ಐಸಿಸಿ ವರಮಾನ ಹಂಚಿಕೆ ನೀತಿ ಪ್ರಶ್ನಿಸಿದ ವಿಶ್ವ ಕ್ರಿಕೆಟಿಗರ ಅಸೋಸಿಯೇಶನ್

PC : ICC
ಮುಂಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಪ್ರಸಕ್ತ ವರಮಾನ ಹಂಚಿಕೆ ಮಾದರಿಯು ಲೋಪದೋಷಗಳಿಂದ ಕೂಡಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ(ಬಿಸಿಸಿಐ) ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ವಿಶ್ವ ಕ್ರಿಕೆಟಿಗರ ಅಸೋಸಿಯೇಶನ್ (ಡಬ್ಲ್ಯುಸಿಎ) ಆರೋಪಿಸಿದೆ.
ಪ್ರಸಕ್ತ ಮಾದರಿಯಲ್ಲಿ ಐಸಿಸಿ ವರಮಾನದ ಸಿಂಹ ಪಾಲನ್ನು (38.5 ಶೇಕಡ) ಬಿಸಿಸಿಐ ಪಡೆದುಕೊಳ್ಳುತ್ತಿದೆ ಎಂದು ಬುಧವಾರ ಬಿಡುಗಡೆಗೊಂಡ ‘ಪ್ರೊಟೆಕ್ಟಿಂಗ್ ಹಿಸ್ಟರಿ, ಎಂಬ್ರೇಸಿಂಗ್ ಚೇಂಜ್: ಎ ಯೂನಿಫೈಡ್, ಕೋಹರಂಟ್ ಗ್ಲೋಬಲ್ ಫ್ಯೂಚರ್’ ಎಂಬ ತಲೆಬರಹದ ವರದಿಯಲ್ಲಿ ಅಸೋಸಿಯೇಶನ್ ಹೇಳಿದೆ.
‘‘ಐಸಿಸಿ ವರಮಾನದ 50 ಶೇಕಡವನ್ನು ಮೂರು ದೊಡ್ಡ ದೇಶಗಳಿಗೆ ವಿತರಿಸಲಾಗುತ್ತಿದೆ’’ ಎಂದು 30 ಪುಟಗಳ ವರದಿ ಬೆಟ್ಟು ಮಾಡಿದೆ.
ವರದಿಯು ಟಿ20 ಲೀಗ್ಗಳ ಬಗ್ಗೆಯೂ ಗಮನ ಹರಿಸಿದೆ. ‘‘ಜಾಗತಿಕ ಕ್ರಿಕೆಟ್ ಆರ್ಥಿಕತೆಯ ಅರ್ಧದಷ್ಟನ್ನು ಐಪಿಎಲ್ ಒಂದೇ ಪೂರೈಸುತ್ತದೆ. ಆದರೆ, ಅದು ತನ್ನ ವರಮಾನದ 0.3 ಶೇಕಡದಷ್ಟನ್ನು ಮಾತ್ರ ಇತರ ದೇಶಗಳೊಂದಿಗೆ ಹಂಚಿಕೊಳ್ಳುತ್ತದೆ ಮತ್ತು 10 ಶೇ.ಕ್ಕಿಂತಲೂ ಕಡಿಮೆ ಭಾಗವನ್ನು ಆಟಗಾರರಿಗೆ ನೀಡುತ್ತದೆ’’ ಎಂದು ವರದಿ ಹೇಳಿದೆ.
ಆದರೆ, ಪೌಲ್ ಮಾರ್ಶ್ ನೇತೃತ್ವದ ಸಮಿತಿಯ ವರದಿಗೆ ಕ್ರಿಕೆಟ್ ಜಗತ್ತಿನ ಪರಿಣತರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ನ ಒಟ್ಟಾರೆ ಬೆಳವಣಿಗೆಗೆ ಭಾರತ ನೀಡುತ್ತಿರುವ ದೇಣಿಗೆಯ ಬಗ್ಗೆ ವರದಿ ಕುರುಡಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘‘ಐಸಿಸಿಯ ಒಟ್ಟಾರೆ ವರಮಾನದ 85-90 ಶೇಕಡದಷ್ಟು ಬಿಸಿಸಿಐಯಿಂದ ಬರುತ್ತದೆ. ಅದರಿಂದ 38.5 ಶೇಕಡ ತೆಗೆಯುವುದು ಹೆಚ್ಚೇ? ಪ್ರಸಕ್ತ ಕ್ರಿಕೆಟ್ ಚಕ್ರದ ಮಾಧ್ಯಮ ಹಕ್ಕುಗಳನ್ನು ಬೇರೆ ಬೇರೆಯಾಗಿ ಐಸಿಸಿ ಮಾರಾಟ ಮಾಡಿರುವುದಕ್ಕೆ ಕಾರಣವಿದೆ. ಅದು ಭಾರತೀಯ ಮಾರುಕಟ್ಟೆಯ ಲಾಭವನ್ನು ಪಡೆಯುವುದಕ್ಕಾಗಿ. ಅದರಿಂದ ದೊರಕಿದ ಲಾಭವನ್ನು ಎಲ್ಲರೂ ನೋಡಬಹುದಾಗಿದೆ. ಇತರ ದೇಶಗಳಲ್ಲಿನ ಮಾರಾಟದಿಂದ ಎಷ್ಟು ಹಣ ಬಂದಿದೆ ಎನ್ನುವುದನ್ನು ಮೌಲ್ಯಮಾಪನ ಮಾಡಿದರೆ ಭಾರತದ ಪ್ರಾಮುಖ್ಯತೆ ಅರ್ಥವಾಗುತ್ತದೆ’’ ಎಂದು ಕ್ರಿಕೆಟ್ ಮಾರುಕಟ್ಟೆ ವ್ಯಕ್ತಿಯೊಬ್ಬರು ಹೇಳಿದ್ದಾರೆ.