6 ಪಂದ್ಯಗಳಲ್ಲಿ ಒಂದರಲ್ಲಿ ಜಯ: 2025ರ ಐಪಿಎಲ್ ನಲ್ಲಿ ಸಿ ಎಸ್ ಕೆ ಅಭಿಯಾನ ಅಂತ್ಯವಾಯಿತೇ?

PC : PTI
ಹೊಸದಿಲ್ಲಿ: 2025ರ ಆವೃತ್ತಿಯ ಐಪಿಎಲ್ ನ ಆರಂಭಿಕ ಪಂದ್ಯವನ್ನು ಗೆದ್ದ ನಂತರ ಸತತ ಐದು ಪಂದ್ಯಗಳಲ್ಲಿ ಸೋಲನುಭವಿಸಿರುವ ಚೆನ್ನೈಸೂಪರ್ ಕಿಂಗ್ಸ್ ತಂಡ ಸದ್ಯ ಅನಿಶ್ಚಿತತೆಯ ಸ್ಥಿತಿಯಲ್ಲಿದೆ. ಐದು ಬಾರಿಯ ಚಾಂಪಿಯನ್ ಸಿ ಎಸ್ ಕೆ ತಂಡವು ಐಪಿಎಲ್ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ತನ್ನ ಕನಿಷ್ಠ ಸ್ಕೋರನ್ನು ಗಳಿಸಿದ ಪರಿಣಾಮವಾಗಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿದೆ.
ಆರು ಪಂದ್ಯಗಳಲ್ಲಿ ಕೇವಲ 1ರಲ್ಲಿ ಜಯ ಸಾಧಿಸಿರುವ ಸಿ ಎಸ್ ಕೆ ದಯನೀಯ ಸ್ಥಿತಿಯಲ್ಲಿದೆ. ಹಾಲಿ ಚಾಂಪಿಯನ್ ಕೆಕೆಆರ್ ಈ ವರ್ಷ ಕಳಪೆ ಆರಂಭ ಪಡೆದಿದ್ದರೂ ಪ್ಲೇ ಆಫ್ಗೆ ತಲುಪುವ ಅವಕಾಶ ಈಗಲೂ ಹೊಂದಿದೆ.
ಇತ್ತೀಚೆಗಿನ ಐಪಿಎಲ್ ಇತಿಹಾಸವನ್ನು ನೋಡಿದರೆ ತಂಡಗಳು ಕಳಪೆ ಆರಂಭದಿಂದ ಚೇತರಿಸಿಕೊಂಡಿವೆ. 2024ರಲ್ಲಿ ಆರ್ಸಿಬಿಯ ಸಾಧನೆಯೇ ಇದಕ್ಕೆ ಸಾಕ್ಷಿ. ಆರ್ಸಿಬಿ ಸತತ 6 ಪಂದ್ಯಗಳಲ್ಲಿ ಜಯ ಸಾಧಿಸುವ ಮೊದಲು ಮೊದಲ 8 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಗೆಲುವು ಪಡೆದಿತ್ತು.
ಆರ್ಸಿಬಿ ಬಲಿಷ್ಠ ತಂಡಗಳಾದ ಎಸ್ಆರ್ಎಚ್, ಗುಜರಾತ್ ಟೈಟಾನ್ಸ್(ಸತತ 2 ಬಾರಿ), ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಿರ್ಣಾಯಕ ಜಯ ಸಾಧಿಸಿತ್ತು.
ಪ್ಲೇ ಆಫ್ಗೆ ಅವಕಾಶ ಸಿಗಬೇಕಾದರೆ ತಂಡಗಳು 7 ಪಂದ್ಯಗಳಲ್ಲಿ ಗೆಲ್ಲುವ ಅಗತ್ಯವಿದೆ. 8 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಅರ್ಹತೆ ಪಡೆಯುವುದು ಖಚಿತವಾಗುತ್ತದೆ. 14 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಪಡೆಯದ ತಂಡಗಳು ಪ್ಲೇ ಆಫ್ನಿಂದ ವಂಚಿತವಾಗುತ್ತವೆ.
