ಹೈದರಾಬಾದ್ ವಿರುದ್ಧ ಪುಟಿದೇಳುವ ವಿಶ್ವಾಸದಲ್ಲಿ ರಿಷಭ್ ಪಂತ್ ಬಳಗ

ರಿಷಭ್ ಪಂತ್ | PC : PTI
ಹೈದರಾಬಾದ್: ತನ್ನ ಮೊದಲ ಪಂದ್ಯದಲ್ಲಿ ಕೂದಲೆಳೆ ಅಂತರದಿಂದ ಸೋತಿರುವ ಲಕ್ನೊ ಸೂಪರ್ ಜಯಂಟ್ಸ್ ತಂಡವು ಗುರುವಾರ ರಾಜೀವ್‌ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಮ್‌ನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಕಠಿಣ ಸವಾಲು ಎದುರಿಸಲಿದೆ.
ಕಳೆದ ವರ್ಷ ರನ್ನರ್ಸ್ ಅಪ್ ಆಗಿದ್ದ ಹೈದರಾಬಾದ್ ತಂಡವು ರಾಜಸ್ಥಾನ ತಂಡವನ್ನು 44 ರನ್ ಅಂತರದಿಂದ ಮಣಿಸುವ ಮೂಲಕ ತನ್ನ ಅಭಿಯಾನ ಆರಂಭಿಸಿದೆ. ಸತತ ಎರಡನೇ ಗೆಲುವಿನತ್ತ ಚಿತ್ತಹರಿಸಿದೆ.
ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಹೈದರಾಬಾದ್ ತಂಡವು 286 ರನ್ ಕಲೆ ಹಾಕಿತ್ತು. ಹೈದರಾಬಾದ್‌ನ ಹೊಸ ಆಟಗಾರ ಇಶಾನ್ ಕಿಶನ್ ಮಿಂಚಿನ ಶತಕ ಗಳಿಸಿ ತನ್ನ ಪುನರಾಗಮನ ಸಾರಿದರು. ಸ್ಟಾರ್ ಬ್ಯಾಟರ್ ಗಳಾದ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಹಾಗೂ ಹೆನ್ರಿಕ್ ಕ್ಲಾಸೆನ್ ತನ್ನ ಆಕ್ರಮಣಕಾರಿ ಆಟವನ್ನು ಕಾಯ್ದುಕೊಂಡರು.
ಹೈದರಾಬಾದ್ ತಂಡದ ಭೀತಿಯನ್ನು ಎದುರಿಸಲು ಲಕ್ನೊ ತಂಡದ ಬೌಲಿಂಗ್ ಘಟಕವು ದಿಟ್ಟ ರಣತಂತ್ರವನ್ನು ರೂಪಿಸಬೇಕಾಗಿದೆ.
ಪಂದ್ಯಾವಳಿಯಲ್ಲಿ ಈಗಾಗಲೇ ಸಿಕ್ಸರ್ ಗಳ ಸುರಿಮಳೆಯಾಗಿದ್ದು, ಈ ವರ್ಷದ ಐಪಿಎಲ್ ನಲ್ಲಿ ದೊಡ್ಡ ಸ್ಕೋರ್ ದಾಖಲಾಗುತ್ತಿವೆ.
ಹೈದರಾಬಾದ್ ತಂಡದ ಆಕ್ರಮಣಕಾರಿ ಬ್ಯಾಟಿಂಗ್ ಕ್ರಮಾಂಕದ ವಿರುದ್ಧ ಲಕ್ನೊ ತಂಡದ ತ್ರಿವಳಿ ಸ್ಪಿನ್ನರ್ ಗಳಾದ ರವಿ ಬಿಷ್ಣೋಯಿ, ಮಣಿಮಾರನ್ ಸಿದ್ದಾರ್ಥ್ ಹಾಗೂ ದಿಗ್ವೇಶ್ ರಥಿ ಅವರು ನಿಖರ ಹಾಗೂ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸುವ ಅಗತ್ಯವಿದೆ.
ರಿಷಭ್ ಪಂತ್ ನಾಯಕತ್ವದ ಲಕ್ನೊ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತನ್ನ ಆರಂಭಿಕ ಪಂದ್ಯದಲ್ಲಿ ಭರವಸೆಯ ಪ್ರದರ್ಶನ ನೀಡಿದ್ದರೂ ಮಧ್ಯಮ ಸರದಿಯ ಕುಸಿತವು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು.
ಮಿಚೆಲ್ ಮಾರ್ಷ್ ಹಾಗೂ ನಿಕೊಲಸ್ ಪೂರನ್ ಬಿರುಸಿನ ಆರಂಭ ಒದಗಿಸಿದರೂ ಮಧ್ಯಮ ಓವರ್ ನಲ್ಲಿ ಡೆಲ್ಲಿ ತಂಡ ತಿರುಗೇಟು ನೀಡಿತು.
ತನ್ನ ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿರುವ ನಾಯಕ ಪಂತ್ ತಪ್ಪನ್ನು ತಿದ್ದಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಬ್ಯಾಟಿಂಗ್‌ನಲ್ಲಿ ಶೂನ್ಯ ಸಂಪಾದಿಸಿದ್ದ ಪಂತ್, ಪೈಪೋಟಿಯುತ ಪಂದ್ಯದಲ್ಲಿ ನಿರ್ಣಾಯಕವಾಗಿರುವ ಸ್ಟಂಪಿಂಗ್ ಅವಕಾಶವನ್ನು ತಪ್ಪಿಸಿಕೊಂಡಿದ್ದರು.
ತವರು ಮೈದಾನದಲ್ಲಿ ಆಡುತ್ತಿರುವ ಹೈದರಾಬಾದ್ ತಂಡವನ್ನು ಹಿಮ್ಮೆಟ್ಟಿಸಲು ಲಕ್ನೊ ತಂಡವು ತನ್ನ ಮಧ್ಯಮ ಸರದಿಯ ವೈಫಲ್ಯ ಹಾಗೂ ಬೌಲಿಂಗ್ ರಣನೀತಿಯನ್ನು ಸರಿಪಡಿಸಿಕೊಳ್ಳುವ ಅಗತ್ಯವಿದೆ. ಬೌಲಿಂಗ್ ಸಂಪನ್ಮೂಲಗಳು ಅದರಲ್ಲೂ ಮುಖ್ಯವಾಗಿ ಶಾರ್ದುಲ್ ಠಾಕೂರ್ ಅವರ ಸ್ವಿಂಗ್ ಬೌಲಿಂಗ್ ಅನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಲಕ್ನೊದ ಯಶಸ್ಸಿನಲ್ಲಿ ನಿರ್ಣಾಯಕವಾಗಿದೆ.
►ಹೆಡ್-ಟು-ಹೆಡ್
ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಲಕ್ನೊ ಸೂಪರ್ ಜಯಂಟ್ಸ್ ತಂಡಗಳು 4 ಐಪಿಎಲ್ ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಲಕ್ನೊ 3ರಲ್ಲಿ ಜಯ ಸಾಧಿಸಿ ಮೇಲುಗೈ ಸಾಧಿಸಿದ್ದರೆ, ಹೈದರಾಬಾದ್ ತಂಡವು ಕೇವಲ 1 ಬಾರಿ ಜಯ ದಾಖಲಿಸಿದೆ.
►ಪಿಚ್ ಹಾಗೂ ವಾತಾವರಣ
ರಾಜೀವ್‌ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಮ್ ಬ್ಯಾಟರ್ ಗಳಿಗೆ ಹೆಚ್ಚು ಫೇವರ್ ಆಗಿದೆ. ಸ್ಟ್ರೋಕ್‌ಪ್ಲೇಗೆ ಪಿಚ್ ನೆರವಾಗುತ್ತದೆ. ಇತ್ತೀಚೆಗಿನ ಪಂದ್ಯಗಳಲ್ಲಿ ತಂಡಗಳು 200ಕ್ಕೂ ಅಧಿಕ ರನ್ ಗಳಿಸಿವೆ. ಹೈದರಾಬಾದ್-ರಾಜಸ್ಥಾನ ನಡುವಿನ ಪಂದ್ಯದಲ್ಲಿ ಉಭಯ ತಂಡಗಳು ಒಟ್ಟು 528 ರನ್ ಗಳಿಸಿದ್ದವು.
ಆಕಾಶ ಶುಭ್ರವಾಗಿದ್ದು, ಹಗಲಿನಲ್ಲಿ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರುವ ನಿರೀಕ್ಷೆ ಇದೆ.
► ಸನ್‌ರೈಸರ್ಸ್ ಹೈದರಾಬಾದ್(ಸಂಭಾವ್ಯ ಇಲೆವೆನ್): ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ನಿತಿಶ್ ಕುಮಾರ್ ರೆಡ್ಡಿ, ಹೆನ್ರಿಕ್ ಕ್ಲಾಸೆನ್(ವಿಕೆಟ್ ಕೀಪರ್), ಅಂಕಿತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮಿನ್ಸ್(ನಾಯಕ), ಸಿಮರ್‌ಜೀತ್ ಸಿಂಗ್, ಹರ್ಷಲ್ ಪಟೇಲ್, ಮುಹಮ್ಮದ್ ಶಮಿ.
►ಲಕ್ನೊ ಸೂಪರ್ ಜಯಂಟ್ಸ್ (ಸಂಭಾವ್ಯ ಇಲೆವೆನ್): ಐಡೆನ್ ಮರ್ಕ್ರಮ್, ಮಿಚೆಲ್ ಮಾರ್ಷ್, ನಿಕೊಲಸ್ ಪೂರನ್, ರಿಷಭ್ ಪಂತ್(ನಾಯಕ, ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಆಯುಷ್ ಬದೋನಿ, ಶಾರ್ದುಲ್ ಠಾಕೂರ್, ಶಹಬಾಝ್ ಅಹ್ಮದ್, ರವಿ ಬಿಷ್ಣೋಯ್, ದಿವ್ಗೇಶ್ ಸಿಂಗ್, ಪ್ರಿನ್ಸ್ ಯಾದವ್.