2032ರ ಒಲಿಂಪಿಕ್ಸ್‌ಗಾಗಿ ಬ್ರಿಸ್ಟೇನ್‌ನಲ್ಲಿ 63,000 ಆಸನದ ನೂತನ ಸ್ಟೇಡಿಯಮ್

PC : NDTV
ಬ್ರಿಸ್ಬೇನ್: ಆಸ್ಟ್ರೇಲಿಯವು 2032ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಬ್ರಿಸ್ಬೇನ್‌ನಲ್ಲಿ 63,000 ಆಸನ ಸಾಮರ್ಥ್ಯದ ಸ್ಟೇಡಿಯಮ್ ನಿರ್ಮಿಸುವುದು ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಕ್ವೀನ್ಸ್‌ಲ್ಯಾಂಡ್ ಪ್ರೀಮಿಯರ್ ಡೇವಿಡ್ ಕ್ರಿಸಾಫುಲಿ, ಒಲಿಂಪಿಕ್ ಸಿದ್ಧತೆಗಳ ಬಗೆ ಮಾಹಿತಿ ನೀಡುತ್ತಾ ಈ ವಿಷಯವನ್ನು ತಿಳಿಸಿದರು. ಬ್ರಿಸ್ಬೇನ್ ನಗರದ ಹೃದಯ ಭಾಗದಲ್ಲಿ ನೂತನ ಸ್ಟೇಡಿಯಮ್ ಮತ್ತು 25,000 ಪ್ರೇಕ್ಷಕರಿಗೆ ಅವಕಾಶ ಒದಗಿಸಬಲ್ಲ ಈಜು ಕೇಂದ್ರವೊಂದನ್ನು ಒಲಿಂಪಿಕ್ ಸಿದ್ಧತೆಯ ಭಾಗವಾಗಿ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.
‘‘ಅಂತಿಮವಾಗಿ, ಕ್ವೀನ್ಸ್‌ಲ್ಯಾಂಡ್ ಯೋಜನೆಯೊಂದನ್ನು ಹೊಂದಿದೆ. ಈ ಯೋಜನೆಯೊಂದಿಗೆ ಸಾಗುವ ಸಮಯ ಬಂದಿದೆ ಹಾಗೂ ಅದರೊಂದಿಗೆ ಸಾಗುತ್ತೇವೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಕ್ರಿಸಾಫುಲಿ ಹೇಳಿದರು.
2032ರ ಬೇಸಿಗೆ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನ ಆತಿಥ್ಯವನ್ನು 2021ರ ಜುಲೈಯಲ್ಲಿ ಕ್ವೀನ್ಸ್‌ಲ್ಯಾಂಡ್‌ಗೆ ನೀಡಲಾಗಿತ್ತು. ಇದರೊಂದಿಗೆ ಒಲಿಂಪಿಕ್ಸ್ ಆಸ್ಟ್ರೇಲಿಯಕ್ಕೆ ಮತ್ತೊಮ್ಮೆ ಮರಳಿದೆ. ಇದಕ್ಕೂ ಮೊದಲು ಆಸ್ಟ್ರೇಲಿಯದಲ್ಲಿ ಎರಡು ಬಾರಿ ಒಲಿಂಪಿಕ್ಸ್ ನಡೆದಿತ್ತು- 1956ರಲ್ಲಿ ಮೆಲ್ಬರ್ನ್‌ನಲ್ಲಿ ಮತ್ತು 2000ದಲ್ಲಿ ಸಿಡ್ನಿಯಲ್ಲಿ.
ಎರಡು ವರ್ಷಗಳ ಹಿಂದೆ, ಕ್ವೀನ್ಸ್‌ಲ್ಯಾಂಡ್ ರಾಜ್ಯದ ಲೇಬರ್ ಪಕ್ಷದ ಸರಕಾರವು, ಒಲಿಂಪಿಕ್ಸ್‌ಗಾಗಿ ಪ್ರಸಿದ್ಧ ಗಾಬಾ ಕ್ರಿಕೆಟ್ ಮೈದಾನವನ್ನು ವಿಸ್ತರಿಸುವ ಮತ್ತು 17,000 ಆಸನ ಸಾಮರ್ಥ್ಯದ ನೂತನ ಒಳಾಂಗಣ ಸ್ಟೇಡಿಯಮ್ ಒಂದನ್ನು ನಿರ್ಮಿಸುವ ಯೋಜನೆಗಳನ್ನು ಘೋಷಿಸಿತ್ತು.
ಆದರೆ, ಕ್ರಿಸಾಫುಲಿ ಮಂಗಳವಾರ ಆ ಯೋಜನೆಗಳನ್ನು ರದ್ದುಗೊಳಿಸಿದ್ದಾರೆ ಹಾಗೂ ಆಸ್ಟ್ರೇಲಿಯವು ತಾತ್ಕಾಲಿಕ ಸೌಕರ್ಯಗಳ ಮೇಲೆ ಬಿಲಿಯಗಟ್ಟಳೆ ಹಣವನ್ನು ವ್ಯರ್ಥಗೊಳಿಸುವುದರಲ್ಲಿತ್ತು ಎಂದು ಹೇಳಿದ್ದಾರೆ.
63,000 ಆಸನ ಸಾಮರ್ಥ್ಯದ ಸ್ಟೇಡಿಯಮ್ ಜಾಗತಿಕ ದರ್ಜೆಯದ್ದಾಗಿದೆ ಎಂಬುದಾಗಿ ಬಣ್ಣಿಸಿರುವ ಅವರು, ಈ ಮೈದಾನವು ಭವಿಷ್ಯದಲ್ಲಿಯೂ ಪ್ರಮುಖ ಕ್ರೀಡಾಕೂಟಗಳನ್ನು ಆಯೋಜಿಸುವುದು ಎಂದರು.