ಚಾಂಪಿಯನ್ಸ್ ಟ್ರೋಫಿ ವಿಜೇತ ಟೀಮ್ ಇಂಡಿಯಾಕ್ಕೆ 58 ಕೋಟಿ ರೂ.ಬಹುಮಾನ ಪ್ರಕಟಿಸಿದ ಬಿಸಿಸಿಐ

PC : BCCI
ಹೊಸದಿಲ್ಲಿ: ಈ ತಿಂಗಳಾರಂಭದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಗುರುವಾರ 58 ಕೋಟಿ ರೂ. ಬಹುಮಾನವನ್ನು ಪ್ರಕಟಿಸಿದೆ.
2025ರ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ಟೀಮ್ ಇಂಡಿಯಾಕ್ಕೆ 58 ಕೋಟಿ ರೂ. ನಗದು ಬಹುಮಾನ ಘೋಷಿಸಲು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಸಂತೋಷಪಡುತ್ತದೆ. ಈ ಆರ್ಥಿಕ ಮನ್ನಣೆಯು ಆಟಗಾರರು, ತರಬೇತಿ ಹಾಗೂ ಸಹಾಯಕ ಸಿಬ್ಬಂದಿ, ಪುರುಷರ ಆಯ್ಕೆ ಸಮಿತಿಯ ಸದಸ್ಯರನ್ನು ಗೌರವಿಸುತ್ತದೆ ಎಂದು ಕ್ರಿಕೆಟ್ ಮಂಡಳಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಭಾರತ ತಂಡವು ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ಮಾ.9ರಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು 4 ವಿಕೆಟ್‌ಗಳ ಅಂತರದಿಂದ ಮಣಿಸಿ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು.
*ಬಹುಮಾನ ಮೊತ್ತವನ್ನು ಹೇಗೆ ವಿತರಿಸಲಾಗುತ್ತದೆ?
15 ಸದಸ್ಯರ ತಂಡದ ಪ್ರತಿಯೊಬ್ಬ ಆಟಗಾರ ಬಿಸಿಸಿಐಯಿಂದ ತಲಾ 3 ಕೋಟಿ ರೂ. ಬಹುಮಾನ ಸ್ವೀಕರಿಸಲಿದ್ದಾರೆ. ಇಷ್ಟೇ ಅಲ್ಲದೆ, 2025ರ ಚಾಂಪಿಯನ್ಸ್ ಟ್ರೋಫಿಯೊಂದಿಗೆ ಪಡೆದಿರುವ ಸಂಪೂರ್ಣ ಬಹುಮಾನ ಮೊತ್ತ(2.24 ಮಿಲಿಯನ್ ಡಾಲರ್, 20 ಕೋಟಿ ರೂ.)ವನ್ನು ಟೀಮ್ ಇಂಡಿಯಾ ಆಟಗಾರರಿಗೆ ಮಾತ್ರ ಹಂಚಲು ಬಿಸಿಸಿಐ ನಿರ್ಧರಿಸಿದೆ.
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಪಂದ್ಯಾವಳಿಯಲ್ಲಿ ಆಡಿದ್ದ ಎಲ್ಲ 5 ಪಂದ್ಯಗಳನ್ನು ಜಯಿಸಿ ಅಜೇಯ ದಾಖಲೆಯೊಂದಿಗೆ ಟ್ರೋಫಿಯನ್ನು ಎತ್ತಿ ಹಿಡಿದಿತ್ತು.
ಗ್ರೂಪ್ ಹಂತದಲ್ಲಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳನ್ನು 6 ವಿಕೆಟ್‌ಗಳಿಂದ ಮಣಿಸಿತ್ತು. ನ್ಯೂಝಿಲ್ಯಾಂಡ್ ವಿರುದ್ಧ ಕೊನೆಯ ಗ್ರೂಪ್ ಪಂದ್ಯವನ್ನು 44 ರನ್‌ಗಳಿಂದ ಗೆದ್ದುಕೊಂಡಿತ್ತು.
ಸೆಮಿ ಫೈನಲ್‌ನಲ್ಲಿ ಆಸ್ಟ್ರೇಲಿಯ ತಂಡವನ್ನು 4 ವಿಕೆಟ್‌ಗಳಿಂದ ಸದೆಬಡಿದು ಪ್ರಶಸ್ತಿ ಸುತ್ತಿಗೇರಿತ್ತು.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು 7 ವಿಕೆಟ್‌ಗೆ 251 ರನ್‌ಗೆ ನಿಯಂತ್ರಿಸಿದ ಭಾರತ ತಂಡವು ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
‘‘ಸತತ ಐಸಿಸಿ ಪ್ರಶಸ್ತಿಗಳನ್ನು ಗೆಲ್ಲುವುದು ವಿಶೇಷವಾಗಿದೆ. ಈ ಪ್ರಶಸ್ತಿಯು ಜಾಗತಿಕ ವೇದಿಕೆಯಲ್ಲಿ ಟೀಮ್ ಇಂಡಿಯಾದ ಸಮರ್ಪಣೆ ಹಾಗೂ ಶ್ರೇಷ್ಠತೆಯನ್ನು ಗುರುತಿಸುತ್ತದೆ. ಈ ನಗದು ಪ್ರಶಸ್ತಿಯು ಪ್ರತಿಯೊಬ್ಬರೂ ತೆರೆಮರೆಯಲ್ಲಿ ಪಡುವ ಕಠಿಣ ಪರಿಶ್ರಮಕ್ಕೆ ಸಂದ ಗೌರವವಾಗಿದೆ. ಮಹಿಳೆಯರ ಅಂಡರ್-19 ಐಸಿಸಿ ವಿಶ್ವಕಪ್ ಗೆಲುವಿನ ನಂತರ 2025ರಲ್ಲಿ ನಾವು ಗೆದ್ದಿರುವ 2ನೇ ಐಸಿಸಿ ಪ್ರಶಸ್ತಿ ಇದಾಗಿದೆ. ಇದು ನಮ್ಮ ದೇಶದಲ್ಲಿರುವ ಬಲಿಷ್ಠ ಕ್ರಿಕೆಟ್ ವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ’’ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
►ಗಂಭೀರ್, ಅಜಿತ್ ಅಗರ್ಕರ್‌ಗೂ ಬಹುಮಾನ
ಇದೇ ವೇಳೆ, ಭಾರತದ ಪ್ರಧಾನ ಕೋಚ್ ಗೌತಮ್ ಗಂಭೀರ್ ಕೂಡ ಆಟಗಾರರಷ್ಟೆ ಬಹುಮಾನ ಮೊತ್ತ(3 ಕೋಟಿ ರೂ.)ಸ್ವೀಕರಿಸಲಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಗೆಲುವಿಗಾಗಿ ಸಹಾಯಕ ಸಿಬ್ಬಂದಿ ವಿಭಾಗದ ಪ್ರತೀ ಸದಸ್ಯರು ತಲಾ 50 ಲಕ್ಷ ರೂ.ವನ್ನು ಬಿಸಿಸಿಐಯಿಂದ ಸ್ವೀಕರಿಸಲಿದ್ದಾರೆ.
ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ 30 ಲಕ್ಷ ರೂ. ಪಡೆಯಲಿದ್ದಾರೆ. ಇತರ ನಾಲ್ವರು ರಾಷ್ಟ್ರೀಯ ಆಯ್ಕೆಗಾರರು 25 ಲಕ್ಷ ರೂ. ಸ್ವೀಕರಿಸಲಿದ್ದಾರೆ. ದುಬೈನಲ್ಲಿ ಟೀಮ್ ಇಂಡಿಯಾ ಜೊತೆಗಿದ್ದ ಬಿಸಿಸಿಐ ಸಿಬ್ಬಂದಿ ಸದಸ್ಯರು ತಲಾ 25 ಲಕ್ಷ ರೂ. ಪಡೆಯಲಿದ್ದಾರೆ.
ಬಿಸಿಸಿಐ ಗೌರವ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹಾಗೂ ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ಭಾರತ ತಂಡಕ್ಕೆ ಶುಭಾಶಯ ಕೋರಿದ್ದಾರೆ. ನಗದು ಬಹುಮಾನವು ಪಂದ್ಯಾವಳಿಯುದ್ದಕ್ಕೂ ತಂಡವು ನೀಡಿರುವ ಅತ್ಯುತ್ತಮ ಪ್ರದರ್ಶನಕ್ಕೆ ಲಭಿಸಿದ ಗೌರವವಾಗಿದೆೆ ಎಂದು ಅವರು ಹೇಳಿದರು.