IPL: ಆರೆಂಜ್ ಆರ್ಮಿಗೆ ರನ್ ಸುರಿಮಳೆಯ 'ಅಭಿಷೇಕ'; ಪಂಜಾಬ್ ವಿರುದ್ಧ ಹೈದರಾಬಾದ್ ಗೆ ಭರ್ಜರಿ ಜಯ

Update: 2025-04-12 23:26 IST
IPL: ಆರೆಂಜ್ ಆರ್ಮಿಗೆ ರನ್ ಸುರಿಮಳೆಯ ಅಭಿಷೇಕ; ಪಂಜಾಬ್ ವಿರುದ್ಧ ಹೈದರಾಬಾದ್ ಗೆ ಭರ್ಜರಿ ಜಯ

Photo : X

  • whatsapp icon

ಹೈದರಾಬಾದ್ : ಇಲ್ಲಿನ ಉಪ್ಪಳ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ನ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಭರ್ಜರಿ ಜಯಗಳಿಸಿದೆ.

ಪಂಜಾಬ್ ನೀಡಿದ 245 ರನ್ ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ 9 ಬಾಲ್ ಗಳು ಬಾಕಿಯಿರುವಂತೆ 2 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿ ಭರ್ಜರಿ ಜಯ ಗಳಿಸಿ ಜಯದ ಹಳಿಗೆ ಮರಳಿದೆ. ಅಭಿಷೇಕ್ ಶರ್ಮಾ ಸ್ಪೋಟಕ ಆಟ ಪ್ರದರ್ಶಿಸಿ ಸ್ಟೇಡಿಯಂನಲ್ಲಿ ತುಂಬಿದ್ದ ಐಪಿಎಲ್ ಪ್ರೇಮಿಗಳಿಗೆ ಭರ್ಜರಿ ರಸದೌತಣ ನೀಡಿದರು. 55 ಎಸೆತ ಎದುರಿಸಿದ ಅವರು 141 ರನ್ ಗಳಿಸಿ ತನ್ನ ರನ್ ದಾಹವನ್ನು ಆರೆಂಜ್ ಆರ್ಮಿಯ ಎದುರು ಪ್ರದರ್ಶಿಸಿದರು.

ಅಭಿಷೇಕ್ ಶರ್ಮ ಸ್ಟೇಡಿಯಂನ 360 ಡಿಗ್ರಿ ಸುತ್ತಲೂ ಬ್ಯಾಟ್ ಬೀಸುತ್ತಿದ್ದಂತೆ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ನ ಬೌಲರ್ ಗಳು ಬೆವರು ಸುರಿಸಿಕೊಂಡು ಅಸಹಾಯಕರಂತೆ ನಿಂತು ದಂಡಿಸಿಕೊಳ್ಳುತ್ತಿದ್ದರು. 

ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಹಾಗೂ ಟ್ರಾವಿಸ್ ಹೆಡ್(66 ರನ್, 37 ಎಸೆತ, 9 ಬೌಂಡರಿ,3 ಸಿಕ್ಸರ್) 12.2 ಓವರ್‌ ಗಳಲ್ಲಿ 171 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಅಭಿಷೇಕ್ ಕೇವಲ 40 ಎಸೆತಗಳಲ್ಲಿ 11 ಬೌಂಡರಿ, 6 ಸಿಕ್ಸರ್‌ ಗಳ ಸಹಾಯದಿಂದ ಶತಕ ಪೂರೈಸಿದರು.

ಪಂಜಾಬ್ ತಂಡವು 8 ಬೌಲರ್‌ ಗಳನ್ನು ಕಣಕ್ಕಿಳಿಸಿದರೂ ಅಭಿಷೇಕ್ ಅವರ ಅಬ್ಬರದ ಬ್ಯಾಟಿಂಗ್‌ ಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಹೈದರಾಬಾದ್ ಗೆಲುವಿಗೆ 22 ರನ್ ಅಗತ್ಯವಿದ್ದಾಗ ಅಭಿಷೇಕ್ ಅವರು ಅರ್ಷದೀಪ್ ಸಿಂಗ್‌ ಗೆ ವಿಕೆಟ್ ಒಪ್ಪಿಸಿದರು. ಕ್ಲಾಸೆನ್(ಔಟಾಗದೆ 21)ಹಾಗೂ ಕಿಶನ್(ಔಟಾಗದೆ 9)ಗೆಲುವಿನ ವಿಧಿ ವಿಧಾನ ಪೂರೈಸಿದರು.

ಇದಕ್ಕೂ ಮೊದಲು ಟಾಸ್ ಜಯಿಸಿದ ಪಂಜಾಬ್ ತಂಡವು ನಾಯಕ ಶ್ರೇಯಸ್ ಅಯ್ಯರ್ ಅವರ ಬಿರುಸಿನ ಬ್ಯಾಟಿಂಗ್(82 ರನ್, 36 ಎಸೆತ, 6 ಬೌಂಡರಿ, 6 ಸಿಕ್ಸರ್)ಸಹಾಯದಿಂದ ನಿಗದಿತ 20 ಓವರ್‌ ಗಳಲ್ಲಿ 6 ವಿಕೆಟ್‌ ಗಳ ನಷ್ಟಕ್ಕೆ 245 ರನ್ ಗಳಿಸಿತು.