2019ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಆರು ಪಂದ್ಯಗಳಲ್ಲಿ ಜಯ ಸಾಧಿಸಿದ್ದರೂ ಪ್ಲೇ ಆಫ್ಗೆ ಅರ್ಹತೆ ಪಡೆದಿರುವ ಏಕೈಕ ತಂಡವಾಗಿದೆ.ಆಗ 6ರಲ್ಲಿ ಜಯ,8ರಲ್ಲಿ ಸೋಲಿನೊಂದಿಗೆ ಹೈದರಾಬಾದ್ 4ನೇ ಸ್ಥಾನ ಪಡೆದಿತ್ತು.
ಐಪಿಎಲ್ ಇತಿಹಾಸದಲ್ಲಿ 7 ಪಂದ್ಯಗಳಲ್ಲಿ ಜಯ ಸಾಧಿಸಿರುವ 32 ತಂಡಗಳ ಪೈಕಿ ಕೇವಲ 12 ತಂಡಗಳು ಪ್ಲೇ ಆಫ್ಗೆ ತೇರ್ಗಡೆಯಾಗಿವೆ. ಯಶಸ್ಸಿನ ದರ ಶೇ.37.5ರಷ್ಟಿದೆ. ಕಳೆದ ವರ್ಷ 7 ಗೆಲುವು, 7 ಸೋಲು ಕಂಡಿರುವ 4 ತಂಡಗಳು ಪ್ಲೇ ಆಫ್ಗೆ ಲಗ್ಗೆ ಇಟ್ಟಿದ್ದವು. ಇದರಲ್ಲಿ ಆರ್ಸಿಬಿ ಕೂಡ ಸೇರಿದೆ.
ಸಿ ಎಸ್ ಕೆ ತಂಡದ ಸ್ವಂತ ಇತಿಹಾಸ ಅದರಲ್ಲೂ ವಿಶೇಷವಾಗಿ 2010ರ ಪ್ರಶಸ್ತಿ ಗೆಲುವಿನ ಅಭಿಯಾನವು ಅದಕ್ಕೆ ಈಗ ಭರವಸೆಯನ್ನು ನೀಡುತ್ತಿದೆ. 2010ರಲ್ಲಿ ಆರಂಭದಲ್ಲಿ 7 ಪಂದ್ಯಗಳಲ್ಲಿ ಕೇವಲ 2ರಲ್ಲಿ ಜಯ ಸಾಧಿಸಿದ್ದ ಚೆನ್ನೈ ತಂಢವು ನಂತರ ತವರಿನಲ್ಲಿಆಡಿದ್ದ 3 ಪಂದ್ಯಗಳನ್ನು ಗೆದ್ದು ತನ್ನ ದಾಖಲೆಯನ್ನು 5-5ಕ್ಕೆ ಸಮಬಲಗೊಳಿಸಿತ್ತು. ಸಿ ಎಸ್ ಕೆ ಇನ್ನೆರಡು ಪಂದ್ಯಗಳನ್ನು ಸೋತಿದ್ದರೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ ನಿರ್ಣಾಯಕ ಗೆಲುವು ದಾಖಲಿಸಿತ್ತು.
2010ರ ಐಪಿಎಲ್ ಫೈನಲ್ ನಲ್ಲಿ ಸತತ 2 ಸಿಕ್ಸರ್ಗಳನ್ನು ಸಿಡಿಸಿದ್ದ ಧೋನಿ ಚೆನ್ನೈಗೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಇದನ್ನು ಅತ್ಯಂತ ಭಾವನಾತ್ಮಕ ಪಂದ್ಯವೆಂದು ಬಣ್ಣಿಸಲಾಗುತ್ತಿದೆ.
ಇದೀಗ ನಾಯಕನಾಗಿ ಸಿ ಎಸ್ ಕೆ ವಾಪಸಾಗಿರುವ ಧೋನಿ ಕಠಿಣ ಸವಾಲನ್ನು ಎದುರಿಸುತ್ತಿದ್ದು, ಪರದಾಡುತ್ತಿರುವ ತಂಡಕ್ಕೆ ಜೀವ ತುಂಬಲು ಹೆಣಗಾಡುತ್ತಿದ್ದಾರೆ.