ಸಿಡ್ನಿ ಟೆಸ್ಟ್: ಭಾರತ ತಿರುಗೇಟು
ಸಿಡ್ನಿ: ಬಾರ್ಡರ್- ಗಾವಸ್ಕರ್ ಟ್ರೋಫಿ ಸರಣಿಯ ಕೊನೆಯ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶನಿವಾರ ಭಾರತದ ಬೌಲರ್ ಗಳು ಮೊನಚಿನ ದಾಳಿ ನಡೆಸಿ ಅತಿಥೇಯ ತಂಡಕ್ಕೆ ತಿರುಗೇಟು ನೀಡಿದ್ದಾರೆ.
ಮೊದಲ ದಿನ ಅದ್ಭುತ ಪ್ರದರ್ಶನದ ಮೂಲಕ ಭಾರತ ತಂಡವನ್ನು 185 ರನ್ ಗಳಿಗೆ ಕಟ್ಟಿಹಾಕಿದ್ದ ಆಸ್ಟ್ರೇಲಿಯಾ ಆಟಗಾರರು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶನಿವಾರ ಭಾರತದ ಬೌಲಿಂಗ್ ಬಿಸಿ ಅನುಭವಿಸಿದರು. ಮೊಹ್ಮದ್ ಸಿರಾಜ್, ಜಸ್ಪ್ರೀತ್ ಬೂಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್ ದಾಳಿಗೆ ನಲುಗಿದ ಆಸ್ಟ್ರೇಲಿಯಾ ತಂಡ ಭೋಜನ ವಿರಾಮದ ವೇಳೆಗೆ 5 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿತ್ತು.
ಶುಕ್ರವಾರ ಭೂಮ್ರಾ ಅವರು ಆರಂಭಿಕ ಬ್ಯಾಟ್ಸ್ಮನ್ ಉಸ್ಮಾನ್ ಖ್ವಾಜಾ ವಿಕೆಟ್ ಕೀಳುವ ಮೂಲಕ ಪ್ರವಾಸಿ ತಂಡಕ್ಕೆ ಆಘಾತ ನೀಡಿದರೆ, ಶನಿವಾರ ಮೊದಲ ಅವಧಿಯಲ್ಲಿ ಯುವ ಬ್ಯಾಟ್ಸ್ಮನ್ ಸ್ಯಾಮ್ ಕೊನ್ಸ್ಟಸ್ (23) ಅವರನ್ನು ಸಿರಾಜ್ ಪೆವಿಲಿಯನ್ ಗೆ ಕಳುಹಿಸಿದರು. ಅಲ್ಪ ಅಂತರದಲ್ಲೇ ಲ್ಯಾಂಬುಶೆನ್ ಮತ್ತು ಟ್ರಾವಿಸ್ ಹೆಡ್ ವಿಕೆಟ್ ಒಪ್ಪಿಸುವ ಮೂಲಕ ಆಸ್ಟ್ರೇಲಿಯಾ ಸಂಕಷ್ಟಕ್ಕೆ ಸಿಲುಕಿತು.
ಒಂದು ಹಂತದಲ್ಲಿ 39 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಸ್ಟೀವನ್ ಸ್ಮಿತ್ (33) ಹಾಗೂ ಚೊಚ್ಚಲ ಟೆಸ್ಟ್ ಆಡುತ್ತಿರುವ ಬೆವೂ ವೆಬ್ಸ್ಟ್ರ್ ಆಸರೆಯಾದರು. ಕನ್ನಡಿಗ ವೇಗಿ ಪ್ರಸಿದ್ಧ್ ಕೃಷ್ಣ ಭೋಜನ ವಿರಾಮಕ್ಕೆ ಮುನ್ನ ಸ್ಟೀವನ್ ಸ್ಮಿತ್ ಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಜತೆಯಾಟ ಮುರಿದರು.