ಇನಿಂಗ್ಸ್ ಆರಂಭಿಸಿದ ಪ್ರಭ್ಸಿಮ್ರನ್ ಸಿಂಗ್(42 ರನ್, 23 ಎಸೆತ)ಹಾಗೂ ಪ್ರಿಯಾಂಶ್ ಆರ್ಯ(36 ರನ್, 13 ಎಸೆತ) ಮೊದಲ ವಿಕೆಟ್ನಲ್ಲಿ 4 ಓವರ್‌ ಗಳಲ್ಲಿ 66 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಪಂಜಾಬ್ ತಂಡವು ಕೇವಲ 3 ಓವರ್‌ ಗಳಲ್ಲಿ 50 ರನ್ ಗಳಿಸಿತು. ಪ್ರಭ್ಸಿಮ್ರನ್, ಮುಹಮ್ಮದ್ ಶಮಿ ಬೌಲಿಂಗ್‌ ನಲ್ಲಿ 3 ಬೌಂಡರಿಗಳನ್ನು ಗಳಿಸಿದರೆ, ಪ್ರಿಯಾಂಶ್ ಅವರು ಪ್ಯಾಟ್ ಕಮಿನ್ಸ್(0/40)ಬೌಲಿಂಗ್‌ ನಲ್ಲಿ 1 ಸಿಕ್ಸರ್, 2 ಬೌಂಡರಿ ಗಳಿಸಿದರು.

ಶ್ರೇಯಸ್ ಅಯ್ಯರ್ ಹಾಗೂ ನೆಹಾಲ್ ವಧೇರ (27 ರನ್, 22 ಎಸೆತ) 3ನೇ ವಿಕೆಟ್‌ ಗೆ ಕೇವಲ 40 ಎಸೆತಗಳಲ್ಲಿ 73 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಆಲ್ರೌಂಡರ್ ಮ್ಯಾಕ್ಸ್ವೆಲ್(3ರನ್) ಹಾಗೂ ಅಯ್ಯರ್ 5ನೇ ವಿಕೆಟ್‌ ಗೆ 37 ರನ್ ಸೇರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

7ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 39 ರನ್ ಸೇರಿಸಿರುವ ಸ್ಟೋಯಿನಿಸ್(ಔಟಾಗದೆ 34 ರನ್, 11 ಎಸೆತ) ಹಾಗೂ ಜಾನ್ಸನ್(ಔಟಾಗದೆ 5,5 ಎಸೆತ) ತಂಡದ ಮೊತ್ತವನ್ನು 245ಕ್ಕೆ ತಲುಪಿಸಿದರು.

ಪಂಜಾಬ್ ತಂಡವು ಐಪಿಎಲ್ನಲ್ಲಿ 2ನೇ ಗರಿಷ್ಠ ಮೊತ್ತ ಗಳಿಸಿತು. 2024ರಲ್ಲಿ ಕೋಲ್ಕತಾದಲ್ಲಿ ಕೆಕೆಆರ್ ವಿರುದ್ಧ 2 ವಿಕೆಟ್ಗೆ 262 ರನ್ ಗಳಿಸಿತ್ತು. ಮುಹಮ್ಮದ್ ಶಮಿ(0/75)ಐಪಿಎಲ್ ಇತಿಹಾಸದಲ್ಲಿ 2ನೇ ಅತಿ ದುಬಾರಿ ಬೌಲರ್ ಎನಿಸಿಕೊಂಡರು. ಜೋಫ್ರಾ ಆರ್ಚರ್ ಇತ್ತೀಚೆಗೆ ಹೈದರಾಬಾದ್‌ ನಲ್ಲಿ ಸನ್ರೈಸರ್ಸ್ ವಿರುದ್ಧ ವಿಕೆಟ್ ಪಡೆಯದೆ 76 ರನ್ ಬಿಟ್ಟುಕೊಟ್ಟು ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡಿದ್ದರು.

ಸನ್ರೈಸರ್ಸ್ ಪರ ವೇಗದ ಬೌಲರ್ ಹರ್ಷಲ್ ಪಟೇಲ್(4-42)ಯಶಸ್ವಿ ಬೌಲರ್ ಎನಿಸಿಕೊಂಡರು. ಚೊಚ್ಚಲ ಐಪಿಎಲ್ ಪಂದ್ಯ ಆಡಿದ ಇಶಾನ್ ಮಾಲಿಂಗ(2-45)ಎರಡು ವಿಕೆಟ್ ಪಡೆದರು.

 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News