IPL 2025 | ಮೊದಲ ಪಂದ್ಯದಲ್ಲೇ ಕೆಕೆಆರ್‌ ವಿರುದ್ಧ ಗೆದ್ದು ಬೀಗಿದ ಆರ್‌ಸಿಬಿ

Update: 2025-03-22 22:49 IST
IPL 2025 | ಮೊದಲ ಪಂದ್ಯದಲ್ಲೇ ಕೆಕೆಆರ್‌ ವಿರುದ್ಧ ಗೆದ್ದು ಬೀಗಿದ ಆರ್‌ಸಿಬಿ

PC | X

  • whatsapp icon

ಕೋಲ್ಕತಾ: ‘ಚೇಸಿಂಗ್ ಕಿಂಗ್’ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್, ಆಲ್ ರೌಂಡರ್ ಕೃನಾಲ್ ಪಾಂಡ್ಯ(3-29) ನೇತೃತ್ವದ ಬೌಲರ್ ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 7 ವಿಕೆಟ್ ಗಳ ಅಂತರದಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಶನಿವಾರ ಗೆಲ್ಲಲು 175 ರನ್ ಗುರಿ ಬೆನ್ನಟ್ಟಿದ ಆರ್ ಸಿ ಬಿ ತಂಡವು 16.2 ಓವರ್ ಗಳಲ್ಲಿ 3 ವಿಕೆಟ್ ಗಳ ನಷ್ಟಕ್ಕೆ 177 ರನ್ ಗಳಿಸಿತು. ಕೊಹ್ಲಿ ಔಟಾಗದೆ 59 ರನ್(36 ಎಸೆತ, 4 ಬೌಂಡರಿ, 3 ಸಿಕ್ಸರ್)ಹಾಗೂ ಲಿವಿಂಗ್ ಸ್ಟೋನ್(ಔಟಾಗದೆ 15)ಇನ್ನೂ 22 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು.

ಫಿಲ್ ಸಾಲ್ಟ್ ಜೊತೆ ಇನಿಂಗ್ಸ್ ಆರಂಭಿಸಿದ ಕೊಹ್ಲಿ ಮೊದಲ ವಿಕೆಟ್ ನಲ್ಲಿ 8.3 ಓವರ್ ಗಳಲ್ಲಿ 95 ರನ್ ಜೊತೆಯಾಟ ನಡೆಸಿ ರನ್ ಚೇಸ್ ಗೆ ಭದ್ರ ಬುನಾದಿ ಹಾಕಿಕೊಟ್ಟರು. ಸಾಲ್ಟ್ ಔಟಾದ ಸ್ವಲ್ಪ ಹೊತ್ತಿನಲ್ಲಿ ದೇವದತ್ತ ಪಡಿಕ್ಕಲ್(10 ರನ್)ವಿಕೆಟ್ ಒಪ್ಪಿಸಿದರು. ಕೊಹ್ಲಿ ಜೊತೆಗೆ 3ನೆ ವಿಕೆಟ್ಗೆ 44 ರನ್ ಸೇರಿಸಿದ ನಾಯಕ ರಜತ್ ಪಾಟಿದಾರ್ 34 ರನ್ ಗಳಿಸಿದರು.

ಹರ್ಷಿತ್ ರಾಣಾ ಎಸೆತವನ್ನು ಬೌಂಡರಿಗೆ ಅಟ್ಟಿದ ಕೊಹ್ಲಿ ಕೇವಲ 30 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಕೊಹ್ಲಿ ಮೈಲಿಗಲ್ಲು ತಲುಪಿದ ನಂತರ ಮೈದಾನಕ್ಕೆ ನುಸುಳಿದ ಕ್ರಿಕೆಟ್ ಅಭಿಮಾನಿಯೊಬ್ಬ ಕೊಹ್ಲಿ ಕಾಲಿಗೆ ಎರಗಿದ್ದಾನೆ.

ಇದೇ ವೇಳೆ ಐಪಿಎಲ್ ನಲ್ಲಿ ಕೆಕೆಆರ್ ವಿರುದ್ಧ ಕೊಹ್ಲಿ ಸಾವಿರಕ್ಕೂ ಅಧಿಕ ರನ್ ಗಳಿಸಿದರು. ಡೇವಿಡ್ ವಾರ್ನರ್(1093 ರನ್)ಹಾಗೂ ರೋಹಿತ್ ಶರ್ಮಾ(1070 ರನ್) ಈ ಸಾಧನೆ ಮಾಡಿದ್ದಾರೆ.

