ಭಾರತದ ಆಲ್ರೌಂಡರ್ ರಿಷಿ ಧವನ್ ಸೀಮಿತ ಓವರ್ ಕ್ರಿಕೆಟ್ ಗೆ ವಿದಾಯ
ಹೊಸದಿಲ್ಲಿ: ಹಿಮಾಚಲ ಪ್ರದೇಶದ ಆಲ್ರೌಂಡ್ ಆಟಗಾರ ರಿಷಿ ಧವನ್ ಸೀಮಿತ ಓವರ್ ಕ್ರಿಕೆಟ್ನಿಂದ ರವಿವಾರ ನಿವೃತ್ತಿಯಾಗಿದ್ದಾರೆ. 2024-25ರ ವಿಜಯ್ ಹಝಾರೆ ಟ್ರೋಫಿಯ ಕೊನೆಯ ಗ್ರೂಪ್ ಹಂತದ ಪಂದ್ಯದ ನಂತರ ಧವನ್ ವಿದಾಯ ಪ್ರಕಟಿಸಿದರು. ಧವನ್ ಪ್ರತಿನಿಧಿಸಿರುವ ಹಿಮಾಚಲ ಪ್ರದೇಶ ತಂಡವು ಕ್ವಾರ್ಟರ್ ಫೈನಲ್ಗೆ ತಲುಪುವಲ್ಲಿ ವಿಫಲವಾಗಿತ್ತು.
ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಧವನ್ ಈ ನಿರ್ಧಾರವನ್ನು ಹಂಚಿಕೊಂಡರು.
ನಾನು ತುಂಬಾ ಬೇಸರದಿಂದ ಭಾರತೀಯ ಕ್ರಿಕೆಟ್ನಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಘೋಷಿಸಲು ಬಯಸುವೆ. ಈ ಕ್ರೀಡೆಯು ನನಗೆ 20 ವರ್ಷಗಳ ಕಾಲ ಜೀವನ ನೀಡಿದೆ. ಈ ಪಂದ್ಯವು ನನಗೆ ಸ್ಮರಣೀಯ ಆನಂದ ಹಾಗೂ ಎಣಿಕೆಗೆ ಸಿಗದಷ್ಟು ನೆನಪುಗಳನ್ನು ನೀಡಿದೆ. ಈ ಪಂದ್ಯವು ನನ್ನ ಹೃದಯಕ್ಕೆ ಯಾವಾಗಲೂ ಹತ್ತಿರವಾಗಿದೆ ಎಂದು ರಿಷಿ ಧವನ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಿಷಿ ಧವನ್ 2016ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟಿದ್ದರು. ರಾಷ್ಟ್ರೀಯ ತಂಡದ ಪರ 4 ಬಾರಿ ಆಡಿದ್ದರು. ಒಂದೇ ವರ್ಷ ಎಲ್ಲ 4 ಪಂದ್ಯಗಳನ್ನು ಆಡಿದ್ದರು. 3 ಏಕದಿನ ಪಂದ್ಯಗಳಲ್ಲಿ 13 ಎಸೆತಗಳನ್ನು ಎದುರಿಸಿ 12 ರನ್ ಗಳಿಸಿದ್ದರು. ಏಕೈಕ ವಿಕೆಟ್ ಪಡೆದಿದ್ದರು. ಝಿಂಬಾಬ್ವೆ ವಿರುದ್ಧದ ಏಕೈಕ ಟಿ20 ಪಂದ್ಯದಲ್ಲಿ ಒಂದು ರನ್ ಗಳಿಸಿದ್ದರು. ಒಂದೇ ವಿಕೆಟ್ ಪಡೆದಿದ್ದರು.
ಈ ವರ್ಷದ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ರಿಷಿ 5 ಪಂದ್ಯಗಳಲ್ಲಿ 79.40ರ ಸರಾಸರಿಯಲ್ಲಿ 397 ರನ್ ಗಳಿಸಿ ಹಿಮಾಚಲಪ್ರದೇಶ ತಂಡದ ಪರ 2ನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದರು. 11 ವಿಕೆಟ್ಗಳನ್ನು ಉರುಳಿಸಿದ್ದರು.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಪರ ಆಡಿದ್ದರು.