IPL 2025 | ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಗೆ 11 ರನ್ ಗಳ ಜಯ

Update: 2025-03-25 23:18 IST
IPL 2025 | ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಗೆ 11 ರನ್ ಗಳ ಜಯ

PC | @IPL

  • whatsapp icon

ಅಹ್ಮದಾಬಾದ್ : ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯವೊಂದರಲ್ಲಿ, ನಾಯಕ ಶ್ರೇಯಸ್ ಅಯ್ಯರ್‌ರ ಅಜೇಯ ಅರ್ಧ ಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು 11 ರನ್‌ಗಳ ಅಂತರದಿಂದ ಸೋಲಿಸಿದೆ.

ಶ್ರೇಯಸ್ ಅಯ್ಯರ್ ಕೇವಲ ಮೂರು ರನ್‌ಗಳಿಂದ ಶತಕ ವಂಚಿತರಾದರು. ಮುಂದೆ ನಿಂತು ತಂಡವನ್ನು ಮುನ್ನಡೆಸಿದ ಅವರು 42 ಎಸೆತಗಳಲ್ಲಿ 97 ರನ್‌ಗಳನ್ನು ಸಿಡಿಸಿ ಅಜೇಯವಾಗಿ ಉಳಿದರು.

ಗೆಲುವಿಗೆ 244 ರನ್‌ಗಳ ಕಠಿಣ ಗುರಿಯನ್ನು ಪಡೆದ ಗುಜರಾತ್ ಟೈಟಾನ್ಸ್‌ಗೆ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 232 ರನ್ ಗಳಿಸಲು ಸಾಧ್ಯವಾಯಿತು.

ಸಾಯಿ ಸುದರ್ಶನ್ ಮತ್ತು ನಾಯಕ ಶುಭಮನ್ ಗಿಲ್ ಉತ್ತಮ ಆರಂಭ ನೀಡಿದರಾದರೂ, ರನ್ ದರವನ್ನು ಕಾಪಾಡಿಕೊಂಡು ಬರಲು ನಂತರದ ಬ್ಯಾಟರ್‌ಗಳಿಗೆ ಸಾಧ್ಯವಾಗಲಿಲ್ಲ. ಸಾಯಿ ಸುದರ್ಶನ್ (41 ಎಸೆತಗಳಲ್ಲಿ 74 ರನ್) ಮತ್ತು ಗಿಲ್ (14 ಎಸೆತಗಳಲ್ಲಿ 33 ರನ್) ಮೊದಲ ವಿಕೆಟ್‌ಗೆ 61 ರನ್‌ಗಳನ್ನು ಸೇರಿಸಿದರು. ಬಳಿಕ ಸುದರ್ಶನ್ ಮತ್ತು ಜೋಸ್ ಬಟ್ಲರ್ (33 ಎಸೆತಗಳಲ್ಲಿ 54) ಎರಡನೇ ವಿಕೆಟ್‌ಗೆ 84 ರನ್‌ಗಳನ್ನು ಕೂಡಿಸಿದರು.

ಶರ್ಫಾನ್ ರುದರ್‌ಫೋರ್ಡ್ 28 ಎಸೆತಗಳಲ್ಲಿ 46 ರನ್‌ಗಳನ್ನು ಗಳಿಸಿದರು. ಅಂತಿಮವಾಗಿ ಗುಜರಾತ್‌ಗೆ 11 ರನ್‌ಗಳ ಕೊರತೆ ಉಂಟಾಯಿತು.

ಅರ್ಶದೀಪ್ ಸಿಂಗ್ 2 ವಿಕೆಟ್‌ಗಳನ್ನು ಉರುಳಿಸಿದರು.

ಇದಕ್ಕೂ ಮೊದಲು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್‌ರ ಅಮೋಘ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಕೇವಲ 5 ವಿಕೆಟ್‌ಗಳ ನಷ್ಟಕ್ಕೆ 243 ರನ್‌ಗಳನ್ನು ಕಲೆ ಹಾಕಿತು.

ತನ್ನ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡುತ್ತಿರುವ ಆರಂಭಿಕ ಪ್ರಿಯಾಂಶ್ ಆರ್ಯ ಪಂಜಾಬ್ ಕಿಂಗ್ಸ್‌ಗೆ ಉತ್ತಮ ಆರಂಭವನ್ನು ನೀಡಿದರು. ಅವರು 23 ಎಸೆತಗಳಲ್ಲಿ 47 ರನ್‌ಗಳನ್ನು ಸಿಡಿಸಿದರು. ಬಳಿಕ, ಒಂದು ಹಂತದಲ್ಲಿ ಪಂಜಾಬ್ ಕಿಂಗ್ಸ್ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ, ಅಯ್ಯರ್ ಮಾತ್ರ ತನ್ನ ಬ್ಯಾಟಿಂಗನ್ನು ತನ್ನದೇ ಶೈಲಿಯಲ್ಲಿ ಮುಂದುವರಿಸಿ ದೊಡ್ಡ ಮೊತ್ತದತ್ತ ತಂಡವನ್ನು ಮುನ್ನಡೆಸಿದರು.

ಕೊನೆಯಲ್ಲಿ, ಶಶಾಂಕ್ ಸಿಂಗ್ 16 ಎಸೆತಗಳಲ್ಲಿ 44 ರನ್‌ಗಳನ್ನು ಸಿಡಿಸಿ ತಂಡವನ್ನು ಸುಭದ್ರ ಸ್ಥಿತಿಯತ್ತ ಒಯ್ದರು.

ಗುಜರಾತ್ ಟೈಟಾನ್ಸ್ ಪರವಾಗಿ ಮೂರು ವಿಕೆಟ್‌ಗಳನ್ನು ಉರುಳಿಸಿದ ಸಾಯಿ ಕಿಶೋರ್ ಯಶಸ್ವಿ ಬೌಲರ್ ಎನಿಸಿದರು. ರಶೀದ್ ಖಾನ್ ಮತ್ತು ಕಗಿಸೊ ರಬಡ ತಲಾ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್ :

ಪಂಜಾಬ್ ಕಿಂಗ್ಸ್ (20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ) 243 ರನ್‌ ಗಳಿಸಿತು.

ಪ್ರಿಯಾಂಶ್ ಆರ್ಯ 47, ಶ್ರೇಯಸ್ ಅಯ್ಯರ್ 97 (ಅಜೇಯ), ಮಾರ್ಕಸ್ ಸ್ಟೋಯಿನಿಸ್ 20, ಶಶಾಂಕ್ ಸಿಂಗ್ 44 (ಅಜೇಯ)

ಸಾಯಿ ಕಿಶೋರ್ 3-30 

ಗುಜರಾತ್ ಟೈಟಾನ್ಸ್ (20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ) 232 ರನ್‌ ಗಳಿಸಿತು.

ಸಾಯಿ ಸುದರ್ಶನ್ 74, ಶುಭಮನ್ ಗಿಲ್ 33, ಜೋಸ್ ಬಟ್ಲರ್ 54, ಶರ್ಫಾನ್ ರುದರ್‌ಫೋರ್ಡ್ 46

ಅರ್ಶದೀಪ್ ಸಿಂಗ್ 2-36

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News