ಸಿಡ್ನಿ ಟೆಸ್ಟ್: ಭಾರತ-ಆಸ್ಟ್ರೇಲಿಯ ಸಮಬಲದ ಹೋರಾಟ

Update: 2025-01-04 15:08 GMT

PC : PTI 

ಸಿಡ್ನಿ: ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್(61 ರನ್, 33 ಎಸೆತ) ಅವರ ಸಿಡಿಲಬ್ಬರದ ಬ್ಯಾಟಿಂಗ್ ಹಾಗೂ ಸ್ಕಾಟ್ ಬೋಲ್ಯಾಂಡ್(4-42) ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಯಿಂದಾಗಿ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯ ತಂಡಗಳು ಸಮಬಲದ ಹೋರಾಟ ನೀಡಿದ್ದು, ಪಂದ್ಯ ಸದ್ಯ ಸಮತೋಲಿತವಾಗಿದೆ.

ಶನಿವಾರ ಎರಡನೇ ದಿನದಾಟದಲ್ಲೂ ಉಭಯ ತಂಡಗಳ ವೇಗದ ಬೌಲರ್‌ಗಳು ಪ್ರಾಬಲ್ಯ ಸಾಧಿಸಿದ್ದು ಒಟ್ಟು 15 ವಿಕೆಟ್‌ಗಳು ಪತನಗೊಂಡಿವೆ.

ಪಂತ್ ಅವರು 29 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 2ನೇ ಬಾರಿ ವೇಗವಾಗಿ 50 ರನ್ ಪೂರೈಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಈ ಹಿಂದೆ ಪಂತ್ ಅವರು 2022ರಲ್ಲಿ ಶ್ರೀಲಂಕಾದ ವಿರುದ್ಧ 22 ಎಸೆತಗಳಲ್ಲಿ 50 ರನ್ ಸಿಡಿಸಿದ್ದರು.

ತನ್ನ ನಿಖರವಾದ ಬೌಲಿಂಗ್‌ನ ಮೂಲಕ ಬೋಲ್ಯಾಂಡ್ ಅವರು ಭಾರತದ ಅಗ್ರ ಸರದಿಗೆ ಮತ್ತೊಮ್ಮೆ ಸವಾಲಾದರು. ಭಾರತ ತಂಡವ ತನ್ನ 2ನೇ ಇನಿಂಗ್ಸ್‌ನಲ್ಲಿ 78 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಾಗ ಬ್ಯಾಟಿಂಗ್‌ಗೆ ಇಳಿದ ಪಂತ್ ಅವರು ಟಿ-20 ಶೈಲಿಯಲ್ಲಿ ಬ್ಯಾಟ್ ಬೀಸಿ ಸಿಡ್ನಿ ಮೈದಾನದಲ್ಲಿ ನೆರೆದಿದ್ದ 47,257 ಪ್ರೇಕ್ಷಕರನ್ನು ರಂಜಿಸಿದರು.

ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್(22 ರನ್, 35 ಎಸೆತ) ಅವರು ಮಿಚೆಲ್ ಸ್ಟಾರ್ಕ್ ಅವರ ಮೊದಲ ಓವರ್‌ನಲ್ಲಿ 4 ಬೌಂಡರಿಗಳನ್ನು ಸಿಡಿಸಿ 16 ರನ್ ಸೂರೆಗೈದು ಭಾರತಕ್ಕೆ 2ನೇ ಇನಿಂಗ್ಸ್‌ನಲ್ಲಿ ಭವ್ಯ ಆರಂಭ ಒದಗಿಸಿದರು. ಜೈಸ್ವಾಲ್ ಹಾಗೂ ರಾಹುಲ್ 7.3 ಓವರ್‌ಗಳಲ್ಲಿ 42 ರನ್ ಗಳಿಸಿದರು. ಆಗ ಬೋಲ್ಯಾಂಡ್ ಅವರು ರಾಹುಲ್ ಹಾಗೂ ಜೈಸ್ವಾಲ್‌ರನ್ನು 5 ರನ್ ಅಂತರದಲ್ಲಿ ಪೆವಿಲಿಯನ್‌ಗೆ ಕಳುಹಿಸಿ ಭಾರತಕ್ಕೆ ಆಘಾತ ನೀಡಿದರು.

