4ನೇ ಟಿ20: ಪಾಕಿಸ್ತಾನದ ವಿರುದ್ಧ ನ್ಯೂಝಿಲ್ಯಾಂಡ್ ಗೆ ಬೃಹತ್ ಅಂತರದ ಗೆಲುವು

PC : X \ @ICC
ಮೌಂಟ್ ಮೌಂಗ್ ನುಯಿ: ನಾಲ್ಕನೇ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು 115 ರನ್ ಅಂತರದಿಂದ ಮಣಿಸಿದ ನ್ಯೂಝಿಲ್ಯಾಂಡ್ ತಂಡ 5 ಪಂದ್ಯಗಳ ಟಿ20 ಸರಣಿಯಲ್ಲಿ 3-1 ಅಂತರದಿಂದ ಮುನ್ನಡೆ ಸಾಧಿಸಿದೆ.
ರವಿವಾರ ನಡೆದ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 220 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ಪಾಕಿಸ್ತಾನ ತಂಡವನ್ನು 17 ಓವರ್ನೊಳಗೆ ಕೇವಲ 105 ರನ್ಗೆ ನಿಯಂತ್ರಿಸಿತು.
ವೇಗಿದ್ವಯರಾದ ಜೇಕಬ್ ಡಫಿ(4-20)ಹಾಗೂ ಝಾಕ್ ಫೌಲ್ಕೆಸ್(3-25)ಬೌಲಿಂಗ್ ದಾಳಿಯ ನೇತೃತ್ವವಹಿಸಿದ್ದು, ಪಾಕಿಸ್ತಾನ ತಂಡವು ಟಿ20 ಕ್ರಿಕೆಟ್ ನಲ್ಲಿ ಭಾರೀ ರನ್ ಅಂತರದಿಂದ ಸೋಲಲು ಕಾರಣರಾದರು. 9 ವರ್ಷಗಳ ಹಿಂದೆ ವೆಲ್ಲಿಂಗ್ಟನ್ ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧವೇ 95 ರನ್ ಅಂತರದಿಂದ ಸೋತಿತ್ತು.
ಪಾಕಿಸ್ತಾನ ತಂಡ 9 ರನ್ಗೆ 3 ವಿಕೆಟ್ ಗಳನ್ನು ಕಳೆದುಕೊಂಡು ಆರಂಭಿಕ ಕುಸಿತ ಕಂಡಿತು. ಈ ವೇಳೆ ಡಫಿ ಎರಡು ವಿಕೆಟ್ ಗಳನ್ನು ಪಡೆದರು. ಆಕ್ಲೆಂಡ್ ನಲ್ಲಿ ಶತಕ ಸಿಡಿಸಿದ್ದ ಆರಂಭಿಕ ಬ್ಯಾಟರ್ ಹಸನ್ ನವಾಝ್ 1 ರನ್ ಗಳಿಸಿ ಔಟಾದರು.
ಅಬ್ದುಲ್ ಸಮದ್(44 ರನ್, 30 ಎಸೆತ)ಹಾಗೂ ಇರ್ಫಾನ್ ಖಾನ್(24 ರನ್)ಒಂದಷ್ಟು ಪ್ರತಿರೋಧ ಒಡ್ಡಿದರು. ಉಳಿದ ಬ್ಯಾಟರ್ ಗಳು ಎರಡಂಕೆ ದಾಟುವಲ್ಲಿ ವಿಫಲರಾದರು.
ನ್ಯೂಝಿಲ್ಯಾಂಡ್ ಟಿ20 ಕ್ರಿಕೆಟ್ ನಲ್ಲಿ ಎರಡನೇ ಅತಿ ದೊಡ್ಡ ರನ್ ಅಂತರದಿಂದ ಜಯ ಸಾಧಿಸಿತು. ಇದೇ ಮೈದಾನದಲ್ಲಿ 2018ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ 119 ರನ್ ಅಂತರದಿಂದ ಜಯ ಸಾಧಿಸಿತ್ತು.
ಇದಕ್ಕೂ ಮೊದಲು ಕಿವೀಸ್ ಬ್ಯಾಟರ್ ಫಿನ್ ಅಲ್ಲೆನ್ 20 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಗಳ ಸಹಾಯದಿಂದ ಅರ್ಧಶತಕ ಪೂರೈಸಿದ್ದಲ್ಲದೆ, ಟಿಮ್ ಸೀಫರ್ಟ್(44 ರನ್, 22 ಎಸೆತ)ಅವರೊಂದಿಗೆ ಮೊದಲ ವಿಕೆಟ್ ಗೆ 59 ರನ್ ಜೊತೆಯಾಟ ನಡೆಸಿದರು.
ಹಾರಿಸ್ ರವೂಫ್(3-27) ಸೀಫರ್ಟ್ ಸಹಿತ ಮೂರು ವಿಕೆಟ್ ಗಳನ್ನು ಪಡೆದರು. ನಾಯಕ ಮೈಕಲ್ ಬ್ರೆಸ್ವೆಲ್ 26 ಎಸೆತಗಳಲ್ಲಿ ಔಟಾಗದೆ 46 ರನ್ ಗಳಿಸಿದರು.