ಫಿಫಾ ಕ್ಲಬ್ ವಿಶ್ವಕಪ್ 2025 | 8,500 ಕೋಟಿ ರೂ. ಬಹುಮಾನ ಮೊತ್ತ!

ಫಿಫಾ ಕ್ಲಬ್ ವಿಶ್ವಕಪ್ | PC : NDTV
ಹೊಸದಿಲ್ಲಿ: 2025ರ ಕ್ಲಬ್ ವಿಶ್ವಕಪ್‌ನ ಬಹುಮಾನ ಮೊತ್ತವನ್ನು ಫುಟ್ಬಾಲ್ ನ ಜಾಗತಿಕ ಆಡಳಿತ ಮಂಡಳಿ ಫಿಫಾ ಬಹಿರಂಗಪಡಿಸಿದೆ. ಇದರೊಂದಿಗೆ, ಇದು ಸಾರ್ವಕಾಲಿಕ ಅತ್ಯಂತ ಆಕರ್ಷಕ ಕ್ಲಬ್ ಪಂದ್ಯಾವಳಿಯಾಗಿದೆ.
ಈ ಪಂದ್ಯಾವಳಿಯ ವಿಜೇತರು 125 ಮಿಲಿಯ ಡಾಲರ್ (ಸುಮಾರು 1,070 ಕೋಟಿ ರೂಪಾಯಿ)ವರೆಗೆ ಸಂಪಾದಿಸಬಹುದಾಗಿದೆ.
ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ 32 ಕ್ಲಬ್‌ಗಳಿಗೆ ಒಟ್ಟು ಒಂದು ಬಿಲಿಯ ಡಾಲರ್ (ಸುಮಾರು 8,500 ಕೋಟಿ ರೂಪಾಯಿ) ಮೊತ್ತವನ್ನು ಹಂಚಲಾಗುವುದು.
ಅದೂ ಅಲ್ಲದೆ, ಜಗತ್ತಿನಾದ್ಯಂತ ಕ್ಲಬ್ ಫುಟ್ಬಾಲ್‌ಗೆ ಬೆಂಬಲ ನೀಡಲು ಹೆಚ್ಚುವರಿಯಾಗಿ 250 ಮಿಲಿಯ ಡಾಲರ್ (ಸುಮಾರು 2,140 ಕೋಟಿ ರೂಪಾಯಿ) ಮೊತ್ತವನ್ನು ಮೀಸಲಿಡಲಾಗಿದೆ.
ಯುಇಎಫ್‌ಎ ಸ್ಪರ್ಧಿಗಳು ಗರಿಷ್ಠ ಬಹುಮಾನ ಮೊತ್ತವನ್ನು ಪಡೆಯಲಿದ್ದಾರೆ. ಅವರು ರ‍್ಯಾಂಕಿಂಗ್ ಮತ್ತು ಸಂಗ್ರಹವಾದ ವರಮಾನದ ಆಧಾರದಲ್ಲಿ 12.81 ಮಿಲಿಯ ಡಾಲರ್ (ಸುಮಾರು 110 ಕೋಟಿ ರೂಪಾಯಿ)ನಿಂದ 38.19 ಮಿಲಿಯ ಡಾಲರ್ (ಸುಮಾರು 327 ಕೋಟಿ ರೂಪಾಯಿ)ವರೆಗಿನ ಮೊತ್ತವನ್ನು ಸ್ವೀಕರಿಸಲಿದ್ದಾರೆ.
ಚೆಲ್ಸಿ, ಮ್ಯಾಂಚೆಸ್ಟರ್ ಸಿಟಿ, ರಿಯಲ್ ಮ್ಯಾಡ್ರಿಡ್ ಮತ್ತು ಬೇಯರ್ನ್ ಮ್ಯೂನಿಕ್ ಮುಂತಾದ ಕ್ಲಬ್ ಗಳು ಗರಿಷ್ಠ ಹಣ ಪಡೆಯುವ ಸಾಧ್ಯತೆಯಿದೆ.
32 ತಂಡಗಳು ಪಾಲ್ಗೊಳ್ಳುವ ಫಿಫಾ ಕ್ಲಬ್ ವಿಶ್ವಕಪ್ ಜೂನ್ 14ರಿಂದ ಜುಲೈ 13ರವರೆಗೆ ಅಮೆರಿಕದಲ್ಲಿ ನಡೆಯಲಿದೆ.