ಗುಜರಾತ್ ಗೆಲುವಿನ ಓಟಕ್ಕೆ ಕಡಿವಾಣ ಹಾಕಿ ಲಕ್ನೊಗೆ ರೋಚಕ ಜಯ

ನಿಕೊಲಸ್ ಪೂರನ್ ಹಾಗೂ ಏಡೆನ್ ಮರ್ಕ್ರಮ್ | PC : X
ಲಕ್ನೊ: ಅಗ್ರ ಸರದಿಯ ಬ್ಯಾಟರ್ಗಳಾದ ನಿಕೊಲಸ್ ಪೂರನ್ ಹಾಗೂ ಏಡೆನ್ ಮರ್ಕ್ರಮ್ ಅರ್ಧಶತಕಗಳ ಕೊಡುಗೆಯ ನೆರವಿನಿಂದ ಲಕ್ನೊ ಸೂಪರ್ ಜಯಂಟ್ಸ್ ತಂಡವು ಕೊನೆಯ ಓವರ್ನಲ್ಲಿ 6 ವಿಕೆಟ್ ಗಳಿಂದ ರೋಚಕ ಜಯ ಸಾಧಿಸಿದೆ. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡದ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ತಂಡವು ನಾಯಕ ಶುಭಮನ್ ಗಿಲ್(60 ರನ್, 38 ಎಸೆತ, 6 ಬೌಂಡರಿ, 1 ಸಿಕ್ಸರ್)ಹಾಗೂ ಸಾಯಿ ಸುದರ್ಶನ್(56 ರನ್, 37 ಎಸೆತ, 7 ಬೌಂಡರಿ,1 ಸಿಕ್ಸರ್)ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 180 ರನ್ ಗಳಿಸಿತು.
ಗೆಲ್ಲಲು 181 ರನ್ ಗುರಿ ಬೆನ್ನಟ್ಟಿದ ಲಕ್ನೊ ತಂಡವು 19.3 ಓವರ್ಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 186 ರನ್ ಕಲೆ ಹಾಕಿದೆ.
ಸತತ 3ನೇ ಗೆಲುವು ದಾಖಲಿಸಿದ ಲಕ್ನೊ ತಂಡವು ಸತತ 4 ಪಂದ್ಯಗಳನ್ನು ಗೆದ್ದುಬೀಗುತ್ತಿದ್ದ ಗುಜರಾತ್ಗೆ ಸೋಲಿನ ಬರೆ ಎಳೆದಿದೆ. ಈ ಫಲಿತಾಂಶದಿಂದ ಲಕ್ನೊ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದರೆ, ಗುಜರಾತ್ ಮೊದಲ ಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದಿದೆ.
ಪ್ರಸಕ್ತ ಐಪಿಎಲ್ ನಲ್ಲಿ ಲಕ್ನೊದ ಪರ 2ನೇ ಗರಿಷ್ಠ ರನ್ ಸ್ಕೋರರ್ ಆಗಿರುವ ಮಿಚೆಲ್ ಮಾರ್ಷ್ ಅನುಪಸ್ಥಿತಿಯಲ್ಲಿ ಆಡಿರುವ ಲಕ್ನೊ ತಂಡಕ್ಕೆ ಆರಂಭಿಕ ಬ್ಯಾಟರ್ ಮರ್ಕ್ರಮ್(58 ರನ್, 31 ಎಸೆತ, 9 ಬೌಂಡರಿ, 1 ಸಿಕ್ಸರ್)ಹಾಗೂ ಪೂರನ್ (61 ರನ್, 34 ಎಸೆತ, 1 ಬೌಂಡರಿ, 7 ಸಿಕ್ಸರ್)ಆಸರೆಯಾದರು.
ಲಕ್ನೊದ ರನ್ ಚೇಸ್ ವೇಳೆ ಮತ್ತೊಮ್ಮೆ ಪ್ರಮುಖ ಪಾತ್ರವಹಿಸಿದ ಪೂರನ್ ಈ ವರ್ಷ ಒಟ್ಟು 349 ರನ್ ಗಳಿಸಿದ್ದಾರೆ.
