ಫಾರ್ಮ್ ಗೆ ಮರಳಬೇಕಾದರೆ ರೋಹಿತ್ ರಣಜಿ ಆಡಲಿ: ಗಾವಸ್ಕರ್ ಸಲಹೆ
ಮುಂಬೈ: ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗುವುದಿಲ್ಲ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸ್ಪಷ್ಟನೆ ನೀಡಿರುವ ಬೆನ್ನಲ್ಲೇ, 37 ವರ್ಷದ ಆಟಗಾರ ಮರಳಿ ಫಾರ್ಮ್ ಗಳಿಸಬೇಕಾದರೆ ಮುಂಬರುವ ರಣಜಿ ನಾಕೌಟ್ ಪಂದ್ಯಗಳಲ್ಲಿ ಆಡಲಿ ಎಂಬ ಸಲಹೆಯನ್ನು ಭಾರತ ತಂಡದ ಮಾಜಿ ನಾಯಕ ಸುನೀಲ್ ಗಾವಸ್ಕರ್ ನೀಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂರು ಪಂದ್ಯಗಳಲ್ಲಿ ರೋಹಿತ್ ಕೇವಲ 31 ರನ್ ಕಲೆ ಹಾಕಿದ್ದು, ಕಳೆದ ಐದು ಇನ್ನಿಂಗ್ಸ್ ಗಳ ಪೈಕಿ ನಾಲ್ಕು ಬಾರಿ ಒಂದಂಕಿಗೆ ವಿಕೆಟ್ ಒಪ್ಪಿಸಿದ್ದರು.
"ಇದೀಗ ನಾಲ್ಕು ದಿನಗಳ ಪಂದ್ಯಗಳು ಲಭ್ಯವಾಗುವುದು ವಿರಳ. ಆದರೆ ರಣಜಿ ಟ್ರೋಫಿಯಂತಹ ಕೆಲ ಅವಕಾಶಗಳಿವೆ. ಮುಂಬೈ ನಾಕೌಟ್ ಹಂತಕ್ಕೆ ತೇರ್ಗಡೆಯಾದರೆ, ಕೆಲ ಪಂದ್ಯಗಳನ್ನು ಆಡುವ ಬಗ್ಗೆ ಅವರು ಯೋಚಿಸಬೇಕು" ಎಂದು ಗಾವಸ್ಕರ್ ಹೇಳಿದ್ದಾರೆ.
"ಆರಂಭಿಕ ಮತ್ತು ಅರ್ಹತಾ ಹಂತದಲ್ಲಿ ಆಡಿದ ಕೆಲ ಹುಡುಗರು ಅವರಿಗಾಗಿ ಜಾಗ ತೆರವುಗೊಳಿಸುವುದು ಸ್ವಲ್ಪಮಟ್ಟಿಗೆ ನ್ಯಾಯ ಸಮ್ಮತವಲ್ಲ. ಆದರೆ ಭಾರತೀಯ ಕ್ರಿಕೆಟ್ನ ವಿಸ್ತೃತ ಹಿತಾಸಕ್ತಿಯ ದೃಷ್ಟಿಯಿಂದ ಅವರಿಗೆ ಆಡಲು ಸ್ಥಾನ ಕಲ್ಪಿಸಿದರೆ, ಅವರು ಅದನ್ನು ಮಾಡಬೇಕು. ಏಕೆಂದರೆ ಅವರಿಗೆ ಮತ್ತೆ ಫಾರ್ಮ್ಗೆ ಮರಳಲು ಅದು ಒಂದು ಮಾರ್ಗ" ಎಂದು ವಿಶ್ಲೇಷಿಸಿದ್ದಾರೆ.
ಮಧ್ಯಂತರ ಅವಧಿಯಲ್ಲಿ ರೋಹಿತ್ ಒಂದಷ್ಟು ರಣಜಿ ಟ್ರೋಫೀ ಪಂದ್ಯಗಳನ್ನು ಆಡಿದರೆ ಅವರಿಗೆ ಆತ್ಮವಿಶ್ವಾಸ ಮರಳುತ್ತದೆ ಎಂದು ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ. "50 ಓವರ್ಗಳ ಪಂದ್ಯದಲ್ಲಿ ಕೇವಲ 15-20 ಓವರ್ಗಳನ್ನು ಅಥವಾ 35 ಓವರ್ ಆಡುವುದು ಮಾತ್ರವಲ್ಲ. ಇಡೀ ದಿನ ನಾಲ್ಕೂವರೆ ಗಂಟೆಯಿಂದ ಐದು ಗಂಟೆವರೆಗೆ ಬ್ಯಾಟಿಂಗ್ ಮಾಡುವುದು ಮತ್ತು ದೊಡ್ಡ ರನ್ ಗಳಿಸುವುದು ಅಗತ್ಯ. ಅದು ಅವರಿಗೆ ಟೆಸ್ಟ್ ಪಂದ್ಯಗಳಿಗೆ ಆತ್ಮವಿಶ್ವಾಸ ಗಳಿಸಿಕೊಡುತ್ತದೆ" ಎಂದು ಹೇಳಿದ್ದಾರೆ.