ಬಹುಶಃ ಆಸ್ಟ್ರೇಲಿಯದಲ್ಲಿ ತನ್ನ ಕೊನೆಯ ಟೆಸ್ಟ್ ಇನಿಂಗ್ಸ್ ಆಡುತ್ತಿರುವ ಕೊಹ್ಲಿ ಬ್ಯಾಟಿಂಗ್‌ಗೆ ಇಳಿದಾಗ ಕೆಲವು ಪ್ರೇಕ್ಷಕ ವರ್ಗ ಕೀಟಲೆ ಬುದ್ದಿ ತೋರಿಸಿದರು. ಆದರೆ ಕೊಹ್ಲಿ 6 ರನ್ ಗಳಿಸಿ ಬೋಲ್ಯಾಂಡ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ವಾಪಸಾಗುತ್ತಿದ್ದಾಗ ಸಿಡ್ನಿ ಪ್ರೇಕ್ಷಕರು ಎದ್ದುನಿಂತು ಗೌರವಿಸಿದರು.

ಪಂತ್ ಬ್ಯಾಟಿಂಗ್‌ಗೆ ಇಳಿದ ತಕ್ಷಣವೇ ಬೋಲ್ಯಾಂಡ್ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಸ್ವಾಗತಿಸಿದರು. ಶುಭಮನ್ ಗಿಲ್(13 ರನ್)ವೆಬ್‌ಸ್ಟರ್ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಕ್ಯಾರಿಗೆ ವಿಕೆಟ್ ಒಪ್ಪಿಸಿದರು. ಆಗ ಪಂತ್‌ಗೆ ರವೀಂದ್ರ ಜಡೇಜ ಜೊತೆಯಾದರು.

ಮೊದಲ ಇನಿಂಗ್ಸ್‌ನಲ್ಲಿ ಸುಮಾರು 150 ನಿಮಿಷ ಕ್ರೀಸ್‌ನಲ್ಲಿ ಕಳೆದಿದ್ದ ಪಂತ್ ಅವರು 98 ಎಸೆತಗಳಲ್ಲಿ 40 ರನ್ ಗಳಿಸಿದ್ದರು. ಇಂದು ಅವರು ಆರಂಭದಿಂದ ಅಂತ್ಯದ ತನಕ ಬಿರುಸಿನ ಬ್ಯಾಟಿಂಗ್‌ಗೆ ಹೆಚ್ಚು ಒತ್ತು ನೀಡಿದರು. ವೆಬ್‌ಸ್ಟರ್‌ರ ಬೌಲಿಂಗ್‌ನಲ್ಲಿ ಸತತ 3 ಬೌಂಡರಿ ಗಳಿಸಿದರು. ಸ್ಟಾರ್ಕ್ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ತನ್ನ ಅರ್ಧಶತಕ ಪೂರೈಸಿದರು. ಮುಂದಿನ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಸಿಡಿಸಿದರು.

ಕಮಿನ್ಸ್ ಎಸೆತವನ್ನು ಕೆಣಕಲು ಹೋದ ಪಂತ್ ವಿಕೆಟ್‌ಕೀಪರ್ ಕ್ಯಾರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ದಿನದಾಟದಂತ್ಯಕ್ಕೆ ಪಂತ್ ಹಾಗೂ ನಿತೀಶ್ ಕುಮಾರ್ ರೆಡ್ಡಿ (4)ವಿಕೆಟ್‌ಗಳು ಬೆನ್ನುಬೆನ್ನಿಗೆ ಪತನಗೊಂಡಿದ್ದು, ಭಾರತವು 2ನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 141 ರನ್ ಗಳಿಸಿದ್ದು, ಒಟ್ಟು 145 ರನ್ ಮುನ್ನಡೆಯಲ್ಲಿದೆ. ಜಡೇಜ ಹಾಗೂ ವಾಶಿಂಗ್ಟನ್ ಸುಂದರ್ ಕ್ರೀಸ್‌ನಲ್ಲಿದ್ದಾರೆ.

