ಮೊದಲ 3 ಪಂದ್ಯಗಳಿಗೆ ರಾಜಸ್ಥಾನ ರಾಯಲ್ಸ್‌ಗೆ ರಿಯಾನ್ ಪರಾಗ್ ನಾಯಕ

ರಿಯಾನ್ ಪರಾಗ್ | PC : PTI
ಜೈಪುರ: ಮುಂಬರುವ ಐಪಿಎಲ್ ಟಿ20 ಟೂರ್ನಿಯ ಮೊದಲ ಮೂರು ಪಂದ್ಯಗಳಿಗೆ ರಿಯಾನ್ ಪರಾಗ್ ರನ್ನು ತನ್ನ ನಾಯಕನನ್ನಾಗಿ ರಾಜಸ್ಥಾನ ರಾಯಲ್ಸ್ ತಂಡ ಗುರುವಾರ ನೇಮಕ ಮಾಡಿದೆ. ಖಾಯಂ ನಾಯಕ ಸಂಜು ಸ್ಯಾಮ್ಸನ್ ತನ್ನ ಬೆರಳಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಬೆರಳಿನ ಗಾಯವು ಸಮಯಕ್ಕೆ ಸರಿಯಾಗಿ ಗುಣಮುಖವಾಗಲು ಸ್ಯಾಮ್ಸನ್ ವಿಕೆಟ್‌ಕೀಪಿಂಗ್ ಕೆಲಸದಿಂದ ದೂರ ಉಳಿಯಬೇಕು ಎಂದು ಬಿಸಿಸಿಐನ ವೈದ್ಯಕೀಯ ತಂಡ ಸಲಹೆ ನೀಡಿದ ನಂತರ ಪರಾಗ್ ರನ್ನು ನಾಯಕರನ್ನಾಗಿ ನೇಮಿಸಲಾಗಿದೆ ಎಂದು ವರದಿ ತಿಳಿಸಿದೆ.
ಸ್ಯಾಮ್ಸನ್ ಪಂದ್ಯಾವಳಿಯ ಆರಂಭದಲ್ಲಿ ಕೇವಲ ಬ್ಯಾಟರ್ ಆಗಿ ಆಡಲು ಲಭ್ಯ ಇರಲಿದ್ದು, ‘ಇಂಪ್ಯಾಕ್ಟ್ ಆಟಗಾರ’ನ ಪಾತ್ರದಲ್ಲಿ ಮಾತ್ರ ಸೀಮಿತವಾಗಲಿದ್ದಾರೆ.
ಇಂಗ್ಲೆಂಡ್ ತಂಡದ ವಿರುದ್ಧ್ದ ಟಿ20 ಪಂದ್ಯದ ವೇಳೆ ಸ್ಯಾಮ್ಸನ್ ಗಾಯಗೊಂಡಿದ್ದರು. ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಎಸೆತವು ಸ್ಯಾಮ್ಸನ್ ಬೆರಳಿಗೆ ತಗಲಿತ್ತು. ಪರಿಣಾಮವಾಗಿ ಸ್ಯಾಮ್ಸನ್ ಕಳೆದ ತಿಂಗಳು ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
2025ರ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಮೂರು ಪಂದ್ಯಗಳಿಗೆ ರಿಯಾನ್ ಪರಾಗ್ ರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಯುವ ಆಲ್‌ರೌಂಡರ್ ಮಾ.23ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುವ ಮೊದಲ ಪಂದ್ಯ, ಆ ನಂತರ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಮಾ.26ರಂದು ಹಾಗೂ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಾ.30ರಂದು ತವರು ಮೈದಾನದಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ರಾಜಸ್ಥಾನ ತಂಡದ ನಾಯಕತ್ವವಹಿಸಲಿದ್ದಾರೆ ಎಂದು ರಾಜಸ್ಥಾನ ರಾಯಲ್ಸ್ ತಂಡ ಪ್ರಕಟನೆಯಲ್ಲಿ ತಿಳಿಸಿದೆ.
23ರ ಹರೆಯದ ಪರಾಗ್ ಅವರು ಕಿರಿಯ ವಯಸ್ಸಿನ ಐಪಿಎಲ್ ನಾಯಕರ ಎಲೈಟ್ ಗುಂಪಿಗೆ ಸೇರಲಿದ್ದಾರೆ. ಕಿರಿಯ ವಯಸ್ಸಿನ ನಾಯಕನೆಂಬ ದಾಖಲೆಯು ವಿರಾಟ್ ಕೊಹ್ಲಿ ಹೆಸರಲ್ಲಿದೆ. ಕೊಹ್ಲಿ 22ನೇ ವಯಸ್ಸಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು.
ಅಂತರ್‌ರಾಷ್ಟ್ರೀಯ ಕ್ರಿಕೆಟಿಗ ಹಾಗೂ ಡೈನಾಮಿಕ್ ಆಟಗಾರ ಯಶಸ್ವಿ ಜೈಸ್ವಾಲ್‌ರನ್ನು ಬಿಟ್ಟು ಅಸ್ಸಾಂ ಆಟಗಾರ ಪರಾಗ್ ರನ್ನು ನಾಯಕರನ್ನಾಗಿ ನೇಮಕ ಮಾಡಿರುವ ನಿರ್ಧಾರದ ಕುರಿತು ರಾಜಸ್ಥಾನ ತಂಡ ಸ್ಪಷ್ಟನೆ ನೀಡಿದೆ.
ಪರಾಗ್ ಅವರಿಗೆ ನಾಯಕತ್ವವಹಿಸುವ ರಾಜಸ್ಥಾನದ ನಿರ್ಧಾರವು ಅವರ ನಾಯಕತ್ವದ ಮೇಲೆ ಫ್ರಾಂಚೈಸಿ ಇಟ್ಟಿರುವ ವಿಶ್ವಾಸವನ್ನು ಎತ್ತಿ ತೋರಿಸುತ್ತದೆ. ಪರಾಗ್ ಅಸ್ಸಾಂ ಕ್ರಿಕೆಟ್ ತಂಡದ ನಾಯಕನಾಗಿದ್ದ ಅವಧಿಯಲ್ಲಿ ಪ್ರದರ್ಶಿಸಿದ ಕೌಶಲ್ಯ, ರಾಯಲ್ಸ್ ತಂಡದಲ್ಲಿ ಹಲವು ವರ್ಷಗಳಿಂದ ನಿರ್ಣಾಯಕ ಸದಸ್ಯರಾಗಿ ತಂಡದ ಕುರಿತ ತಿಳುವಳಿಕೆಯು ಪಂದ್ಯಾವಳಿಯ ಆರಂಭಿಕ ಹಂತದಲ್ಲಿ ಅವರನ್ನು ನಾಯಕರನ್ನಾಗಿ ನೇಮಿಸಲು ಪ್ರೇರೇಪಿಸಿದೆ ಎಂದು ರಾಜಸ್ಥಾನ ತಂಡ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದೆ