ಧೋನಿ, ರೋಹಿತ್, ವಿರಾಟ್‌ಗೆ ಕೊನೆಯ ಐಪಿಎಲ್?

Update: 2025-03-21 21:08 IST
ಧೋನಿ, ರೋಹಿತ್, ವಿರಾಟ್‌ಗೆ ಕೊನೆಯ ಐಪಿಎಲ್?
  • whatsapp icon

ಹೊಸದಿಲ್ಲಿ: ಕೆಲವು ಆಧುನಿಕ ಶ್ರೇಷ್ಠ ಕ್ರಿಕೆಟಿಗರಿಗೆ ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಐಪಿಎಲ್ ಒಂದು ಭವ್ಯ ವೇದಿಕೆಯಾಗಿದೆ. ಆದರೆ ಎಲ್ಲ ಒಳ್ಳೆಯದ್ದಕ್ಕೂ ಕೊನೆ ಎನ್ನುವುದಿದೆ. ಲೆಜೆಂಡ್ ಆಟಗಾರರಾದ ಎಂ.ಎಸ್. ಧೋನಿ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪಾಲಿಗೆ ಈ ಬಾರಿಯ ಐಪಿಎಲ್ ಕೊನೆಯದಾಗುವ ಸಾಧ್ಯತೆಯಿದೆ.

► ರೋಹಿತ್ ಶರ್ಮಾ: ರೋಹಿತ್ ಮುಂಬೈ ಇಂಡಿಯನ್ಸ್ ತಂಡ 5 ಬಾರಿ ಐಪಿಎಲ್ ಪ್ರಶಸ್ತಿಗಳನ್ನು ಜಯಿಸಲು ನಾಯಕತ್ವವಹಿಸಿದ್ದರು. 2024ರ ಐಪಿಎಲ್‌ನಲ್ಲಿ ನಾಯಕತ್ವದಿಂದ ಮುಕ್ತರಾಗಿದ್ದ 37ರ ಹರೆಯದ ರೋಹಿತ್ 14 ಪಂದ್ಯಗಳಲ್ಲಿ 417 ರನ್ ಗಳಿಸಿದ್ದರು. ಟಿ-20 ವಿಶ್ವಕಪ್ ಗೆದ್ದ ನಂತರ ರೋಹಿತ್ ಈಗಾಗಲೇ ಟಿ-20 ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಇದೇ ರೀತಿ ಐಪಿಎಲ್‌ನಿಂದ ನಿರ್ಗಮಿಸಲು ರೋಹಿತ್ ಎದುರು ನೋಡುತ್ತಿದ್ದಾರೆ.   

► ವಿರಾಟ್ ಕೊಹ್ಲಿ: ‘ಕಿಂಗ್ ಕೊಹ್ಲಿ’ ಈ ಹಿಂದಿನ ಐಪಿಎಲ್ ಋತುವಿನಲ್ಲಿ 61.75ರ ಸರಾಸರಿಯಲ್ಲಿ 15 ಪಂದ್ಯಗಳಲ್ಲಿ 1 ಶತಕ ಹಾಗೂ 5 ಅರ್ಧಶತಕಗಳ ಸಹಿತ 741 ರನ್ ಗಳಿಸಿದ್ದರು. ಆದರೆ ಆರ್‌ಸಿಬಿ ಮತ್ತೊಮ್ಮೆ ಪ್ರಶಸ್ತಿ ವಂಚಿತವಾಗಿತ್ತು. ಕಳೆದ ವರ್ಷ ಟಿ-20 ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಕೊಹ್ಲಿ ಈ ಬಾರಿ ರಜತ್ ಪಾಟಿದಾರ್ ನಾಯಕತ್ವದಡಿ ಆಡಲಿದ್ದಾರೆ. ಈ ತನಕ ಕೈಗೆಟುಕದ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯುವ ವಿಶ್ವಾಸದಲ್ಲಿದ್ದಾರೆ.

