ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಿಂದ ಹೊರಬಿದ್ದ ಭಾರತ
ದುಬೈ: ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯದಲ್ಲಿ ಭಾರತವು ರವಿವಾರ ಸೋಲನುಭವಿಸಿದ ಬಳಿಕ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಿಂದ ಭಾರತವು ಹೊರಬಿದ್ದಿದೆ. ಆಸ್ಟ್ರೇಲಿಯವು ಸತತ ಎರಡನೇ ಬಾರಿಗೆ ಫೈನಲ್ ತಲುಪಿದೆ. ದಕ್ಷಿಣ ಆಫ್ರಿಕವು ಈಗಾಗಲೇ ಫೈನಲ್ ತಲುಪಿದೆ.
ಈ ಸೋಲಿನ ಬಳಿಕ, ಭಾರತದ ಶೇಕಡಾವಾರು ಅಂಕವು 52.77ರಿಂದ 50ಕ್ಕೆ ಕುಸಿದಿದ್ದು ಮೂರನೇ ಸ್ಥಾನದಲ್ಲಿದೆ. ಅದೇ ವೇಳೆ, ಆಸ್ಟ್ರೇಲಿಯವು ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಚಕ್ರದಲ್ಲಿ ತನ್ನ 11ನೇ ಜಯವನ್ನು ದಾಖಲಿಸಿದ್ದು, ಅದರ ಶೇಕಡಾವಾರು ಅಂಕವು 61.45ರಿಂದ 63.72ಕ್ಕೆ ಏರಿದೆ.
2023ರಲ್ಲಿ ಓವಲ್ ನಲ್ಲಿ ನಡೆದ ಹಿಂದಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಆಸ್ಟ್ರೇಲಿಯವು ಭಾರತವನ್ನು ಸೋಲಿಸಿತ್ತು. ಈ ಬಾರಿ ಆಸ್ಟ್ರೇಲಿಯವು ಫೈನಲ್ ನಲ್ಲಿ ದಕ್ಷಿಣ ಆಫ್ರಿಕವನ್ನು ಎದುರಿಸಲಿದೆ. ದಕ್ಷಿಣ ಆಫ್ರಿಕವು 66.67 ಶೇಕಡಾವಾರು ಅಂಕದೊಂದಿಗೆ ಪ್ರಥಮ ಸ್ಥಾನದಲ್ಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025 ಫೈನಲ್ ಲಾರ್ಡ್ಸ್ ನಲ್ಲಿ ಜೂನ್ 11ರಿಂದ 15ರವರೆಗೆ ನಡೆಯಲಿದೆ.
ಸತತ ಮೂರನೇ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪುವ ಭಾರತದ ಅವಕಾಶಗಳು ಕೇವಲ ಮೂರು ತಿಂಗಳುಗಳ ಅವಧಿಯಲ್ಲಿ ತಳ ಹಿಡಿದವು. ಈ ಅವಧಿಯಲ್ಲಿ ಭಾರತೀಯ ಕ್ರಿಕೆಟ್ ತಂಡವು ಆರು ಸೋಲುಗಳನ್ನು ಅನುಭವಿಸಿತು. ಅದರ ಸೋಲಿನ ಸರಣಿ ಆರಂಭವಾಗಿದ್ದು ನವೆಂಬರ್ ನಲ್ಲಿ ಸ್ವದೇಶದಲ್ಲಿ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ. ಆ ಸರಣಿಯನ್ನು ಭಾರತವು 0-3 ಅಂತರದಿಂದ ಕಳೆದುಕೊಂಡಿತು.
ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಚಕ್ರದಲ್ಲಿ ಆಸ್ಟ್ರೇಲಿಯವು ಇನ್ನೂ ಎರಡು ಪಂದ್ಯಗಳನ್ನು ಆಡಲಿದೆ. ಅದು ಎರಡೂ ಪಂದ್ಯಗಳನ್ನು ಶ್ರೀಲಂಕಾ ವಿರುದ್ಧ ಶ್ರೀಲಂಕಾದ ಗಾಲೆಯಲ್ಲಿ ಆಡಲಿದೆ.