► ಆಸ್ಟ್ರೇಲಿಯ 181 ರನ್‌ಗೆ ಆಲೌಟ್, ವೆಬ್‌ಸ್ಟರ್ ಚೊಚ್ಚಲ ಅರ್ಧಶತಕ

ಇದಕ್ಕೂ ಮೊದಲು 1 ವಿಕೆಟ್ ನಷ್ಟಕ್ಕೆ 9 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ ತಂಡವನ್ನು 51 ಓವರ್‌ಗಳಲ್ಲಿ 181 ರನ್‌ಗೆ ನಿಯಂತ್ರಿಸಿದ ಭಾರತ ತಂಡವು 4 ರನ್ ಮುನ್ನಡೆ ಪಡೆಯಿತು.

ಲ್ಯಾಬುಶೇನ್ ಅವರು ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಬುಮ್ರಾ ಬೆನ್ನುನೋವಿಗೆ ಮುನ್ನಚ್ಚರಿಕೆಯ ಕ್ರಮವಾಗಿ ಸ್ಕ್ಯಾನಿಂಗ್‌ಗಾಗಿ ಮೈದಾನ ತೊರೆದರು. ಆಗ ಮುಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ ಕೃಷ್ಣ ವೇಗದ ಭಾರತದ ಬೌಲಿಂಗ್ ದಾಳಿಯ ನೇತೃತ್ವವಹಿಸಿದರು.

ಭಾರತ ತಂಡಕ್ಕೆ ವಾಪಸಾದ ಪ್ರಸಿದ್ಧ ಕೃಷ್ಣ ಅವರು ಸ್ಟೀವನ್ ಸ್ಮಿತ್, ಕ್ಯಾರಿ ಹಾಗೂ ವೆಬ್‌ಸ್ಟರ್ ವಿಕೆಟ್‌ಗಳನ್ನು ಪಡೆದು ಗಮನ ಸೆಳೆದರು.

ಯುವ ಬ್ಯಾಟರ್ ಕಾನ್‌ಸ್ಟಾಸ್(23 ರನ್)ಹಾಗೂ ಟ್ರಾವಿಸ್ ಹೆಡ್(4 ರನ್)ಅವರು ಮೂರು ಎಸೆತಗಳ ಅಂತರದಲ್ಲಿ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಆಸ್ಟ್ರೇಲಿಯ 39 ರನ್‌ಗೆ 4ನೇ ವಿಕೆಟ್ ಕಳೆದುಕೊಂಡಿತು.

ಹಿರಿಯ ಬ್ಯಾಟರ್ ಸ್ಟೀವ್ ಸ್ಮಿತ್ ಹಾಗೂ ಬ್ಯೂ ವೆಬ್‌ಸ್ಟರ್ 5ನೇ ವಿಕೆಟ್‌ಗೆ 57 ರನ್ ಸೇರಿಸಿ ತಂಡವನ್ನು ಆಧರಿಸಿದರು.

ಸ್ಮಿತ್ 33 ರನ್(57 ಎಸೆತ) ಗಳಿಸಿ ಪ್ರಸಿದ್ಧ ಕೃಷ್ಣಗೆ ಔಟಾದರು. 10,000 ಟೆಸ್ಟ್ ರನ್ ಪೂರೈಸುವುದಕ್ಕೆ 5 ರನ್ ಕೊರತೆ ಎದುರಿಸಿದರು. ವಿಕೆಟ್‌ಕೀಪರ್ ಕ್ಯಾರಿ(21 ರನ್, 36 ಎಸೆತ) ಹಾಗೂ ವೆಬ್‌ಸ್ಟರ್ 6ನೇ ವಿಕೆಟ್‌ಗೆ 41 ರನ್ ಜೊತೆಯಾಟ ನಡೆಸಿದರು. ಕ್ಯಾರಿ ಕೂಡ ಕೃಷ್ಣಗೆ ಔಟಾದ ನಂತರ ನಾಯಕ ಕಮಿನ್ಸ್ ಜೊತೆಗೆ ವೆಬ್‌ಸ್ಟರ್ 7ನೇ ವಿಕೆಟ್‌ಗೆ 25 ರನ್ ಗಳಿಸಿದರು. ಆ ನಂತರ ಆಸ್ಟ್ರೇಲಿಯ ತಂಡದಲ್ಲಿ ಉತ್ತಮ ಜೊತೆಯಾಟ ಮೂಡಿ ಬರಲಿಲ್ಲ.

