IPL 2025 | ಇಶಾನ್ ಕಿಶನ್ ಶತಕ, ರಾಜಸ್ಥಾನ ರಾಯಲ್ಸ್ ವಿರುದ್ಧ 44 ರನ್ ಜಯ

Photo:x/@IPL
ಹೈದರಾಬಾದ್ : 2025ರ ಆವೃತ್ತಿಯ ಐಪಿಎಲ್ ಟಿ20ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಶತಕದ ಸಹಾಯದಿಂದ ಬೃಹತ್ ಮೊತ್ತ ಕಲೆ ಹಾಕಿದ ಸನ್ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ರವಿವಾರ 44 ರನ್ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ ಗೆಲುವಿನ ಆರಂಭ ಪಡೆದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡವು 20 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 286 ರನ್ ಗಳಿಸಿತು. ಐಪಿಎಲ್ ಇತಿಹಾಸದಲ್ಲಿ 2ನೇ ಗರಿಷ್ಠ ಮೊತ್ತ ಗಳಿಸಿ ತನ್ನದೇ ದಾಖಲೆ ಮುರಿಯುವುದರಿಂದ ವಂಚಿತವಾಯಿತು.
ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವು ವಿಕೆಟ್ಕೀಪರ್-ಬ್ಯಾಟರ್ ಧ್ರುವ್ ಜುರೆಲ್(70 ರನ್, 35 ಎಸೆತ, 5 ಬೌಂಡರಿ, 6 ಸಿಕ್ಸರ್) ಹಾಗೂ ಸಂಜು ಸ್ಯಾಮ್ಸನ್(66 ರನ್, 37 ಎಸೆತ, 7 ಬೌಂಡರಿ, 4 ಸಿಕ್ಸರ್)ಅರ್ಧಶತಕದ ಮೂಲಕ 4ನೇ ವಿಕೆಟ್ ಗೆ 111 ರನ್ ಜೊತೆಯಾಟ ನಡೆಸಿದ ಹೊರತಾಗಿಯೂ 20 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 242 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಹೈದರಾಬಾದ್ ಪರ ಶಿಮ್ರೊನ್ ಹೆಟ್ಮೆಯರ್(42 ರನ್, 23 ಎಸೆತ)ಹಾಗೂ ಶುಭಮ್ ದುಬೆ(ಔಟಾಗದೆ 34, 11 ಎಸೆತ)6ನೇ ವಿಕೆಟ್ ಗೆ 34 ಎಸೆತಗಳಲ್ಲಿ 80 ರನ್ ಜೊತೆಯಾಟ ನಡೆಸಿದರೂ ಇದು ತಂಡದ ಗೆಲುವಿಗೆ ಸಾಕಾಗಲಿಲ್ಲ.
ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(1ರನ್), ನಾಯಕ ರಿಯಾನ್ ಪರಾಗ್(4 ರನ್) ಹಾಗೂ ನಿತಿಶ್ ರಾಣಾ(11 ರನ್)ವೈಫಲ್ಯಕಂಡಿದ್ದು ತಂಡಕ್ಕೆ ದುಬಾರಿಯಾಯಿತು.
ಹೈದರಾಬಾದ್ ಬೌಲಿಂಗ್ ವಿಭಾಗದಲ್ಲಿ ಸಿಮರ್ಜೀತ್ ಸಿಂಗ್(2-46) ಹಾಗೂ ಹರ್ಷಲ್ ಪಟೇಲ್(2-34)ತಲಾ ಎರಡು ವಿಕೆಟ್ ಗಳನ್ನು ಪಡೆದರು. ಮುಹಮ್ಮದ್ ಶಮಿ(1-33)ಹಾಗೂ ಆಡಮ್ ಝಂಪಾ(1-48)ತಲಾ ಒಂದು ವಿಕೆಟ್ ಪಡೆದಿದ್ದಾರೆ.