ನಾಯಕ ರಿಷಭ್ ಪಂತ್(21 ರನ್, 18 ಎಸೆತ)ಜೊತೆಗೆ ಇನಿಂಗ್ಸ್ ಆರಂಭಿಸಿದ ಮರ್ಕ್ರಮ್ 6.2 ಓವರ್ಗಳಲ್ಲಿ 65 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆ ನಂತರ ಪೂರನ್ ಜೊತೆ 2ನೇ ವಿಕೆಟ್ಗೆ 58 ರನ್ ಸೇರಿಸುವ ಮೂಲಕ ತಂಡವನ್ನು ಗೆಲುವಿನ ಸ್ಥಿತಿಯಲ್ಲಿರಿಸಿದರು. ಪ್ರಸಕ್ತ ಐಪಿಎಲ್ ನಲ್ಲಿ ಒಟ್ಟು 31 ಸಿಕ್ಸರ್ಗಳನ್ನು ಸಿಡಿಸಿ ತನ್ನ ಪವರ್ ಪ್ರದರ್ಶಿಸಿದ ಪೂರನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಪೂರನ್ ಹಾಗೂ ಬದೋನಿ(ಔಟಾಗದೆ 28, 20 ಎಸೆತ) 3ನೇ ವಿಕೆಟ್ಗೆ 32 ರನ್ ಸೇರಿಸಿದರು. ಪೂರನ್ ಔಟಾದ ನಂತರ ತಂಡವನ್ನು ಆಧರಿಸಿದ ಬದೋನಿ ಮೂರು ಎಸೆತಗಳು ಬಾಕಿ ಇರುವಾಗಲೇ ಲಕ್ನೊ ತಂಡಕ್ಕೆ ಗೆಲುವು ತಂದುಕೊಟ್ಟರು. ಗುಜರಾತ್ ಪರ ಪ್ರಸಿದ್ಧ ಕೃಷ್ಣ(2-26)ಯಶಸ್ವಿ ಪ್ರದರ್ಶನ ನೀಡಿದರು. ಮುಹಮ್ಮದ್ ಸಿರಾಜ್ ದುಬಾರಿ ಬೌಲರ್ ಎನಿಸಿಕೊಂಡರು. ಸ್ಪಿನ್ನರ್ ಸಾಯಿ ಕಿಶೋರ್ 1.3 ಓವರ್ಗಳಲ್ಲಿ 35 ರನ್ ನೀಡಿದರು.
ಇದಕ್ಕೂ ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಗುಜರಾತ್ ತಂಡಕ್ಕೆ ಗಿಲ್ ಹಾಗೂ ಸುದರ್ಶನ್ ಮೊದಲ ವಿಕೆಟ್ಗೆ 120 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ಆದರೆ ಗುಜರಾತ್ ತಂಡವು ಕೊನೆಯ 8 ಓವರ್ಗಳಲ್ಲಿ 6 ವಿಕೆಟ್ ಗಳನ್ನು ಕಳೆದುಕೊಂಡು ಕೇವಲ 60 ರನ್ ಸೇರಿಸಿತು.
ಪವರ್ ಪ್ಲೇ ವೇಳೆ ಗಿಲ್ ಹಾಗೂ ಸುದರ್ಶನ್ ವಿಕೆಟ್ ನಷ್ಟವಿಲ್ಲದೆ 54 ರನ್ ಸೇರಿಸಿದರು. ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲಿ ಬೌಂಡರಿ ಗಳಿಸಿದ ಸುದರ್ಶನ್ ಇನಿಂಗ್ಸ್ ಗೆ ಚಾಲನೆ ನೀಡಿದರು. ಸುದರ್ಶನ್ ಐಪಿಎಲ್ ನ 6 ಇನಿಂಗ್ಸ್ನಲ್ಲಿ ತನ್ನ 4ನೇ ಅರ್ಧಶತಕ ಗಳಿಸಿದರು. ಗಿಲ್ ಹಾಗೂ ಸುದರ್ಶನ್ ಸತತ ಓವರ್ ಗಳಲ್ಲಿ ವಿಕೆಟ್ ಒಪ್ಪಿಸಿದ ನಂತರ ಲಕ್ನೊ ತಂಡ ಮರು ಹೋರಾಟ ನೀಡಿತು.
ಲಕ್ನೊ ತಂಡವು ಮಾರ್ಷ್ ಬದಲಿಗೆ ಹಿಮ್ಮತ್ ಸಿಂಗ್ ರನ್ನು ಸೇರಿಸಿಕೊಂಡರೆ, ಗುಜರಾತ್ ತಂಡವು ಎಡಗೈ ವೇಗಿ ಕುಲ್ವಂತ್ ಬದಲಿಗೆ ಆಲ್ರೌಂಡರ್ ವಾಶಿಂಗ್ಟನ್ ಸುಂದರ್ಗೆ ಮಣೆ ಹಾಕಿತು.