ಶತಕ ತ್ಯಾಗ ಮಾಡಿದ ಶ್ರೇಯಸ್: ಪಂಜಾಬ್ ಸಹ ಮಾಲಕಿ ಪ್ರೀತಿ ಝಿಂಟಾ ಶ್ಲಾಘನೆ

ಶ್ರೇಯಸ್ | PC : PTI
ಹೊಸದಿಲ್ಲಿ: ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ತನ್ನ ಚೊಚ್ಚಲ ಐಪಿಎಲ್ ಶತಕ ಗಳಿಸುವ ಅಪೂರ್ವ ಅವಕಾಶವನ್ನು ಕಳೆದುಕೊಂಡಿದ್ದರು. ಆದರೆ, ಗುಜರಾತ್ ಟೈಟಾನ್ಸ್ ವಿರುದ್ಧ ಆರಂಭಿಕ ಪಂದ್ಯದಲ್ಲಿ ಅಯ್ಯರ್ ಅವರ ನಿಸ್ವಾರ್ಥ ಮನೋಭಾವವು ಎಲ್ಲರ ಮನಗೆದ್ದಿದೆ.
ಅಯ್ಯರ್ ಕೇವಲ 42 ಎಸೆತಗಳಲ್ಲಿ ಔಟಾಗದೆ 97 ರನ್ ಗಳಿಸಿ ಪಂಜಾಬ್ ತಂಡ 5 ವಿಕೆಟ್‌ಗೆ 243 ರನ್ ಗಳಿಸಲು ನೆರವಾಗಿದ್ದರು. ವೈಯಕ್ತಿಕ ಮೈಲಿಗಲ್ಲಿಗಿಂತ ತಂಡದ ಯಶಸ್ಸಿಗೆ ಆದ್ಯತೆ ನೀಡಿರುವ ಅವರ ನಿರ್ಧಾರವು ಎಲ್ಲರ ಗಮನ ಸೆಳೆದಿತ್ತು.
ಅಂತಿಮ ಓವರ್ ಆರಂಭವಾದಾಗ ಅಯ್ಯರ್‌ಗೆ ಶತಕ ಗಳಿಸಲು ಕೇವಲ 3 ರನ್ ಬೇಕಾಗಿತ್ತು. ಆದರೆ, ಅವರ ಬ್ಯಾಟಿಂಗ್ ಜೊತೆಗಾರ ಶಶಾಂಕ್ ಸಿಂಗ್ 23 ರನ್ ಗಳಿಸಿ ಪಂಜಾಬ್ ಬೃಹತ್ ಮೊತ್ತ ಗಳಿಸುವುದನ್ನು ದೃಢಪಡಿಸಿದರು.
ಅಯ್ಯರ್ ತನಗೆ ಸ್ಟ್ರೈಕ್ ನೀಡುವಂತೆ ಕೇಳದೆ ಶಶಾಂಕ್‌ಗೆ ಆಕ್ರಮಣಕಾರಿ ಆಟ ಪ್ರದರ್ಶಿಸಲು ಉತ್ತೇಜಿಸಿದರು.
“ಶಶಾಂಕ್, ನನ್ನ ಶತಕದ ಬಗ್ಗೆ ಚಿಂತಿಸಬೇಡ, ಹೊಡೆಯುತ್ತಾ ಸಾಗು ಎಂದು ಶ್ರೇಯಸ್ ನನಗೆ ಹೇಳಿದ್ದರು’’ ಎನ್ನುವುದಾಗಿ ಯುವ ಬ್ಯಾಟರ್ ಪಂದ್ಯದ ನಂತರ ಬಹಿರಂಗಪಡಿಸಿದ್ದರು.
ಅಯ್ಯರ್ ಅವರ ನಿಸ್ವಾರ್ಥ ನಿಲುವಿಗೆ ಪಂಜಾಬ್ ಸಹ ಮಾಲಕಿ ಪ್ರೀತಿ ಝಿಂಟಾ ಸಹಿತ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
‘‘ಕೆಲವೊಮ್ಮೆ 97 ರನ್ ನೂರಕ್ಕಿಂತ ಉತ್ತಮವಾಗಿರುತ್ತದೆ. ನಾಯಕತ್ವ ಹಾಗೂ ಆಕ್ರಮಣಶೀಲತೆ ಪ್ರದರ್ಶಿಸಿದ್ದಕ್ಕಾಗಿ ಶ್ರೇಯಸ್ ಅಯ್ಯರ್‌ಗೆ ನಮನ’’ಎಂದು ಟ್ವೀಟಿಸಿರುವ ಪ್ರೀತಿ, ಶಶಾಂಕ್ ಸಿಂಗ್, ಮಾರ್ಕೊ ಜಾನ್ಸನ್ ಹಾಗೂ ಅರ್ಷದೀಪ್ ಸಿಂಗ್, ವಿಜಯಕುಮಾರ್ ಹಾಗೂ ಪ್ರಿಯಾಂಶ್ ಆರ್ಯರ ಕೊಡುಗೆಯನ್ನೂ ಕೊಂಡಾಡಿದರು.
ಅಯ್ಯರ್ ಶತಕವಂಚಿತರಾದರೂ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.