ಮಿಯಾಮಿ ಓಪನ್-2025 | ರಫೆಲ್ ನಡಾಲ್ ದಾಖಲೆ ಸರಿಗಟ್ಟಿದ ಜೊಕೊವಿಕ್

Update: 2025-03-22 20:27 IST
Djokovic

 ನೊವಾಕ್ ಜೊಕೊವಿಕ್  | PTI  

  • whatsapp icon

ಮಿಯಾಮಿ: ಬಹು ನಿರೀಕ್ಷಿತ ಮಿಯಾಮಿ ಓಪನ್ ಟೆನಿಸ್ ಟೂರ್ನಿಗೆ ವಾಪಸಾಗಿರುವ ಆರು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯದ ರಿಂಕಿ ಹಿಜಿಕಾಟಾರನ್ನು 6-0, 7-6(1) ಸೆಟ್ಗಳ ಅಂತರದಿಂದ ಮಣಿಸುವ ಮೂಲಕ ಮೂರನೇ ಸುತ್ತಿಗೆ ತಲುಪಿದ್ದಾರೆ. ಪೋಲ್ಯಾಂಡ್ ಆಟಗಾರ್ತಿ ಇಗಾ ಸ್ವಿಯಾಟೆಕ್ ಕೂಡ 3ನೇ ಸುತ್ತಿಗೇರಿದ್ದಾರೆ.

ಜೊಕೊವಿಕ್ 2019ರ ನಂತರ ಮೊದಲ ಬಾರಿ ಮಿಯಾಮಿಗೆ ಮರಳಿದ್ದಾರೆ. ಸರ್ಬಿಯದ 4ನೇ ಶ್ರೇಯಾಂಕದ ಆಟಗಾರ ಎಟಿಪಿ ಮಾಸ್ಟರ್ಸ್-1000 ಮಟ್ಟದ ಟೂರ್ನಿಯಲ್ಲಿ ತನ್ನ 410ನೇ ಗೆಲುವು ದಾಖಲಿಸಿದರು. ಈ ಮೂಲಕ ಗರಿಷ್ಠ ಗೆಲುವು ದಾಖಲಿಸಿರುವ ಸ್ಪೇನ್ ಸೂಪರ್ಸ್ಟಾರ್ ರಫೆಲ್ ನಡಾಲ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

‘‘ನಾನು ನಿಜವಾಗಿಯೂ ಆರಂಭದಿಂದಲೇ ಉನ್ನತ ಮಟ್ಟದಲ್ಲಿ ಆಡಿದ್ದೇನೆ. ಹೇಗೆ ರಣನೀತಿ ರೂಪಿಸಬೇಕೆಂದು ನನಗೆ ಸರಿಯಾಗಿ ಗೊತ್ತಿತ್ತು. ಇದು ಮೊದಲ ಪಂದ್ಯ. ನಾನು ಆಡಿರುವ ರೀತಿಯು ನಿಜವಾಗಿಯೂ ಉತ್ತೇಜನಕಾರಿಯಾಗಿತ್ತು’’ ಎಂದು ತನ್ನ ಆನ್-ಕೋರ್ಟ್ ಸಂದರ್ಶನದಲ್ಲಿ ಜೊಕೊವಿಕ್ ಹೇಳಿದ್ದಾರೆ.

ಜೊಕೊವಿಕ್ ಮೊದಲ ಸೆಟ್ಟನ್ನು ಕೇವಲ 27 ನಿಮಿಷಗಳಲ್ಲಿ ಗೆದ್ದುಕೊಂಡರು. ಆಸ್ಟ್ರೇಲಿಯ ಆಟಗಾರ ಹಿಜಿಕಾಟಾ 2ನೇ ಸೆಟ್ನಲ್ಲಿ ಹೆಚ್ಚು ಆತ್ಮವಿಶ್ವಾಸದಿಂದ ಆಡಿದರು. ಟೈ-ಬ್ರೇಕರ್ನಲ್ಲಿ ಕೊನೆಯ 6 ಅಂಕ ಗಳಿಸಿದ ಜೊಕೊವಿಕ್ ಪಂದ್ಯವನ್ನು ಗೆದ್ದುಕೊಂಡರು.

2023ರ ಮಿಯಾಮಿ ಚಾಂಪಿಯನ್, ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಇತ್ತೀಚೆಗೆ ಸೆಮಿ ಫೈನಲ್ಗೆ ತಲುಪಿದ್ದ ರಶ್ಯದ 7ನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಅವರು ಸ್ಪೇನ್ ಆಟಗಾರ ಜೌಮಾ ಮುನಾರ್ರನ್ನು 6-2, 6-3 ಸೆಟ್ಗಳ ಅಂತರದಿಂದ ಸೋಲಿಸಿದರು.

ಈ ಹಿಂದೆ ಮಿಯಾಮಿ ಓಪನ್ನಲ್ಲಿ ಫೈನಲ್ ತಲುಪಿದ್ದ ಕಾಸ್ಪರ್ ರೂಡ್ ಹಾಗೂ ಗ್ರಿಗೊರ್ ಡಿಮಿಟ್ರೋವ್ ಕೂಡ ಮುಂದಿನ ಸುತ್ತಿಗೇರಿದರು.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮಾಜಿ ಚಾಂಪಿಯನ್ ಸ್ವಿಯಾಟೆಕ್ ಸತತ 2ನೇ ಬಾರಿ ಕರೊಲೀನ್ ಗಾರ್ಸಿಯಾರನ್ನು 6-2, 7-5 ಸೆಟ್ಗಳ ಅಂತರದಿಂದ ಮಣಿಸುವ ಮೂಲಕ 3ನೇ ಸುತ್ತಿಗೇರಿದರು. ಮುಂದಿನ ಸುತ್ತಿನಲ್ಲಿ ಬೆಲ್ಜಿಯಮ್ನ ಎಲ್ಲಿಸ್ ಮೆರ್ಟೆನ್ಸ್ರನ್ನು ಎದುರಿಸಲಿದ್ದಾರೆ. ಮೆರ್ಟೆನ್ಸ್ ಅಮೆರಿಕದ ಪೇಟನ್ ಸ್ಟಿಯರ್ನ್ಸ್ರನ್ನು 6-4, 6-1 ನೇರ ಸೆಟ್ಗಳಿಂದ ಮಣಿಸಿದರು.

ಸ್ವಿಯಾಟೆಕ್ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ 2ನೇ ಸುತ್ತಿನಲ್ಲಿ ಗಾರ್ಸಿಯಾರನ್ನು ನೇರ ಸೆಟ್ಗಳಿಂದ ಸೋಲಿಸಿದ್ದರು. ಸ್ವಿಯಾಟೆಕ್ ಕಳೆದ ವಾರ ಸೆಮಿ ಫೈನಲ್ನಲ್ಲಿ ಸೋತು ಇಂಡಿಯನ್ ವೆಲ್ಸ್ ಟೂರ್ನಿ ತನ್ನಲ್ಲೇ ಉಳಿಸಿಕೊಳ್ಳುವುದರಿಂದ ವಂಚಿತರಾಗಿದ್ದರು.

ಮಾಜಿ ಯು.ಎಸ್. ಓಪನ್ ಚಾಂಪಿಯನ್ ಎಮ್ಮಾ ರಾಡುಕಾನು ಅವರು ಎಮ್ಮಾ ನವಾರ್ರೊ ವಿರುದ್ಧ 7-6(6), 2-6, 7-6(3) ಸೆಟ್ಗಳ ಅಂತರದಿಂದ ಮಣಿಸಿ ಮುಂದಿನ ಸುತ್ತಿಗೇರಿದರು.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News