ಸೋಲಿನ ಬಳಿಕ ಪಂತ್ ಜೊತೆ ಲಕ್ನೋ ಮಾಲಕ ಸಂಜೀವ್ ಗೋಯಂಕ ʼಬಿಸಿ ಬಿಸಿʼ ಚರ್ಚೆ!

Update: 2025-03-25 22:51 IST
ಸೋಲಿನ ಬಳಿಕ ಪಂತ್ ಜೊತೆ ಲಕ್ನೋ ಮಾಲಕ ಸಂಜೀವ್ ಗೋಯಂಕ ʼಬಿಸಿ ಬಿಸಿʼ ಚರ್ಚೆ!

PC : X 

  • whatsapp icon

ಲಕ್ನೋ: ಲಕ್ನೋ ಸೂಪರ್ ಜಯಂಟ್ಸ್ ಮತ್ತು ಅದರ ನಾಯಕ ರಿಶಭ್ ಪಂತ್‌ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಅಭಿಯಾನ ನಿರಾಶಾದಾಯಕವಾಗಿ ಸೋಮವಾರ ಆರಂಭಗೊಂಡಿತು. ಪಂತ್ ಬ್ಯಾಟಿಂಗ್‌ನಲ್ಲಿ ವಿಫಲರಾದರು. ಅದೂ ಅಲ್ಲದೆ, ಪಂದ್ಯದ ಅಂತಿಮ ಓವರ್‌ನಲ್ಲಿ ಮಹತ್ವದ ಸ್ಟಂಪಿಂಗ್ ಅವಕಾಶವೊಂದನ್ನು ಕೈಚೆಲ್ಲಿದರು.

ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಆಶುತೋಷ್ ಶರ್ಮಾ ತಂಡದ ವಿಜಯವನ್ನು ಖಚಿತಪಡಿಸಿದರು.

ಸೋಲಿನ ಬಳಿಕ, ನಾಯಕ ಪಂತ್ ತಂಡದ ಪ್ರಧಾನ ಕೋಚ್ ಜಸ್ಟಿನ್ ಲ್ಯಾಂಗರ್ ಮತ್ತು ಮಾಲೀಕ ಸಂಜೀವ್ ಗೋಯಂಕ ಜೊತೆಗೆ ಚರ್ಚೆ ನಡೆಸುತ್ತಿರುವುದು ಕಂಡು ಬಂತು. ಈ ಚರ್ಚೆಯು ಜನರಲ್ಲಿ ಭಾರೀ ಆಸಕ್ತಿ ಮೂಡಿಸಿತು. ಕಳೆದ ವರ್ಷ ಇದೇ ಗೋಯಂಕ ಅಂದಿನ ನಾಯಕ ಕೆ.ಎಲ್. ರಾಹುಲ್ ಜೊತೆಗೆ ನಡೆಸಿದ ಮಾತಿನ ಚಕಮಕಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆನಪಿಸಿದರು.

ಮಂಗಳವಾರ, ಗೋಯಂಕ ಹಿಂದಿನ ದಿನದ ತಮ್ಮ ಸಂವಹನದ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಾಕಿ ಹೀಗೆ ಬರೆದಿದ್ದಾರೆ: ‘‘ಮೈದಾನದಲ್ಲಿ ಒತ್ತಡವಿದೆ, ಅದರ ಹೊರಗೆ ಬಾಂಧವ್ಯವಿದೆ. ಮುಂದಿನದನ್ನು ಎದುರು ನೋಡುತ್ತಿದ್ದೇನೆ’’.

ಪಂದ್ಯಶ್ರೇಷ್ಠ ಪ್ರಶಸ್ತಿ ಶಿಖರ್ ಧವನ್‌ಗೆ ಅರ್ಪಿಸಿದ ಆಶುತೋಷ್:

ಈ ನಡುವೆ, ಸೋಮವಾರ ಲಕ್ನೋ ಸೂಪರ್ ಜಯಂಟ್ಸ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರೋಮಾಂಚಕಾರಿ ಒಂದು ವಿಕೆಟ್ ವಿಜಯದತ್ತ ಮುನ್ನಡೆಸಿರುವ ಆಟಗಾರ ಆಶುತೋಷ್ ಶರ್ಮಾ ತನ್ನ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತನ್ನ ಗುರು ಹಾಗೂ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಿಖರ್ ಧವನ್‌ರಿಗೆ ಸಮರ್ಪಿಸಿದ್ದಾರೆ.

ಅದೂ ಅಲ್ಲದೆ, ಅವರು ಶಿಖರ್ ಧವನ್ ಜೊತೆಗೆ ವಿಶೇಷ ವೀಡಿಯೊ ಕಾಲ್ ಮೂಲಕ ಮಾತನಾಡಿದರು. ಇದರ ವೀಡಿಯೊವನ್ನು ಡೆಲ್ಲಿ ಕ್ಯಾಪಿಟಲ್ಸ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.