► ಎಂ.ಎಸ್. ಧೋನಿ: ಕಳೆದ ಕೆಲವು ವರ್ಷಗಳಿಂದ ಧೋನಿ ಐಪಿಎಲ್ ಭವಿಷ್ಯದ ಕುರಿತು ಊಹಾಪೋಹ ಹರಡಿದ್ದವು. ಐಪಿಎಲ್ 2023ರ ನಂತರ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಧೋನಿ ಕೊನೆಯ ಓವರ್‌ಗಳಲ್ಲಿ ಕ್ರೀಸ್‌ಗೆ ಇಳಿದು ಗಮನಾರ್ಹ ಪ್ರಭಾವ ಬೀರುತ್ತಿದ್ದಾರೆ. ಕಳೆದ ಋತುವಿನಲ್ಲಿ 14 ಪಂದ್ಯಗಳಲ್ಲಿ 53.66ರ ಸರಾಸರಿಯಲ್ಲಿ 161 ರನ್ ಗಳಿಸಿದ್ದಾರೆ. 43ರ ವಯಸ್ಸಿನ ಧೋನಿ ಈ ಬಾರಿ ಐಪಿಎಲ್‌ಗೆ ವಿದಾಯ ಹೇಳಲಿದ್ದಾರೆಯೇ? ಕಾದು ನೋಡಬೇಕಾಗಿದೆ.

► ಎಫ್ ಡು ಪ್ಲೆಸಿಸ್: 2021ರಲ್ಲಿ ಕೊನೆಯ ಟೆಸ್ಟ್ ಪಂದ್ಯ ಆಡಿದ್ದ ದ. ಆಫ್ರಿಕಾದ ಆಟಗಾರ ಡು ಪ್ಲೆಸಿಸ್ ಐಪಿಎಲ್‌ನಲ್ಲಿ ಮಿಂಚುವುದನ್ನು ಮುಂದುವರಿಸಿದ್ದಾರೆ.ನಾಯಕನಾಗಿ ಆರ್‌ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ್ದರು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಉಪ ನಾಯಕನಾಗಿದ್ದಾರೆ. 40ರ ವಯಸ್ಸಿನ ಡು ಪ್ಲೆಸಿಸ್ ಐಪಿಎಲ್-2024ರಲ್ಲಿ 15 ಪಂದ್ಯಗಳಲ್ಲಿ 4 ಅರ್ಧಶತಕಗಳ ಸಹಿತ 438 ರನ್ ಗಳಿಸಿದ್ದಾರೆ. ಡೆಲ್ಲಿಗೆ ಚೊಚ್ಚಲ ಪ್ರಶಸ್ತಿ ಗೆದ್ದುಕೊಟ್ಟು ಐಪಿಎಲ್‌ಗೆ ವಿದಾಯ ಹೇಳಲಿದ್ದಾರೆಯೇ? ಎಂಬ ಪ್ರಶ್ನೆ ಎಲ್ಲರಲ್ಲಿದೆ.

► ಸುನೀಲ್ ನರೇನ್: ‘ಡೈನಾಮಿಕ್ ಆಲ್‌ರೌಂಡರ್’ ನರೇನ್ ಕಳೆದ ವರ್ಷ ಆರಂಭಿಕ ಆಟಗಾರನಾಗಿ ಚೊಚ್ಚಲ ಐಪಿಎಲ್ ಶತಕ ಹಾಗೂ 3 ಅರ್ಧಶತಕಗಳ ಸಹಿತ 34.85ರ ಸರಾಸರಿಯಲ್ಲಿ 15 ಪಂದ್ಯಗಳಲ್ಲಿ 488 ರನ್ ಗಳಿಸಿದ್ದರು. ಅಗ್ರ ಸರದಿಯಲ್ಲಿ ಫಿಲ್ ಸಾಲ್ಟ್‌ರೊಂದಿಗೆ ಭರ್ಜರಿ ಜೊತೆಯಾಟ ನಡೆಸಿದ ಕೆಕೆಆರ್ ಪ್ರಶಸ್ತಿ ಗೆಲ್ಲಲು ನೆರವಾಗಿದ್ದರು. ವಿಂಡೀಸ್ ಆಟಗಾರ ವಿದಾಯ ಹೇಳುವ ಮೊದಲು ಮತ್ತೊಂದು ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ.

► ಆಂಡ್ರೆ ರಸೆಲ್: ನರೇನ್‌ರಂತೆಯೇ ರಸೆಲ್ ಕೂಡ ಕೆಕೆಆರ್‌ನೊಂದಿಗೆ ದೀರ್ಘ ನಂಟು ಹೊಂದಿದ್ದಾರೆ. ಸಿಕ್ಸರ್ ಸಿಡಿಸುವುದರಲ್ಲಿ ನಿಸ್ಸೀಮರಾಗಿದ್ದ ರಸೆಲ್ ಈಚೆಗೆ ಗಾಯದ ಸಮಸ್ಯೆ ಎದುರಿಸಿದ್ದರು. ಕಳೆದ ವರ್ಷ ವಿಂಡೀಸ್ ಆಲ್‌ರೌಂಡರ್ 19 ವಿಕೆಟ್‌ಗಳನ್ನು ಹಾಗೂ 222 ರನ್ ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News