಲ್ ಅಹ್ಮದ್.
*ರಾಯಲ್ ಚಾಲೆಂಜರ್ಸ್ ಬೆಂಗಳೂರು(ಸಂಭಾವ್ಯ): 1. ವಿರಾಟ್ ಕೊಹ್ಲಿ, 2. ಫಿಲ್ ಸಾಲ್ಟ್, 3. ರಜತ್ ಪಾಟಿದಾರ್(ನಾಯಕ), 4. ದೇವದತ್ತ ಪಡಿಕ್ಕಲ್/ಮೋಹಿತ್ ರಥೀ, 5. ಲಿಯಾಮ್ ಲಿವಿಂಗ್ಸ್ಟೋನ್, 6. ಜಿತೇಶ್ ಶರ್ಮಾ(ವಿಕೆಟ್ ಕೀಪರ್), 7. ಟಿಮ್ ಡೇವಿಡ್,8. ಕೃನಾಲ್ ಪಾಂಡ್ಯ, 9. ರಸಿಖ್ ಸಲಾಮ್/ಭುವನೇಶ್ವರ ಕುಮಾರ್/ಸ್ವಪ್ನಿಲ್ ಸಿಂಗ್, 10. ಜೋಶ್ ಹೇಝಲ್ವುಡ್, 11. ಯಶ್ ದಯಾಳ್, 12. ಸುಯಶ್ ಶರ್ಮಾ.