ಭಾರತೀಯ ಕಬಡ್ಡಿ ಫೆಡರೇಶನ್ ಮೇಲಿನ ನಿಷೇಧ ಮುಂದಿನ ತಿಂಗಳು ತೆರವು (share beda)

ಹೊಸದಿಲ್ಲಿ: ಭಾರತೀಯ ಕಬಡ್ಡಿ ಫೆಡರೇಶನ್ ಮೇಲೆ ವಿಧಿಸಲಾಗಿರುವ ನಿಷೇಧವನ್ನು ಮುಂದಿನ ತಿಂಗಳು ತೆರವುಗೊಳಿಸುವುದಾಗಿ ಕಬಡ್ಡಿಯ ಅಂತರ್‌ರಾಷ್ಟ್ರೀಯ ಆಡಳಿತ ಮಂಡಳಿ ಹೇಳಿದೆ. ಕಬಡ್ಡಿ ಆಡಳಿತವನ್ನು ‘‘ಚುನಾಯಿತ ಮಂಡಳಿ’’ಗೆ ವರ್ಗಾಯಿಸಲು ನ್ಯಾಯಾಲಯ ನೇಮಿತ ಆಡಳಿತ ಮಂಡಳಿಯು ನಿರ್ಧರಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಮುಂದಿನ ತಿಂಗಳು ನಡೆಯಲು ನಿಗದಿಯಾಗಿರುವ ಕಾರ್ಯಕಾರಿ ಮಂಡಳಿಯ ಸಭೆಯ ಬಳಿಕ ನಿಷೇಧವನ್ನು ತೆರವುಗೊಳಿಸಲಾಗುವುದು ಎಂದು ಅಂತರ್‌ರಾಷ್ಟ್ರೀಯ ಕಬಡ್ಡಿ ಫೆಡರೇಶನ್ (ಐಕೆಎಫ್) ಅಧ್ಯಕ್ಷ ವಿನೋದ್ ಕುಮಾರ್ ತಿವಾರಿ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.

‘‘ಚುನಾಯಿತ ಮಂಡಳಿ’’ಗೆ ಅಧಿಕಾರ ವಹಿಸಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಕಳೆದ ವರ್ಷದ ಜುಲೈಯಲ್ಲಿ ಭಾರತೀಯ ಅಮೆಚೂರ್ ಕಬಡ್ಡಿ ಫೆಡರೇಶನ್ (ಎಕೆಎಫ್‌ಐ)ನ್ನು ಐಕೆಎಫ್ ನಿಷೇಧಿಸಿತ್ತು.

‘‘ನ್ಯಾಯಾಲಯ ನೇಮಿತ ಆಡಳಿತಗಾರರು ಕಬಡ್ಡಿ ಆಡಳಿತವನ್ನು 2023 ಡಿಸೆಂಬರ್‌ನಲ್ಲಿ ಆಯ್ಕೆಯಾಗಿರುವ ಎಕೆಎಫ್‌ಐ ಪದಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಎಕೆಎಫ್‌ಐ ಪದಾಧಿಕಾರಿಗಳು ಜೆಎಲ್‌ಎನ್ ಸ್ಟೇಡಿಯಮ್‌ನಲ್ಲಿರುವ ಅದರ ಕಚೇರಿಯಲ್ಲಿ ತಮ್ಮ ಕೆಲಸ ಆರಂಭಿಸಿದ್ದಾರೆ’’ ಎಂದು ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ತಿವಾರಿ ಹೇಳಿದರು.

‘‘ಹಾಗಾಗಿ, ಎಕೆಎಫ್‌ಐ ಮೇಲಿನ ನಿಷೇಧವನ್ನು ತೆಗೆಯಲಾಗುವುದು. ಮುಂದಿನ ತಿಂಗಳು ನಮ್ಮ (ಅಂತರ್‌ರಾಷ್ಟ್ರೀಯ ಕಬಡ್ಡಿ ಫೆಡರೇಶನ್) ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಆಗ ನಿಷೇಧವನ್ನು ಅಧಿಕೃತವಾಗಿ ತೆಗೆಯಲಾಗುವುದು’’ ಎಂದರು.

ಕಬಡ್ಡಿ ಫೆಡರೇಶನ್‌ನ ಅಧಿಕಾರವನ್ನು 2023 ಡಿಸೆಂಬರ್‌ನಲ್ಲಿ ಆಯ್ಕೆಯಾಗಿರುವ ಪದಾಧಿಕಾರಿಗಳಿಗೆ ಹಸ್ತಾಂತರಿಸುವಂತೆ ಫೆಬ್ರವರಿ 6ರ ಆದೇಶದಲ್ಲಿ ಸುಪ್ರೀಂ ಕೋರ್ಟ್ ಎಕೆಎಫ್‌ಐ ಆಡಳಿತಾಧಿಕಾರಿ ನ್ಯಾ. (ನಿವೃತ್ತ) ಎಸ್.ಪಿ. ಗಾರ್ಗ್‌ರಿಗೆ ನಿರ್ದೇಶನ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News