ಮಿಂಚಿನ ವೇಗದ ಅರ್ಧಶತಕ: 50 ವರ್ಷದ ದಾಖಲೆ ಮುರಿದ ರಿಷಭ್ ಪಂತ್
ಸಿಡ್ನಿ, ಜ.4: ಬಾರ್ಡರ್-ಗವಾಸ್ಕರ್ ಟ್ರೋಫಿಯ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್‌ನಲ್ಲಿ ಭಾರತದ ಡೈನಾಮಿಕ್ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶನಿವಾರ ಕೇವಲ 33 ಎಸೆತಗಳಲ್ಲಿ 61 ರನ್ ಗಳಿಸಿ ಅಬ್ಬರಿಸಿದರು.
ಪಂತ್ ಅವರ ವಿಸ್ಫೋಟಕ ಇನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್‌ಗಳಿದ್ದವು. ತನ್ನ ಸಿಡಿಲಬ್ಬರದ ಬ್ಯಾಟಿಂಗ್‌ನ ಮೂಲಕ ಪಂತ್ ಅವರು ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಸಹಿತ ಅಭಿಮಾನಿಗಳು ಹಾಗೂ ತಜ್ಞರ ಪ್ರಶಂಸೆಗೆ ಪಾತ್ರರಾದರು.
ಪಂತ್ ಅವರು 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡದ ಪರ 2ನೇ ವೇಗದ ಅರ್ಧಶತಕ ದಾಖಲಿಸಿದರು. ವೇಗದ ಅರ್ಧಶತಕದ ದಾಖಲೆ ಪಂತ್ ಹೆಸರಲ್ಲೇ ಇದೆ. ಪಂತ್ 2022ರಲ್ಲಿ ಬೆಂಗಳೂರಿನಲ್ಲಿ ಶ್ರೀಲಂಕಾ ತಂಡದ ವಿರುದ್ದ 28 ಎಸೆತಗಳಲ್ಲಿ 50 ರನ್ ಪೂರ್ಣಗೊಳಿಸಿದ್ದರು.
ಪಂತ್ ಅವರು ಆಸ್ಟ್ರೇಲಿಯದ ನೆಲದಲ್ಲಿ ವೇಗವಾಗಿ ಅರ್ಧಶತಕ ಗಳಿಸಿದ ಪ್ರವಾಸಿ ತಂಡದ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿ ಇತಿಹಾಸ ನಿರ್ಮಿಸಿದರು. ಇದರೊಂದಿಗೆ ಇಂಗ್ಲೆಂಡ್‌ನ ಜಾನ್ ಬ್ರೌನ್(1895) ಹಾಗೂ ವೆಸ್ಟ್‌ಇಂಡೀಸ್‌ನ ರಾಯ್ ಫ್ರೆಡೆರಿಕ್ಸ್(1975) ಅವರ ದಾಖಲೆಯನ್ನು ಮುರಿದರು. ಈ ಇಬ್ಬರು 33 ಎಸೆತಗಳಲ್ಲಿ 50 ರನ್ ಪೂರೈಸಿದ್ದರು.
ಪಂತ್ ತನ್ನ ಮೈಲಿಗಲ್ಲು ತಲುಪಿದ ತಕ್ಷಣವೇ ಆಸ್ಟ್ರೇಲಿಯದ ನಾಯಕ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು.
ಪಂತ್ ಅವರ ವೀರೋಚಿತ ಬ್ಯಾಟಿಂಗ್ ಹೊರತಾಗಿಯೂ ಭಾರತ ತಂಡ ದಿನದಾಟದಂತ್ಯಕ್ಕೆ 141 ರನ್‌ಗೆ 6 ವಿಕೆಟ್ ಕಳೆದುಕೊಂಡಿದ್ದು, 145 ರನ್ ಮುನ್ನಡೆಯಲ್ಲಿದೆ. ಸ್ಕಾಟ್ ಬೋಲ್ಯಾಂಡ್(4-42)ತಮ್ಮ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ಸದ್ಯ ಪಂದ್ಯವು ಸಮತೋಲಿತವಾಗಿದ್ದು, ಪಂತ್ ಅವರ ಬಿರುಸಿನ ಇನಿಂಗ್ಸ್ ಪಂದ್ಯಕ್ಕೆ ತಿರುವು ನೀಡಿದೆ. ತನ್ನ ನಿರ್ಭಿತಿಯ ಬ್ಯಾಟಿಂಗ್‌ನ ಮೂಲಕ ಪಂದ್ಯದ ದಿಕ್ಕನ್ನು ಬದಲಿಸುವ ತಾಕತ್ತು ಪಂತ್‌ಗಿದೆ.
ಪಂತ್ ಅವರ ಮಿಂಚಿನ ವೇಗದ ಬ್ಯಾಟಿಂಗ್ ಕುರಿತು ತೆಂಡುಲ್ಕರ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ಪ್ರಶಂಸಿಸಿದರು.
*ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ವೇಗದ ಅರ್ಧಶತಕ ಗಳಿಸಿದ ಆಟಗಾರರು
ಎಸೆತಗಳು ಆಟಗಾರ ಎದುರಾಳಿ ಸ್ಥಳ ವರ್ಷ
28 ರಿಷಭ್ ಪಂತ್ ಶ್ರೀಲಂಕಾ ಬೆಂಗಳೂರು 2022
29 ರಿಷಭ್ ಪಂತ್ ಆಸ್ಟ್ರೇಲಿಯ ಸಿಡ್ನಿ 2025
30 ಕಪಿಲ್ ದೇವ್ ಪಾಕಿಸ್ತಾನ ಕರಾಚಿ 1982
31 ಶಾರ್ದೂಲ್ ಠಾಕೂರ್ ಇಂಗ್ಲೆಂಡ್ ದಿ ಓವಲ್ 2021
31 ಯಶಸ್ವಿ ಜೈಸ್ವಾಲ್ ಬಾಂಗ್ಲಾದೇಶ ಕಾನ್ಪುರ 2024