►ಎರಡು ಐಪಿಎಲ್ ಋತುಗಳಲ್ಲಿ 4ನೇ ಬಾರಿ 260ಕ್ಕೂ ಅಧಿಕ ರನ್ ಕಲೆ ಹಾಕಿದ ಹೈದರಾಬಾದ್
ಹೈದರಾಬಾದ್ ತಂಡವು ಐಪಿಎಲ್ ಇತಿಹಾಸದಲ್ಲಿ 2ನೇ ಗರಿಷ್ಠ ಮೊತ್ತ ದಾಖಲಿಸಿದ್ದು, ತನ್ನದೇ ಗರಿಷ್ಠ ಸ್ಕೋರ್ ದಾಖಲೆ ಸರಿಗಟ್ಟುವುದರಿಂದ ಕೇವಲ 1 ರನ್ನಿಂದ ಹಿಂದೆ ಬಿತ್ತು. ಹೈದರಾಬಾದ್ ತಂಡವು 2024ರಲ್ಲಿ ಬೆಂಗಳೂರಿನಲ್ಲಿ ಆರ್ಸಿಬಿ ವಿರುದ್ಧ 3 ವಿಕೆಟ್ ಗಳ ನಷ್ಟಕ್ಕೆ 287 ರನ್ ಗಳಿಸಿದ್ದು, ಇದು ಐಪಿಎಲ್ನಲ್ಲಿ ತಂಡವೊಂದರ ಗರಿಷ್ಠ ಸ್ಕೋರಾಗಿದೆ.
ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ ಸಮಯ ವ್ಯರ್ಥ ಮಾಡದೆ ಕೇವಲ 11 ಎಸೆತಗಳಲ್ಲಿ 24 ರನ್ ಚಚ್ಚಿದರು. ಟ್ರಾವಿಸ್ ಹೆಡ್ 31 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಗಳ ಸಹಿತ 67 ರನ್ ಗಳಿಸಿದರು. ಆರಂಭಿಕ ಜೋಡಿ ಮೊದಲ ವಿಕೆಟ್ ಗೆ ಕೇವಲ 19 ಎಸೆತಗಳಲ್ಲಿ 45 ರನ್ ಸೇರಿಸಿತು. ಅಭಿಷೇಕ್ ಔಟಾದ ನಂತರ 3ನೇ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದ ಇಶಾನ್ ಕಿಶನ್ 225.53ರ ಸ್ಟ್ರೈಕ್ರೇಟ್ ನಲ್ಲಿ 11 ಬೌಂಡರಿ, 6 ಸಿಕ್ಸರ್ ಗಳ ಸಹಿತ 47 ಎಸೆತಗಳಲ್ಲಿ ಔಟಾಗದೆ 106 ರನ್ ಗಳಿಸಿ ರಾಜೀವ್ ಗಾಂಧಿ ಇಂಟರ್ನ್ಯಾಶನಲ್ ಸ್ಟೇಡಿಯಮ್ನಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.
ನಿತಿಶ್ ಕುಮಾರ್ ರೆಡ್ಡಿ(30 ರನ್,15 ಎಸೆತ)ಹಾಗೂ ಹೆನ್ರಿಕ್ ಕ್ಲಾಸೆನ್(34 ರನ್, 14 ಎಸೆತ) ಹೈದರಾಬಾದ್ ತಂಡದ ಮೊತ್ತ ಮತ್ತಷ್ಟು ಹಿಗ್ಗಲು ನೆರವಾದರು. ಹೈದರಾಬಾದ್ ತಂಡ ಮೊದಲ 6 ಓವರ್ ಗಳಲ್ಲಿ 94 ರನ್ ಸಿಡಿಸಿತು. ಐಪಿಎಲ್ನ ಪವರ್ಪ್ಲೇನಲ್ಲಿ 5ನೇ ಗರಿಷ್ಠ ಮೊತ್ತ ಕಲೆ ಹಾಕಿತು. 286 ರನ್ ಗಳಿಸಿ ಐಪಿಎಲ್ನಲ್ಲಿ ತನ್ನದೇ ಸಾರ್ವಕಾಲಿಕ ಶ್ರೇಷ್ಠ ಸ್ಕೋರ್ ದಾಖಲೆ ಸರಿಗಟ್ಟುವುದರಿಂದ ಕೇವಲ ಒಂದು ರನ್ ಕೊರತೆ ಎದುರಿಸಿತು.
ಹೆಡ್ ಹಾಗೂ ಕಿಶನ್ 38 ಎಸೆತಗಳಲ್ಲಿ 85 ರನ್ ಜೊತೆಯಾಟ ನಡೆಸಿದರು. ಈ ಹಂತದಲ್ಲಿ ಹೈದರಾಬಾದ್ ತಂಡ ಐಪಿಎಲ್ನಲ್ಲಿ ಮೊದಲ ಬಾರಿ 300ಕ್ಕೂ ಅಧಿಕ ರನ್ ಗಳಿಸುವ ವಿಶ್ವಾಸ ಮೂಡಿಸಿತ್ತು.
