ಭಾರತದ ಅತ್ಲೆಟಿಕ್ಸ್ ಒಕ್ಕೂಟದ ಅಧ್ಯಕ್ಷರಾಗಿ ಬಹದ್ದೂರ್ ಸಿಂಗ್ ಸಾಗೂ ಆಯ್ಕೆ

Update: 2025-01-07 15:08 GMT

 ಬಹದ್ದೂರ್ ಸಿಂಗ್ ಸಾಗೂ | PC : NDTV 

ಚಂಡೀಗಡ: ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಮಾಜಿ ಶಾಟ್ ಪುಟ್ ಪಟು ಬಹದ್ದೂರ್ ಸಿಂಗ್ ಸಾಗೂ ಅವರು ಭಾರತದ ಅತ್ಲೆಟಿಕ್ಸ್ ಒಕ್ಕೂಟದ ಅಧ್ಯಕ್ಷರಾಗಿ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಮೂಲಕ ದೀರ್ಘ ಸಮಯದಿಂದ ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದ ಅಡಿಲೆ ಸುಮರಿವಾಲಾ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಮುಂದಿನ ನಾಲ್ಕು ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿರುವ 51ರ ಹರೆಯದ ಸಾಗೂ ಅವರು 2002ರ ಬುಸಾನ್ ಏಶ್ಯನ್ ಗೇಮ್ಸ್‌ನಲ್ಲಿ ಶಾಟ್‌ಪುಟ್ ಸ್ಪರ್ಧೆಯಲ್ಲಿ ಸ್ವರ್ಣ ಜಯಿಸಿದ್ದರು. 2000 ಹಾಗೂ 2004ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಎಎಫ್‌ಐ ಅತ್ಲೆಟಿಕ್ಸ್ ಕಮಿಶನ್‌ನ ಸದಸ್ಯರಾಗಿದ್ದಾರೆ.

ಹಾಲಿ ಹಿರಿಯ ಉಪಾಧ್ಯಕ್ಷೆ ಅಂಜು ಬಾಬಿ ಜಾರ್ಜ್ ಅವರು ಅಧ್ಯಕ್ಷ ಹುದ್ದೆಯ ರೇಸ್‌ನಿಂದ ಹೊರಗುಳಿದ ಕಾರಣ ಸಾಗೂ ಅವರು ಕಣದಲ್ಲಿದ್ದ ಏಕೈಕ ಅಭ್ಯರ್ಥಿಯಾಗಿದ್ದರು.

ಎಎಫ್‌ಐನ ದ್ವಿದಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಾಗೂ ಅವರ ಆಯ್ಕೆಯನ್ನು ಅಧಿಕೃತಗೊಳಿಸಲಾಯಿತು.

ಸಾಗೂ ಅವರು ಏಶ್ಯನ್ ಗೇಮ್ಸ್‌ನಲ್ಲಿ 19.03 ಮೀ.ದೂರಕ್ಕೆ ಶಾಟ್‌ಪುಟ್ ಎಸೆದು ಚಿನ್ನದ ಪದಕ ಜಯಿಸಿದ್ದರು. 20.40 ಮೀ. ಅವರ ಜೀವಮಾನದ ಶ್ರೇಷ್ಠ ಸಾಧನೆಯಾಗಿದೆ. ಸಾಗೂ ಅವರು ಪಧ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ದಿಲ್ಲಿ ಘಟಕದ ಉನ್ನತ ಅಧಿಕಾರಿ ಸಂದೀಪ್ ಮೆಹ್ತಾ ಎಎಫ್‌ಐ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ಗಮಿತ ಕಾರ್ಯಕಾರಿ ಮಂಡಳಿಯಲ್ಲಿ ಮೆಹ್ತಾ ಜಂಟಿ ಕಾರ್ಯದರ್ಶಿಯಾಗಿದ್ದರು. ಸ್ಟ್ಯಾನ್ಲಿ ಜೋನ್ಸ್ ಖಜಾಂಚಿಯಾಗಿದ್ದಾರೆ.

67ರ ಹರೆಯದ ಸುಮರಿವಾಲಾ 2012ರಿಂದ ಎಎಫ್‌ಐ ಅಧ್ಯಕ್ಷರಾಗಿದ್ದರು. ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಕ್ರೀಡಾ ಸಂಹಿತೆಯ ಪ್ರಕಾರ ಸುಮರಿವಾಲಾ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿದ್ದರು.

ಸುಮರಿವಾಲಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನ ಜಯಿಸಿದ್ದರು. ಆನಂತರ ಪ್ಯಾರಿಸ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಸುಮರಿವಾಲಾ ಪ್ರಸ್ತುತ ವಿಶ್ವ ಅತ್ಲೆಟಿಕ್ಸ್‌ನ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News