IPL 2025 | ರಾಜಸ್ಥಾನ್‌ ವಿರುದ್ಧ ಕೆಕೆಆರ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

Update: 2025-03-26 22:59 IST
IPL 2025 | ರಾಜಸ್ಥಾನ್‌ ವಿರುದ್ಧ ಕೆಕೆಆರ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

x/@IPL

  • whatsapp icon

ಗುವಾಹಟಿ : ಆಲ್‌ರೌಂಡ್ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡ ಐಪಿಎಲ್ ಟಿ20 ಟೂರ್ನಿಯ 6ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ 18ನೇ ಆವೃತ್ತಿಯ ಪಂದ್ಯಾವಳಿಯಲ್ಲಿ ಗೆಲುವಿನ ಖಾತೆ ತೆರೆಯಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಉದ್ಘಾಟನಾ ಪಂದ್ಯದಲ್ಲಿ ಸೋಲುಂಡಿದ್ದ ಕೆಕೆಆರ್, ಇನ್ನೂ 15 ಎಸೆತಗಳು ಬಾಕಿ ಇರುವಾಗಲೆ ಗೆಲುವಿನ ದಡ ಸೇರಿತು.

ಬುಧವಾರ ನಡೆದ ಪಂದ್ಯದಲ್ಲಿ ಗೆಲ್ಲಲು 152 ರನ್ ಗುರಿ ಬೆನ್ನಟ್ಟಿದ ಕೆಕೆಆರ್ ತಂಡವು ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್(ಔಟಾಗದೆ 97, 61 ಎಸೆತ, 8 ಬೌಂಡರಿ, 6 ಸಿಕ್ಸರ್)ಹಾಗೂ ಎ.ರಘುವಂಶಿ(ಔಟಾಗದೆ 22, 17 ಎಸೆತ, 2 ಬೌಂಡರಿ)ನೆರವಿನಿಂದ 17.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು.

6.1 ಓವರ್‌ಗಳಲ್ಲಿ 41 ರನ್ ಗಳಿಸಿದ ಡಿಕಾಕ್ ಹಾಗೂ ಮೊಯಿನ್ ಅಲಿ ಉತ್ತಮ ಆರಂಭ ಒದಗಿಸಿದರು. 5 ರನ್ ಗಳಿಸಿದ್ದಾಗ ಅಲಿ ರನೌಟಾದರು. ನಾಯಕ ಅಜಿಂಕ್ಯ ರಹಾನೆ 18 ರನ್ ಗಳಿಸಿ ಹಸರಂಗಗೆ ವಿಕೆಟ್ ಒಪ್ಪಿಸಿದರು. ಡಿಕಾಕ್ ಹಾಗೂ ರಘುವಂಶಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ ತಂಡವು ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ(2-17)ಹಾಗೂ ಮೊಯಿನ್ ಅಲಿ(2-23), ವೇಗಿಗಳಾದ ವೈಭವ್ ಅರೋರ(2-33), ಹರ್ಷಿತ್ ರಾಣಾ(2-36) ಅವರ ಕರಾರುವಾಕ್ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 151 ರನ್ ಗಳಿಸಲಷ್ಟೇ ಶಕ್ತವಾಯಿತು.

ವಿಕೆಟ್‌ಕೀಪರ್-ಬ್ಯಾಟರ್ ಧ್ರುವ್ ಜುರೆಲ್(33 ರನ್, 28 ಎಸೆತ), ಯಶಸ್ವಿ ಜೈಸ್ವಾಲ್(29 ರನ್, 24 ಎಸೆತ) ಹಾಗೂ ರಿಯಾನ್ ಪರಾಗ್(25 ರನ್, 15 ಎಸೆತ)ಅವರ ಪ್ರಯತ್ನದ ಫಲವಾಗಿ ರಾಜಸ್ಥಾನ ರಾಯಲ್ಸ್ ತಂಡವು 150ರ ಗಡಿ ದಾಟಿತು.

