ಚಾಂಪಿಯನ್ಸ್ ಟ್ರೋಫಿ-2025 | ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸಲಹೆಗಾರರಾಗಿ ಯೂನಿಸ್ ಖಾನ್ ನೇಮಕ
ಕಾಬೂಲ್: ಮುಂಬರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಅಫ್ಘಾನಿಸ್ತಾನ ಪುರುಷರ ಕ್ರಿಕೆಟ್ ತಂಡದ ಸಲಹೆಗಾರರನ್ನಾಗಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಯೂನಿಸ್ ಖಾನ್‌ರನ್ನು ಬುಧವಾರ ನೇಮಕ ಮಾಡಲಾಗಿದೆ.
ಅಫ್ಘಾನಿಸ್ತಾನ ತಂಡ ಫೆಬ್ರವರಿ 19ರಿಂದ ಆರಂಭವಾಗಲಿರುವ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳೊಂದಿಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಅಫ್ಘಾನಿಸ್ತಾನ ತಂಡವು ಕರಾಚಿ ಹಾಗೂ ಲಾಹೋರ್‌ನಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ.
ಯೂನಿಸ್ ಖಾನ್ ಪಾಕಿಸ್ತಾನ ತಂಡದ ಪರ 265 ಏಕದಿನ ಪಂದ್ಯಗಳಲ್ಲಿ 7 ಸಾವಿರಕ್ಕೂ ಅಧಿಕ ರನ್, 118 ಟೆಸ್ಟ್ ಪಂದ್ಯಗಳಲ್ಲಿ 10,000ಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ.
ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿರುವ ಕಾರಣ ಆತಿಥೇಯ ದೇಶದ ಪ್ರತಿಭಾವಂತ ಹಾಗೂ ಅನುಭವಿ ಆಟಗಾರರನ್ನು ಮೆಂಟರ್ ಆಗಿ ನೇಮಿಸುವ ಅಗತ್ಯವಿತ್ತು. 2023ರ ಏಕದಿನ ಹಾಗೂ 2024ರ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಆತಿಥೇಯ ದೇಶಗಳ ಮೆಂಟರ್‌ಗಳನ್ನು ನೇಮಿಸಿರುವ ಅನುಭವ ನಮ್ಮಲ್ಲಿದೆ. ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ನಾವು ಮುಂಬರುವ ಮೆಗಾ ಸ್ಪರ್ಧೆಗೆ ಯೂನಿಸ್ ಖಾನ್‌ರನ್ನು ನಮ್ಮ ರಾಷ್ಟ್ರೀಯ ತಂಡದ ಮೆಂಟರ್ ಆಗಿ ನೇಮಿಸಿದ್ದೇವೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಅಧ್ಯಕ್ಷ ನಸೀಬ್ ಖಾನ್ ಹೇಳಿದ್ದಾರೆ.