ಪಾಕಿಸ್ತಾನದ ವಿರುದ್ಧ ಟಿ20 ಸರಣಿ ಜಯಿಸಿದ ನ್ಯೂಝಿಲ್ಯಾಂಡ್

PC : NDTV
ವೆಲ್ಲಿಂಗ್ಟನ್: ಆರಂಭಿಕ ಬ್ಯಾಟರ್ ಟಿಮ್ ಸೀಫರ್ಟ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧದ ಐದನೇ ಹಾಗೂ ಕೊನೆಯ ಟಿ20 ಪಂದ್ಯವನ್ನು 8 ವಿಕೆಟ್‌ಗಳಿಂದ ಸುಲಭವಾಗಿರುವ ಗೆದ್ದುಕೊಂಡಿರುವ ನ್ಯೂಝಿಲ್ಯಾಂಡ್ ತಂಡವು ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡಿದೆ.
ಬುಧವಾರ ನಡೆದ ಪಂದ್ಯದಲ್ಲಿ ಗೆಲ್ಲಲು 129 ರನ್ ಗುರಿ ಪಡೆದಿದ್ದ ನ್ಯೂಝಿಲ್ಯಾಂಡ್ ತಂಡವು ಸೀಫರ್ಸ್ ಅರ್ಧಶತಕದ(97 ರನ್, 38 ಎಸೆತ, 6 ಬೌಂಡರಿ, 10 ಸಿಕ್ಸರ್)ನೆರವಿನಿಂದ 10 ಓವರ್ ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 131 ರನ್ ಗಳಿಸಿದೆ.
ಜಹಾನ್ ದಾದ್ ಖಾನ್ ಎಸೆದ ಮೊದಲ ಓವರ್ ನಲ್ಲಿ 18 ರನ್ ಸೂರೆಗೈದ ಸೀಫರ್ಟ್ ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ನಡೆಸಿದರು. ಸೀಫರ್ಟ್ ಆರಂಭಿಕ ಜೊತೆಗಾರ ಫಿನ್ ಅಲ್ಲೆನ್ 2ನೇ ಓವರ್ ನಲ್ಲಿ 14 ರನ್ ಗಳಿಸಿದರು. ಜಹಾನ್ ದಾದ್ ತನ್ನ 2ನೇ ಓವರ್ ಎಸೆಯಲು ಆಗಮಿಸಿದಾಗ ಮತ್ತೊಮ್ಮೆ ಮುಗಿಬಿದ್ದ ಸೀಫರ್ಟ್ 3 ಸಿಕ್ಸರ್ ಗಳ ಸಹಿತ 25 ರನ್ ಚಚ್ಚಿದರು.
ತನ್ನ ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿದ ಸೀಫರ್ಟ್ ಇನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 10 ಸಿಕ್ಸರ್ ಗಳಿದ್ದವು. ಅಲ್ಲೆನ್ 12 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 27 ರನ್ ಸಿಡಿಸಿದರು. 7ನೇ ಓವರ್ ನಲ್ಲಿ ಅಲ್ಲೆನ್ ವಿಕೆಟ್ ಪತನಗೊಂಡಾಗ ನ್ಯೂಝಿಲ್ಯಾಂಡ್ 93 ರನ್ ಗಳಿಸಿತು.
ಮಾರ್ಕ್ ಬೇ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಆದರೆ ಸೀಫರ್ಟ್ ಹಾಗೂ ಡ್ಯಾರಿಲ್ ಮಿಚೆಲ್(ಔಟಾಗದೆ 2) ನ್ಯೂಝಿಲ್ಯಾಂಡ್ ಗೆ ಇನ್ನೂ 60 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದುಕೊಟ್ಟರು.
ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಪಾಕಿಸ್ತಾನ ತಂಡವು ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 128 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ಸಲ್ಮಾನ್ ಅಲಿ ಹಾಗೂ ಶಾದಾಬ್ ಖಾನ್(28 ರನ್, 20 ಎಸೆತ, 5 ಬೌಂಡರಿ) 6ನೇ ವಿಕೆಟ್‌ಗೆ 54 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಸಲ್ಮಾನ್ 39 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 51 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು.
ಅಮೋಘ ಪ್ರದರ್ಶನ ನೀಡಿದ ಜಿಮ್ಮಿ ನಿಶಾಮ್ ಟಿ20 ಕ್ರಿಕೆಟ್‌ನಲ್ಲಿ ತನ್ನ ಚೊಚ್ಚಲ ಐದು ವಿಕೆಟ್ ಗೊಂಚಲು ಪಡೆದರು. ತನ್ನ 4 ಓವರ್ ಗಳ ಸ್ಪೆಲ್ ನಲ್ಲಿ 22 ರನ್‌ಗೆ ಐದು ವಿಕೆಟ್ ಪಡೆದರು.
ಹಸನ್ ನವಾಝ್ ರನ್ನು 2ನೇ ಓವರ್ ನಲ್ಲಿ ಶೂನ್ಯಕ್ಕೆ ಔಟ್ ಮಾಡಿದ ಜೇಕಬ್ ಡಫಿ ಪಾಕಿಸ್ತಾನದ ಬ್ಯಾಟಿಂಗ್ ವೈಫಲ್ಯಕ್ಕೆ ನಿರ್ಣಾಯಕ ಪಾತ್ರವಹಿಸಿದರು. ಪಾಕ್ ಆಟಗಾರರು ನ್ಯೂಝಿಲ್ಯಾಂಡ್‌ನ ಸ್ವಿಂಗ್ ಹಾಗೂ ಬೌನ್ಸ್ ಎಸೆತಗಳಿಗೆ ನಿರುತ್ತರವಾದರು.
ಇದೀಗ ಟಿ20 ಸರಣಿ ಕೊನೆಗೊಂಡಿದ್ದು ಉಭಯ ತಂಡಗಳು ನೇಪಿಯರ್ ನಲ್ಲಿ ಶನಿವಾರದಿಂದ ಆರಂಭವಾಗಲಿರುವ ಏಕದಿನ ಅಂತರರಾಷ್ಟ್ರೀಯ ಸರಣಿಯಲ್ಲಿ ಆಡಲಿವೆ.
ಜಿಮ್ ನೀಶಾಮ್ ‘ ಪಂದ್ಯಶ್ರೇಷ್ಠ’ ಹಾಗೂ ಸರಣಿಯಲ್ಲಿ ಒಟ್ಟು 249 ರನ್ ಗಳಿಸಿದ್ದ ಟಿಮ್ ಸೀಫರ್ಟ್ ‘ಸರಣಿಶ್ರೇಷ್ಠ’ ಪ್ರಶಸ್ತಿ ಪಡೆದರು.