ʼಸ್ಯಾಂಡ್ ಪೇಪರ್ʼ ಪ್ರಕರಣ ನೆನಪಿಸಿ ಆಸ್ಟ್ರೇಲಿಯ ಪ್ರೇಕ್ಷಕರಿಗೆ ತಿರುಗೇಟು ನೀಡಿದ ವಿರಾಟ್ ಕೊಹ್ಲಿ!

Update: 2025-01-05 12:17 GMT

ವಿರಾಟ್ ಕೊಹ್ಲಿ | PC : X/@cricketcomau

ಸಿಡ್ನಿ: ಇಲ್ಲಿ ನಡೆದ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸುವ ಮೂಲಕ ಆಸ್ಟ್ರೇಲಿಯ ತಂಡ 3-1ರ ಅಂತರದಲ್ಲಿ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಒಂದು ದಶಕದ ಬಳಿಕ ಇದೇ ಪ್ರಥಮ ಬಾರಿಗೆ ಭಾರತ ತಂಡವು ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ಆಸ್ಟ್ರೇಲಿಯ ತಂಡಕ್ಕೆ ಬಿಟ್ಟುಕೊಟ್ಟಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವು 6 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು.

ಈ ನಡುವೆ, ಜಸ್ಪ್ರೀತ್ ಬುಮ್ರಾ ಸ್ಯಾಂಡ್ ಪೇಪರ್ ಬಳಸುತ್ತಿದ್ದಾರೆ ಎಂಬ ವಿವಾದ ಇಂದೂ ಮೈದಾನದಲ್ಲಿ ಕಾಣಿಸಿಕೊಂಡಿತು. ಆಸ್ಟ್ರೇಲಿಯ ಪ್ರೇಕ್ಷಕರ ಈ ಆರೋಪಕ್ಕೆ ರೋಹಿತ್ ಶರ್ಮ ಹಾಗೂ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿದ್ದ ವಿರಾಟ್ ಕೊಹ್ಲಿ ಮೈದಾನದಲ್ಲೇ ತಿರುಗೇಟು ನೀಡಿದರು. 2018ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಸ್ಯಾಂಡ್ ಪೇಪರ್ ಬಳಕೆ ವಿವಾದದಲ್ಲಿ ಎರಡು ವರ್ಷಗಳ ನಿಷೇಧಕ್ಕೆ ಗುರಿಯಾಗಿದ್ದ ಆಸ್ಟ್ರೇಲಿಯ ತಂಡದ ನಾಯಕ ಸ್ಟೀವ್ ಸ್ಮಿತ್, ಉಪ ನಾಯಕ ಡೇವಿಡ್ ವಾರ್ನರ್ ಹಾಗೂ ವೇಗಿ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಪ್ರಕರಣವನ್ನು ನೆನಪಿಸಿ ಆಸ್ಟ್ರೇಲಿಯ ಪ್ರೇಕ್ಷಕರಿಗೆ ತಿರುಗೇಟು ನೀಡಿದರು.

ಇದಕ್ಕೂ ಮುನ್ನ, ಸಿಡ್ನಿ ಟೆಸ್ಟ್ ನ ಎರಡನೆ ದಿನದಾಟದ ನಂತರ, ಕೆಲವು ಆಸ್ಟ್ರೇಲಿಯ ತಂಡದ ಅಭಿಮಾನಿಗಳು ಭಾರತ ತಂಡವು ಸ್ಯಾಂಡ್ ಪೇಪರ್ ಬಳಸುತ್ತಿದೆ ಎಂದು ಆರೋಪಿಸಿದ್ದರು. ಭಾರತೀಯ ಆಟಗಾರರ ಬೂಟುಗಳಿಂದ ಹೊರಬರುವ ಕಾಗದ/ಬಟ್ಟೆಯ ತುಣುಕುಗಳ ವಿಡಿಯೊ ಹರಿದಾಡಿದ ನಂತರ, ಸಾಮಾಜಿಕ ಜಾಲತಾಣಗಳಲ್ಲೂ ಇದೇ ಬಗೆಯ ಚರ್ಚೆ ನಡೆದಿತ್ತು.

ಮೂರನೆಯ ದಿನದಾಟದ ಸಂದರ್ಭದಲ್ಲಿ ಆಸ್ಟ್ರೇಲಿಯ ಪ್ರೇಕ್ಷಕರು ಇದೇ ವಿಚಾರವಾಗಿ ಅಣಕವಾಡಿದಾಗ, ವಿರಾಟ್ ಕೊಹ್ಲಿ ಮೈದಾನದಲ್ಲಿಯೇ ಅವರಿಗೆ ತಕ್ಕ ತಿರುಗೇಟು ನೀಡಿದರು. ತಮ್ಮ ಪ್ಯಾಂಟ್ ಕಿಸೆಯನ್ನು ಹೊರಗೆಳೆದು ಅದರಲ್ಲಿ ಏನು ಇಲ್ಲ ಎಂಬಂತೆ ತೋರಿಸಿದರು. ಅಲ್ಲದೆ, ನನ್ನಲ್ಲಿ ಏನೂ ಇಲ್ಲ, ನಾವು ಸ್ಯಾಂಡ್ ಪೇಪರ್ ಬಳಕೆ ಮಾಡುವುದಿಲ್ಲ ಎಂದು ಸಂಜ್ಞೆಯ ಮೂಲಕ ತೋರಿಸಿದರು. ಇಂತಹ ವಿಚಾರಗಳಲ್ಲಿ ಭಾರತೀಯ ಆಟಗಾರರು ಆಸ್ಟ್ರೇಲಿಯ ಆಟಗಾರರಂತಲ್ಲ ಎಂದೂ ಸನ್ನೆಯ ಮೂಲಕ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News