ಚಾಂಪಿಯನ್ಸ್ ಟ್ರೋಫಿ: ಹೈಬ್ರಿಡ್ ಮಾದರಿಯಿಂದ ಭಾರತ ತಂಡಕ್ಕೆ ಹೆಚ್ಚು ಲಾಭ ಇಲ್ಲ
ಹೊಸದಿಲ್ಲಿ: ಹೊಸ ವರ್ಷ 2025ರ ಆರಂಭದಲ್ಲಿ ವಿಶ್ವ ಕ್ರಿಕೆಟ್‌ನ ಗಮನ ಸೀಮಿತ ಓವರ್ ಕ್ರಿಕೆಟ್‌ನತ್ತ ಹೊರಳಲಿದ್ದು, ಈ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಪುನರಾರಂಭವಾಗಲಿದೆ. ಪಂದ್ಯಾವಳಿಯಲ್ಲಿನ ಹೈಬ್ರಿಡ್ ಮಾದರಿಯು ಭಾರತ ಕ್ರಿಕೆಟ್ ತಂಡಕ್ಕೆ ಹೆಚ್ಚು ಲಾಭ ತರಲಾರದು ಎಂದು ಪಾಕಿಸ್ತಾನದ ಕೆಲವು ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನ ಪಂದ್ಯಾವಳಿಯ ಅಧಿಕೃತ ಆತಿಥ್ಯ ದೇಶವಾಗಿದೆ. ಆದರೆ ಭಾರತೀಯ ಸರಕಾರವು ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡಲು ನಿರಾಕರಿಸಿದ ಕಾರಣ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಅದು ಬಗೆಹರಿಯಲು ದೀರ್ಘ ಸಮಯ ತೆಗೆದುಕೊಂಡಿತು.
ಹಲವು ಬಾರಿ ಸಭೆಗಳನ್ನು ನಡೆಸಿದ ನಂತರ ಪಂದ್ಯವನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವ ಕುರಿತಂತೆ ಭಾರತೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ), ಭಾರತದ ಕ್ರಿಕೆಟ್ ಮಂಡಳಿ(ಬಿಸಿಸಿಐ)ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಒಮ್ಮತದ ನಿರ್ಧಾರಕ್ಕೆ ಬಂದಿವೆ. ಹೈಬ್ರಿಡ್ ಮಾದರಿಯ ಪ್ರಕಾರ ಭಾರತ ತಂಡವು ಸೆಮಿಫೈನಲ್ ಹಾಗೂ ಫೈನಲ್ ಸಹಿತ(ಒಂದು ವೇಳೆ ಅರ್ಹತೆ ಪಡೆದರೆ)ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.
ಭಾರತದ ಆತಿಥ್ಯದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್ ಟೂರ್ನಿಯನ್ನೂ ಇದೇ ರೀತಿಯಲ್ಲಿ ಆಯೋಜಿಸಬೇಕೆಂಬ ಪಾಕಿಸ್ತಾನದ ಬೇಡಿಕೆಗೂ ಒಪ್ಪಿಗೆ ನೀಡಲಾಗಿದೆ.
ಭಾರತದ ಪಂದ್ಯಗಳೆಲ್ಲವೂ ದುಬೈನಲ್ಲಿ ನಡೆದರೆ, ಪಂದ್ಯಾವಳಿಯ ಉಳಿದ ಪಂದ್ಯಗಳು ಪಾಕಿಸ್ತಾನದ ಮೂರು ತಾಣಗಳಾದ-ಲಾಹೋರ್, ಕರಾಚಿ ಹಾಗೂ ರಾವಲ್ಪಿಂಡಿಯಲ್ಲಿ ನಡೆಯಲಿದೆ.
ತಾನು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯವನ್ನು ಎಲ್ಲಿ ಆಡುತ್ತೇನೆಂದು ಭಾರತ ತಂಡಕ್ಕೆ ಮಾತ್ರ ತಿಳಿದಿದೆ. ಇತರ ತಂಡಗಳಿಗೆ ಗ್ರೂಪ್ ಹಂತದ ಪಂದ್ಯಗಳು ಮುಗಿದ ನಂತರವೆ ಗೊತ್ತಾಗಲಿದೆ ಎಂದು ಪಾಕಿಸ್ತಾನದ ಮಾಜಿ ಬೌಲರ್ ಸಲೀಂ ಅಲ್ತಾಫ್ ಅವರು ಡಾನ್ ಪತ್ರಿಕೆಗೆ ತಿಳಿಸಿದರು.
ಭಾರತ ಇರುವ ಗುಂಪಿನಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ನ್ಯೂಝಿಲ್ಯಾಂಡ್ ತಂಡಗಳಿವೆ. ಈ ಎಲ್ಲ ತಂಡಗಳು ಭಾರತ ವಿರುದ್ಧದ ತಮ್ಮ ಪಂದ್ಯಗಳನ್ನು ಆಡಲು ದುಬೈಗೆ ಪ್ರಯಾಣಿಸಬೇಕಾಗಿದೆ.
ಪಂದ್ಯಾವಳಿಯುದ್ದಕ್ಕೂ ಭಾರತ ತಂಡವು ಒಂದೇ ಸ್ಥಳದಲ್ಲಿ ಒಂದೇ ರೀತಿಯ ವಾತಾವರಣದಲ್ಲಿ ಆಡಿದರೆ ಲಾಭ ಇರುತ್ತದೆ. ಪ್ರಯಾಣ ಹಾಗೂ ಲಾಜಿಸ್ಟಿಕ್ಸ್ ಕುರಿತು ಚಿಂತಿಸುವ ಅಗತ್ಯವೂ ಇಲ್ಲ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ಇಂತಿಕಾಬ್ ಅಲಂ ಹೇಳಿದ್ದಾರೆ.