IPL 2025 | ಕೆಕೆಆರ್-ಆರ್‌ಸಿಬಿ ಉದ್ಘಾಟನಾ ಪಂದ್ಯಕ್ಕೆ ಮಳೆ ಭೀತಿ

Photo: X/@RCBTweets
ಕೋಲ್ಕತ್ತಾ: ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಇಂದು (ಶನಿವಾರ) ಮುಖಾಮುಖಿಯಾಗುತ್ತಿವೆ. ಐಪಿಎಲ್ 18ನೇ ಆವೃತ್ತಿಯ ಚೊಚ್ಚಲ ಪಂದ್ಯವು ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಸಂಭವಿಸಿದ ವಾಯುಭಾರ ಕುಸಿತದಿಂದ ಶುಕ್ರವಾರ ಕೋಲ್ಕತ್ತಾದಲ್ಲಿ ಮಳೆಯಾಗಿದ್ದು, ಎರಡೂ ತಂಡಗಳ ಸಂಜೆ ಅಭ್ಯಾಸಕ್ಕೆ ಅಡಚಣೆಯುಂಟಾಯಿತು. ಉಭಯ ತಂಡಗಳ ಅಭ್ಯಾಸ ಸಂಜೆ 5 ಗಂಟೆಗೆ ಪ್ರಾರಂಭಗೊಂಡಿತಾದರೂ, ಸಂಜೆ 6 ಗಂಟೆಗೆ ಮಳೆ ಸುರಿದಿದ್ದರಿಂದ, ಅಭ್ಯಾಸವನ್ನು ಮೊಟಕುಗೊಳಿಸಲಾಯಿತು.
ಈ ನಡುವೆ ಹಮಾಮಾನ ಇಲಾಖೆಯು ಶುಕ್ರವಾರ ಹಾಗು ಶನಿವಾರ ಕೋಲ್ಕತ್ತಾದಲ್ಲಿ 'ಆರೆಂಜ್ ಅಲರ್ಟ್' ಘೋಷಿಸಿದೆ. ಈ ವೇಳೆ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಕೆಕೆಆರ್-ಆರ್‌ಸಿಬಿ ತಂಡಗಳ ನಡುವಿನ ಉದ್ಘಾಟನಾ ಪಂದ್ಯಕ್ಕೆ ಅಡ್ಡಿಯುಂಟಾಗುವ ಸಾಧ್ಯತೆ ದಟ್ಟವಾಗಿದೆ.
ಶನಿವಾರ ಶೇ. 74ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದ್ದು, ಐಪಿಎಲ್ ನಿಯಮಾವಳಿಯಂತೆ ಪಂದ್ಯ ಪೂರ್ಣಗೊಳ್ಳಲು ಒಂದು ಗಂಟೆ ಹೆಚ್ಚುವರಿ ಅವಧಿಯನ್ನು ಮೀಸಲಿಡಲಾಗಿದೆ.