ಅಲಿ ಹಾಗೂ ಚಕ್ರವರ್ತಿ ಒಟ್ಟು 8 ಓವರ್‌ಗಳಲ್ಲಿ 40 ರನ್ ನೀಡಿ 4 ವಿಕೆಟ್‌ಗಳನ್ನು ಪಡೆದರು. ಹೀಗಾಗಿ ಆಂಡ್ರೆ ರಸೆಲ್ ಬೌಲಿಂಗ್ ಮಾಡಬೇಕಾದ ಅಗತ್ಯ ಉಂಟಾಗಲಿಲ್ಲ. 1 ವಿಕೆಟ್‌ಗೆ 67 ರನ್ ಗಳಿಸಿದ್ದ ರಾಜಸ್ಥಾನ ತಂಡವು 82 ರನ್‌ಗೆ 5ನೇ ವಿಕೆಟ್ ಕಳೆದುಕೊಂಡು ಕುಸಿತ ಕಂಡಿತು. 7ನೇ ಕ್ರಮಾಂಕದಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದಿದ್ದ ಶುಭಮ್ ದುಬೆ 12 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿ ಅರೋರಗೆ ವಿಕೆಟ್ ಒಪ್ಪಿಸಿದರು.

ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್(29 ರನ್)ಹಾಗೂ ಸಂಜು ಸ್ಯಾಮ್ಸನ್(13 ರನ್)3.5 ಓವರ್‌ಗಳಲ್ಲಿ 33 ರನ್ ಸೇರಿಸಿದರು. ಸ್ಯಾಮ್ಸನ್‌ರನ್ನು ಕ್ಲೀನ್‌ಬೌಲ್ಡ್ ಮಾಡಿದ ಅರೋರ ಈ ಜೋಡಿಯನ್ನು ಬೇರ್ಪಡಿಸಿದರು.

ಹಂಗಾಮಿ ನಾಯಕ ಪರಾಗ್ ತನ್ನ ತವರು ಮೈದಾನದಲ್ಲಿ 15 ಎಸೆತಗಳಲ್ಲಿ 3 ಸಿಕ್ಸರ್‌ಗಳ ನೆರವಿನಿಂದ 25 ರನ್ ಗಳಿಸಿ ಉತ್ತಮ ಆರಂಭ ಪಡೆದರು.ಆದರೆ ಇದನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ವಿಫಲರಾದರು. ಧ್ರುವ್ ಜುರೆಲ್ 28 ಎಸೆತಗಳಲ್ಲಿ 33 ರನ್ ಗಳಿಸಿ ಸರ್ವಾಧಿಕ ಸ್ಕೋರ್ ಗಳಿಸಿದರು.

ನಿತಿಶ್ ರಾಣಾ(8 ರನ್), ವನಿಂದು ಹಸರಂಗ(4 ರನ್), ಶಿಮ್ರೊನ್ ಹೆಟ್ಮೆಯರ್(7 ರನ್) ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಶುಭಂ ದುಬೆ(9 ರನ್)ವಿಫಲರಾದರು.

ಬಾಲಂಗೋಚಿ ಜೋಫ್ರಾ ಆರ್ಚರ್ 7 ಎಸೆತಗಳಲ್ಲಿ 16 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಲು ನೆರವಾದರು.

*ನರೇನ್ ಬದಲಿಗೆ ಮೊಯಿನ್ ಅಲಿಗೆ ಅವಕಾಶ

ಟಾಸ್ ಜಯಿಸಿದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಬೌಲಿಂಗ್ ಆಯ್ದುಕೊಂಡರು. ಸುನೀಲ್ ನರೇನ್ ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ಆಡುವ 11ರ ಬಳಗದಲ್ಲಿ ಅನಿವಾರ್ಯವಾಗಿ ಒಂದು ಬದಲಾವಣೆ ಮಾಡಲಾಗಿದೆ. ನರೇನ್ ಬದಲಿಗೆ ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಮೊಯಿನ್ ಅಲಿಗೆ ಕೆಕೆಆರ್ ಸಲಹೆಗಾರ ಡ್ವೆಯ್ನ್ ಬ್ರಾವೊ ಅವಕಾಶ ನೀಡಿದರು. ಎಡಗೈ ವೇಗಿ ಸ್ಪೆನ್ಸರ್ ಜಾನ್ಸನ್ ಆಡುವ 11ರ ಬಳಗದಲ್ಲಿ ತನ್ನ ಸ್ಥಾನ ಉಳಿಸಿಕೊಂಡಿದ್ದಾರೆ.

ಹಾಲಿ ಚಾಂಪಿಯನ್ ಕೆಕೆಆರ್ ಹಾಗೂ ರಾಜಸ್ಥಾನ ತಂಡಗಳು ಟೂರ್ನಿಯಲ್ಲಿ ಆಡಿರುವ ತನ್ನ ಮೊದಲ ಪಂದ್ಯಗಳಲ್ಲಿ ಸೋತಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News