►ಕೆಕೆಆರ್ 174/8

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡದ ಪರ ನಾಯಕ ಅಜಿಂಕ್ಯ ರಹಾನೆ (56 ರನ್, 31 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಸುನೀಲ್ ನರೇನ್(44 ರನ್, 26 ಎಸೆತ, 5 ಬೌಂಡರಿ, 3 ಸಿಕ್ಸರ್) 2ನೇ ವಿಕೆಟ್ ನಲ್ಲಿ 103 ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದ್ದರೂ ಆರ್ ಸಿ ಬಿ ಬೌಲರ್ ಗಳು ಶಿಸ್ತುಬದ್ದ ಬೌಲಿಂಗ್ ದಾಳಿ ಸಂಘಟಿಸಿ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 174 ರನ್ ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ಮೊದಲ 10 ಓವರ್ ಗಳಲ್ಲಿ 107 ರನ್ ಬಿಟ್ಟುಕೊಟ್ಟಿದ್ದ ಆರ್ ಸಿ ಬಿ ಆ ನಂತರ ಮರು ಹೋರಾಟವನ್ನು ನೀಡಿತು. 4 ಓವರ್ ಗಳಲ್ಲಿ 22 ರನ್ ಗೆ 2 ವಿಕೆಟ್ ಪಡೆದಿರುವ ಜೋಶ್ ಹೇಝಲ್ ವುಡ್ ಕೊನೆಯ ಓವರ್ನಲ್ಲಿ ಕೇವಲ 5 ರನ್ ನೀಡಿ ಒಂದು ವಿಕೆಟ್ ಉರುಳಿಸಿದರು.

ದ್ವಿತೀಯಾರ್ಧದಲ್ಲಿ ಕೆಕೆಆರ್ ತಂಡವು ನಿರಂತರವಾಗಿ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಾ ಸಾಗಿದ್ದು, ಕೃನಾಲ್ ಪಾಂಡ್ಯ(3-29) ಅವರು ರಹಾನೆ(56 ರನ್), ವೆಂಕಟೇಶ್ ಅಯ್ಯರ್(6 ರನ್)ಹಾಗೂ ರಿಂಕು ಸಿಂಗ್(12 ರನ್)ವಿಕೆಟ್ ಗಳನ್ನು ಉರುಳಿಸಿ ಕೆಕೆಆರ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು.

ಕೆಕೆಆರ್ನ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್(4 ರನ್),ಆಂಡ್ರೆ ರಸೆಲ್(4 ರನ್), ರಮಣ್ ದೀಪ್ ಸಿಂಗ್(6), ಹರ್ಷಿತ್ ರಾಣಾ(5 ರನ್)ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ರಘುವಂಶಿ 30 ರನ್ ಕೊಡುಗೆ ನೀಡಿದರು.

ಆರ್ ಸಿ ಬಿ ಪರ ಪಾಂಡ್ಯ ಯಶಸ್ವಿ ಪ್ರದರ್ಶನ ನೀಡಿದರೆ, ಜೋಶ್ ಹೇಝಲ್ ವುಡ್(2-22) 2 ವಿಕೆಟ್ ಪಡೆದರು. ಯಶ್ ದಯಾಳ್(1-25), ರಸಿಕ್ ಸಲಾಮ್(1-35)ಹಾಗೂ ಸುಯಶ್ ಶರ್ಮಾ(1-47)ತಲಾ ಒಂದು ವಿಕೆಟ್ ಪಡೆದರು.

►ಸಂಕ್ಷಿಪ್ತ ಸ್ಕೋರ್

ಕೋಲ್ಕತಾ ನೈಟ್ ರೈಡರ್ಸ್: 20 ಓವರ್ ಗಳಲ್ಲಿ 174/8

(ಅಜಿಂಕ್ಯ ರಹಾನೆ 56, ಸುನೀಲ್ ನರೇನ್ 44, ರಘುವಂಶಿ 30, ಕೃನಾಲ್ ಪಾಂಡ್ಯ 3-29, ಹೇಝಲ್ ವುಡ್ 2-22)

ರಾಯಲ್ ಚಾಲೆಂಜರ್ಸ್ ಬೆಂಗಳೂರು: 16.2 ಓವರ್ ಗಳಲ್ಲಿ 177/3

(ವಿರಾಟ್ ಕೊಹ್ಲಿ ಔಟಾಗದೆ 59, ಫಿಲ್ ಸಾಲ್ಟ್ 56, ರಜತ್ ಪಾಟಿದಾರ್ 34, ನರೇನ್ 1-27)

 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News