ಅಲೆಕ್ಸ್ ಡಿ ಮಿನಾರ್, ಝ್ವೆರೆವ್ 4ನೇ ಸುತ್ತಿಗೆ; ಮಯಾಮಿ ಓಪನ್ ಟೆನಿಸ್ ಪಂದ್ಯಾವಳಿ

ಅಲೆಕ್ಸ್ ಡಿ ಮಿನಾರ್ | PC : NDTV
ಮಯಾಮಿ: ಮಯಾಮಿ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೋಮವಾರ ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನಾರ್ ಬ್ರೆಝಿಲ್‌ನ ಹದಿಹರಯದ ಪ್ರತಿಭೆ ಜೋವೊ ಫೊನ್ಸೆಕರನ್ನು ಸೋಲಿಸಿ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.
ಜಿದ್ದಾಜಿದ್ದಿನ ಹೋರಾಟದಲ್ಲಿ, ಅಲೆಕ್ಸ್ 18 ವರ್ಷದ ತನ್ನ ಎದುರಾಳಿಯನ್ನು 5-7, 7-5, 6-3 ಸೆಟ್‌ಗಳಿಂದ ಮಣಿಸಿದರು.
ಹಾರ್ಡ್ ರಾಕ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯವನ್ನು ವೀಕ್ಷಿಸಲು ಫೊನ್ಸೆಕರ ಬ್ರೆಝಿಲ್ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ಸ್ಟೇಡಿಯಮ್ ಬ್ರೆಝಿಲ್ ಧ್ವಜಗಳು ಮತ್ತು ಫುಟ್ಬಾಲ್ ಮಾದರಿಯ ಘೋಷಣೆಗಳಿಂದ ತುಂಬಿತ್ತು.
ಫೊನ್ಸೆಕ ತನ್ನ ಆಕ್ರಮಣಕಾರಿ ಟೆನಿಸ್‌ನ್ನು ಎದುರಾಳಿಯ ಮೇಲೆ ಹರಿಯಬಿಟ್ಟರು. ಆದರೆ, ಅಲೆಕ್ಸ್ ಎಲ್ಲದಕ್ಕೂ ಸಿದ್ಧರಾಗಿದ್ದರು. ಅವರು ಗಾಳಿ ಸೀಳುವ ಫೋರ್‌ಹ್ಯಾಂಡ್ ಹೊಡೆತಗಳು ಮತ್ತು ಏಕಪಕ್ಷೀಯ ಪ್ರೇಕ್ಷಕರು- ಎರಡನ್ನೂ ಸಮರ್ಥವಾಗಿ ಎದುರಿಸಿದರು.
‘‘ನಾನು ಈ ಪಂದ್ಯಕ್ಕಾಗಿ ಮಾನಸಿಕವಾಗಿ ತಯಾರಾಗಿದ್ದೆ. ಅತ್ಯಂತ ಆತ್ಮವಿಶ್ವಾಸದಿಂದ ಆಡುತ್ತಿರುವ ಮತ್ತು ಕಳೆದುಕೊಳ್ಳಲು ಏನೂ ಇಲ್ಲದಿರುವ ಜೋವೊರಂಥ ಅದ್ಭುತ ಪ್ರತಿಭೆಯನ್ನು ಮಾತ್ರ ನಾನು ಎದುರಿಸುವುದಲ್ಲ, ಮೊದಲ ಅಂಕದಿಂದ ಹಿಡಿದು ಕೊನೆಯ ಅಂಕದವರೆಗೆ ಅವರ ಪರವಾಗಿ ನಿಲ್ಲುವ ಅಮೋಘ ಪ್ರೇಕ್ಷಕರನ್ನೂ ಎದುರಿಸಬೇಕಾಗುತ್ತದೆ ಎನ್ನುವುದು ನನಗೆ ತಿಳಿದಿತ್ತು’’ ಎಂದು ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಲೆಕ್ಸ್ ಹೇಳಿದರು.
ಅಲೆಕ್ಸಾಂಡರ್ ಝ್ವೆರೆವ್‌ಗೆ ಜಯ:
ಮಯಾಮಿ ಓಪನ್ ಪುರುಷರ ಸಿಂಗಲ್ಸ್‌ನಲ್ಲಿ, ಸೋಮವಾರ ಅಗ್ರ ಶ್ರೇಯಾಂಕದ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಆಸ್ಟ್ರೇಲಿಯದ ಜೋರ್ಡನ್ ಥಾಂಪ್ಸನ್‌ರನ್ನು 7-5, 6-4 ನೇರ ಸೆಟ್‌ಗಳಿಂದ ಸೋಲಿಸಿ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.
ಆರಂಭಿಕ ಸೆಟ್‌ನಲ್ಲಿ ಅಲೆಕ್ಸಾಂಡರ್ ಒಂದು ಹಂತದಲ್ಲಿ 4-1ರ ಹಿನ್ನಡೆಯಲ್ಲಿದ್ದರೂ, ಬಳಿಕ ತನ್ನ ಲಯವನ್ನು ಕಂಡುಕೊಂಡರು. ಅವರು ನಂತರದ ಒಂಭತ್ತು ಗೇಮ್‌ಗಳ ಪೈಕಿ ಎಂಟನ್ನು ಗೆದ್ದು ಮುನ್ನಡೆ ಸಾಧಿಸಿದರು.
ಇಂಡಿಯನ್ ವೆಲ್ಸ್‌ನಲ್ಲಿ ಝ್ವೆರೆವ್ ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿದ್ದರು. ಆದರೆ, ಮಯಾಮಿಯಲ್ಲಿ ಕಾರ್ಲೋಸ್ ಅಲ್ಕರಾಝ್ ಈಗಾಗಲೇ ಹೊರಬಿದ್ದಿರುವ ಹಿನ್ನೆಲೆಯಲ್ಲಿ, ಇಲ್ಲೊಂದು ಅವಕಾಶವನ್ನು ಅವರು ಎದುರು ನೋಡುತ್ತಿದ್ದಾರೆ.
ಮೂರನೇ ಶ್ರೇಯಾಂಕದ ಅಮೆರಿಕದ ಟೇಲರ್ ಫ್ರಿಟ್ಝ್ ಕೂಡ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ. ಅವರು ಕೆನಡದ ಡೆನಿಸ್ ಶಪೊವಲೊವ್‌ರನ್ನು 7-5, 6-3 ಸೆಟ್‌ಗಳಿಂದ ಮಣಿಸಿದರು.
ಮೊದಲ ಸೆಟ್‌ನಲ್ಲಿ ಟೇಲರ್ 5-2ರ ಮುನ್ನಡೆಯನ್ನು ಕೈಚೆಲ್ಲಿದರೂ, ಬಳಿಕ ತನ್ನ ಬಿರುಸಿನ ಸರ್ವ್‌ಗಳ ಮೂಲಕ ನಿಯಂತ್ರಣವನ್ನು ಮರುಗಳಿಸಿದರು.