9 ವರ್ಷಗಳ ಬಳಿಕ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ರಿಷಭ್ ಪಂತ್

ರಿಷಭ್ ಪಂತ್ | PC : PTI
ಲಕ್ನೋ: ಲಕ್ನೊದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ಶನಿವಾರ ನಡೆದ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಲಕ್ನೊ ಸೂಪರ್ ಜಯಂಟ್ಸ್ ತಂಡದ ನಾಯಕ ರಿಷಭ್ ಪಂತ್ ಆರಂಭಿಕ ಆಟಗಾರನಾಗಿ ಕ್ರೀಸ್ಗೆ ಇಳಿದರು.
ಏಡನ್ ಮರ್ಕ್ರಾಮ್ ಜೊತೆಗೆ ಪಂತ್ ಇನಿಂಗ್ಸ್ ಆರಂಭಿಸಲು ಮೈದಾನಕ್ಕೆ ಬರುತ್ತಿದ್ದಾಗ ಪ್ರೇಕ್ಷಕರು ಕಿವಿಗಡಚಿಕ್ಕುವ ಚಪ್ಪಾಳೆ ಮತ್ತು ಘೋಷಣೆಗಳ ಮೂಲಕ ಸ್ವಾಗತಿಸಿದರು. ತಂಡದ ಆಡಳಿತದ ಈ ದಿಟ್ಟ ನಡೆಯನ್ನು ಅಭಿಮಾನಿಗಳು ತೆರೆದ ಬಾಹುಗಳಿಂದ ಸ್ವೀಕರಿಸಿದರು.
ಇದಕ್ಕೂ ಮೊದಲು, ಟಿ20 ಪಂದ್ಯಗಳಲ್ಲಿ ಅವರು ಕೇವಲ 21 ಬಾರಿ ಇನಿಂಗ್ಸ್ ಆರಂಭಿಸಿದ್ದರು. ಆ ಪಂದ್ಯಗಳಲ್ಲಿ, 32.2ರ ಸರಾಸರಿಯಲ್ಲಿ 162.21ರ ಸ್ಟ್ರೈಕ್ ರೇಟ್ನಲ್ಲಿ 644 ರನ್ಗಳನ್ನು ಕಲೆ ಹಾಕಿದ್ದರು. ಅದರಲ್ಲಿ ಐದು ಅರ್ಧಶತಕಗಳು ಮತ್ತು ಒಂದು ಶತಕವಿದೆ.
ಆದರೆ, ಐಪಿಲ್ನಲ್ಲಿ ಪಂತ್ ಆರಂಭಿಕನಾಗಿ ಇಳಿದದ್ದು ಅಪರೂಪ. 2016ರಲ್ಲಿ ತನ್ನ ಚೊಚ್ಚಲ ಋತುವಿನಲ್ಲಿ ಅವರು ಕೇವಲ ನಾಲ್ಕು ಬಾರಿ ಆರಂಭಿಕನಾಗಿ ಆಡಿದ್ದಾರೆ.
ಆ ಬಳಿಕ, ಪಂತ್ ಮಧ್ಯಮ ಸರದಿಯಲ್ಲೇ ತನ್ನ ಸ್ಥಾನವನ್ನು ಗಟ್ಟಿಮಾಡಿಕೊಂಡಿದ್ದರು. ಅದೇ ಸ್ಥಾನದಲ್ಲಿ ಅವರು ಹಲವು ಪಂದ್ಯಗೆಲ್ಲಿಸುವ ಇನಿಂಗ್ಸ್ಗಳನ್ನು ಆಡಿದ್ದರು.
ಈಗ ಸುಮಾರು 9 ವರ್ಷಗಳ ಬಳಿಕ ಅವರು ಮತ್ತೆ ಆರಂಭಿಕನಾಗಿ ಇಳಿದಿದ್ದಾರೆ.
ಆದರೂ, ಆರಂಭಿಕ ಸ್ಥಾನದಲ್ಲಿ ಶನಿವಾರ ಅವರು ಹೆಚ್ಚಿನ ಯಶಸ್ಸು ಕಾಣಲಿಲ್ಲ. 18 ಎಸೆತಗಳಲ್ಲಿ 21 ರನ್ಗಳನ್ನು ಗಳಿಸಿ ಪೆವಿಲಿಯನ್ಗೆ ವಾಪಸಾದರು.