ಸ್ಪಿನ್ನರ್ ಮಹೀಶ್ ತೀಕ್ಷಣ ಬೌಲಿಂಗ್ನಲ್ಲಿ ಸತತ ಬೌಂಡರಿ ಗಳಿಸಿ 25 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಕಿಶನ್ ಅವರು ಮುಂದಿನ 20 ಎಸೆತಗಳಲ್ಲಿ ಶತಕವನ್ನು ಪೂರೈಸಿದರು. ಸನ್ರೈಸರ್ಸ್ನ ಹೊಸ ಆಟಗಾರ ಇಶಾನ್ ಕಿಶನ್ 45 ಎಸೆತಗಳಲ್ಲಿ ಐಪಿಎಲ್ನಲ್ಲಿ ತನ್ನ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ರಾಹುಲ್ ತ್ರಿಪಾಠಿ ಬದಲಿಗೆ 3ನೇ ಕ್ರಮಾಂಕದಲ್ಲಿ ಆಡಿದ ಕಿಶನ್ ಹೈದರಾಬಾದ್ ತಂಡ ಬೃಹತ್ ಮೊತ್ತ ಗಳಿಸಲು ಪ್ರಮುಖ ಕೊಡುಗೆ ನೀಡಿದರು.
ರಾಜಸ್ಥಾನ ರಾಯಲ್ಸ್ ಬೌಲಿಂಗ್ ಘಟಕವು ಸನ್ರೈಸರ್ಸ್ ಬ್ಯಾಟರ್ ಗಳ ಅಬ್ಬರಕ್ಕೆ ನಿರುತ್ತರವಾಯಿತು. ಜೋಫ್ರಾ ಆರ್ಚರ್ ತನ್ನ 4 ಓವರ್ ಗಳಲ್ಲಿ 76 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು. ತುಷಾರ್ ದೇಶಪಾಂಡೆ(3-44) ಹಾಗೂ ಮಹೀಶ್ ತೀಕ್ಷಣ(2-52) ಮಾತ್ರ ಉತ್ತಮ ಬೌಲಿಂಗ್ ಮಾಡಿದರು.
ಸನ್ರೈಸರ್ಸ್ ತಂಡವು ಕಳೆದ ಎರಡು ಐಪಿಎಲ್ ಋತುಗಳಲ್ಲಿ 4ನೇ ಬಾರಿ 260ಕ್ಕೂ ಅಧಿಕ ರನ್ ಕಲೆ ಹಾಕಿದೆ. ಐಪಿಎಲ್ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ತಂಡಗಳ ಪಟ್ಟಿಯಲ್ಲಿ ಮೊದಲ 3 ಸ್ಥಾನದಲ್ಲಿ ಸನ್ರೈಸರ್ಸ್ ತಂಡವಿದೆ.
►ಐಪಿಎಲ್ನಲ್ಲಿ ತಂಡವೊಂದರ ಗರಿಷ್ಠ ಮೊತ್ತ
287/3: ಸನ್ರೈಸರ್ಸ್ ಹೈದರಾಬಾದ್-ಆರ್ಸಿಬಿ, ಬೆಂಗಳೂರು, 2024
286/6: ಸನ್ರೈಸರ್ಸ್ ಹೈದರಾಬಾದ್-ರಾಜಸ್ಥಾನ ರಾಯಲ್ಸ್, ಹೈದರಾಬಾದ್, 2025
277/3: ಸನ್ರೈಸರ್ಸ್ ಹೈದರಾಬಾದ್-ಮುಂಬೈಇಂಡಿಯನ್ಸ್, ಹೈದರಾಬಾದ್, 2024
272/7: ಕೋಲ್ಕತಾ ನೈಟ್ ರೈಡರ್ಸ್-ಡೆಲ್ಲಿ ಕ್ಯಾಪಿಟಲ್ಸ್, ವಿಶಾಖಪಟ್ಟಣ, 2024
266/7: ಸನ್ರೈಸರ್ಸ್ ಹೈದರಾಬಾದ್-ಡೆಲ್ಲಿ ಕ್ಯಾಪಿಟಲ್ಸ್, ದಿಲ್ಲಿ, 2024
263/5: ಆರ್ಸಿಬಿ-ಪಂಜಾಬ್ ವಾರಿಯರ್ಸ್, ಬೆಂಗಳೂರು, 2013.