ಅಂತಿಮ ಟೆಸ್ಟ್‌ನಲ್ಲಿ ಭಾರತಕ್ಕೆ ಹೀನಾಯ ಸೋಲು: 10 ವರ್ಷ ಬಳಿಕ ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ಮರಳಿ ಕೈವಶ ಮಾಡಿಕೊಂಡ ಆಸ್ಟ್ರೇಲಿಯ
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವೆ ನಡೆದ ಐದನೆ ಮತ್ತು ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಸುಲಭ ಗೆಲುವು ಸಾಧಿಸುವ ಮೂಲಕ, ಸರಣಿಯನ್ನು 3-1ರ ಅಂತರದಲ್ಲಿ ಕೈವಶ ಮಾಡಿಕೊಂಡಿತು.
ನಿನ್ನೆ ತನ್ನ ಎರಡನೆ ಇನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿದ್ದ ಭಾರತ ತಂಡ, ಇಂದು ಕೇವಲ 16 ರನ್ ಸೇರಿಸಿ, 157 ರನ್ ಗಳಿಗೆ ಆಲೌಟಾಯಿತು. ಭಾರತ ತಂಡಕ್ಕೆ ಮತ್ತೊಮ್ಮೆ ಆಸರೆಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (61) ಮಾತ್ರ ಅತ್ಯಧಿಕ ಮೊತ್ತ ಪೇರಿಸಿದರು. ಉಳಿದೆಲ್ಲ ಬ್ಯಾಟರ್ ಗಳು ಪೆವಿಲಿಯನ್ ಪರೇಡ್ ನಡೆಸಿದರು.
162 ರನ್ ಗಳ ಗೆಲುವಿನ ಗುರಿ ಪಡೆದು ಎರಡನೆ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಗೆ ಇಳಿದ ಆಸ್ಟ್ರೇಲಿಯ ತಂಡ ಕೂಡಾ ಆರಂಭಿಕ ಆಘಾತಕ್ಕೆ ತುತ್ತಾಗಿ, 58 ರನ್ ಗಳಾಗುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಎಲ್ಲ ವಿಕೆಟ್ ಗಳನ್ನೂ ಕನ್ನಡಿಗ ವೇಗಿ ಪ್ರಸಿದ್ಧ ಕೃಷ್ಣ ಕಿತ್ತದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ (41) ಹಾಗೂ ಟ್ರಾವಿಸ್ ಹೆಡ್ (ಅಜೇಯ 34) ಜೋಡಿ ಅಮೂಲ್ಯ 46 ರನ್ ಗಳ ಜೊತೆಯಾಟವಾಡಿ ತಂಡವನ್ನು ಅಪಾಯದಿಂದ ಪಾರು ಮಾಡಿತು.
ನಂತರ, 41 ರನ್ ಗಳಿಸಿದ್ದ ಉಸ್ಮಾನ್ ಖ್ವಾಜಾ, ಮುಹಮ್ಮದ್ ಸಿರಾಜ್ ಬೌಲಿಂಗ್ ನಲ್ಲಿ ರಿಷಭ್ ಪಂತ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಆಗ ಆಸ್ಟ್ರೇಲಿಯ ತಂಡಕ್ಕೆ ಗೆಲುವು ಸಾಧಿಸಲು ಇನ್ನು ಕೇವಲ 58 ರನ್ ಗಳ ಅಗತ್ಯವಿತ್ತು. ಈ ಹಂತದಲ್ಲಿ ಜೊತೆಯಾದ ಟ್ರಾವಿಸ್ ಹೆಡ್ ಹಾಗೂ ಬೋ ವೆಬ್ ಸ್ಟರ್ (ಅಜೇಯ 39) ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.
ಈ ಪಂದ್ಯದಲ್ಲಿ ಭಾರತ ತಂಡದ ಹಂಗಾಮಿ ನಾಯಕರಾಗಿದ್ದ ಜಸ್ಪ್ರೀತ್ ಬುಮ್ರಾ, ತಮ್ಮ ನಾಯಕತ್ವದಲ್ಲಿ ಒಂದು ಗೆಲುವು ಹಾಗೂ ಸೋಲಿನೊಂದಿಗೆ ಸಮಾಧಾನಕರ ಸಾಧನೆ ಮಾಡಿದರು. ಇದರೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮ ಮುಡಿಗೇರಿಸಿಕೊಂಡರು. ಆಸ್ಟ್ರೇಲಿಯ ತಂಡದ ಸ್ಕಾಟ್ ಬೋಲಂಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
2021ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಸ್ಟ್ರೇಲಿಯ ಪ್ರವಾಸ ಮಾಡಿದ್ದ ಭಾರತ ತಂಡ, 2-1 ಅಂತರದಲ್ಲಿ ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತ್ತು. ಮೂರು ವರ್ಷಗಳ ನಂತರ, ಆಸ್ಟ್ರೇಲಿಯ ತಂಡ ಆ ಸೋಲಿನ ಸೇಡನ್ನು ತೀರಿಸಿಕೊಂಡಿದೆ.