ನಿತೀಶ್ ರೆಡ್ಡಿ ಅವರು ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ವಿಕೆಟ್‌ಗಳನ್ನು ಉರುಳಿಸಿ ಆಸ್ಟ್ರೇಲಿಯದ ಸಂಕಷ್ಟ ಹೆಚ್ಚಿಸಿದರು. ಆಸ್ಟ್ರೇಲಿಯ ತಂಡವು ಕೇವಲ 19 ರನ್ ಗಳಿಸುವಷ್ಟರಲ್ಲಿ ತನ್ನ ಕೊನೆಯ 4 ವಿಕೆಟ್‌ಗಳನ್ನು ಕಳೆದುಕೊಂಡಿತು.

ಚೊಚ್ಚಲ ಪಂದ್ಯವನ್ನಾಡಿದ ವೆಬ್‌ಸ್ಟರ್ (57 ರನ್, 105 ಎಸೆತ)ಆಸ್ಟ್ರೇಲಿಯದ ಪರ ಅಗ್ರ ಸ್ಕೋರರ್ ಎನಿಸಿಕೊಂಡರು.ವೆಬ್‌ಸ್ಟರ್ ಇನಿಂಗ್ಸ್‌ಗೆ ಪ್ರಸಿದ್ಧ ಕೃಷ್ಣ ತೆರೆ ಎಳೆದರು. ವೆಬ್‌ಸ್ಟರ್ 2015ರ ನಂತರ ತನ್ನ ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಆಸ್ಟ್ರೇಲಿಯದ ಮೊದಲ ಬ್ಯಾಟರ್ ಎನಿಸಿಕೊಂಡರು. ಆ್ಯಡಮ್ ವೋಗ್ಸ್ ಈ ಸಾಧನೆ ಮಾಡಿದ್ದರು.

ಭಾರತದ ಪರ ಕನ್ನಡಿಗ ಪ್ರಸಿದ್ಧ ಕೃಷ್ಣ(3-42)ಹಾಗೂ ಮುಹಮ್ಮದ್ ಸಿರಾಜ್(3-51)ತಲಾ ಮೂರು ವಿಕೆಟ್‌ಗಳು ಹಾಗೂ ಜಸ್‌ಪ್ರಿತ್ ಬುಮ್ರಾ(2-33)ಎರಡು ವಿಕೆಟ್ ಪಡೆದರು. ಇಂದು ಒಂದು ವಿಕೆಟ್ ಪಡೆದ ಬುಮ್ರಾ ಅವರು ಆಸ್ಟ್ರೇಲಿಯ ಪ್ರವಾಸದಲ್ಲಿ ಗರಿಷ್ಠ ವಿಕೆಟ್ ಪಡೆದ ಭಾರತದ ಬೌಲರ್ ಎನಿಸಿಕೊಂಡರು. ಬೌಲಿಂಗ್ ದಂತಕತೆ ಬಿಷನ್ ಸಿಂಗ್ ಬೇಡಿ ಅವರ ದಾಖಲೆಯನ್ನು ಮುರಿದರು.

ಬುಮ್ರಾ ಮೈದಾನದಿಂದ ಹೊರ ನಡೆದ ನಂತರ ಭಾರತದ ಉಳಿದ ಬೌಲರ್‌ಗಳು 132 ರನ್ ನೀಡಿ 8 ವಿಕೆಟ್‌ಗಳನ್ನು ಪಡೆದು ಅವರ ಅನುಪಸ್ಥಿತಿ ಕಾಡದಂತೆ ನೋಡಿಕೊಂಡರು. ವಿರಾಟ್ ಕೊಹ್ಲಿ ಅವರು ತಂಡದ ನಾಯಕತ್ವವಹಿಸಿದರು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News