ಬುಮ್ರಾ, ಮಹಾರಾಜ್, ಬಶೀರ್ ಅವರಿದ್ದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ!
ಸಿಡ್ನಿ: ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿ, ಮೊದಲ ಇನಿಂಗ್ಸ್‌ನಲ್ಲಿ ಕನಿಷ್ಠ ಸರಾಸರಿ ಹೊಂದಿರುವ ವಿರಾಟ್ ಕೊಹ್ಲಿ ಬ್ಯಾಟರ್‌ಗಳ ಬದಲಿಗೆ ಬೌಲರ್‌ಗಳಾದ ಜಸ್‌ಪ್ರಿತ್ ಬುಮ್ರಾ, ಕೇಶವ ಮಹಾರಾಜ್ ಹಾಗೂ ಶುಐಬ್ ಬಶೀರ್ ಅವರನ್ನೊಳಗೊಂಡ ಪಟ್ಟಿಗೆ ಸೇರಿದ್ದಾರೆ.
2024ರ ನಂತರ ಕೊಹ್ಲಿ ಅವರ ಮೊದಲ ಇನಿಂಗ್ಸ್ ಸರಾಸರಿ ಮೂರನೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಬುಮ್ರಾ ಸಹಿತ ಕೆಲವು ಬಾಲಂಗೋಚಿಗಳಿಗಿಂತ ಕೆಳಗಿದ್ದಾರೆ.
ಆಸ್ಟ್ರೇಲಿಯ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ನಂತರ ಕೊಹ್ಲಿ ಸರಾಸರಿ ಪಾತಾಳಕ್ಕೆ ಕುಸಿದಿದೆ. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 69 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ ಅವರು ಒಂದೂ ಬೌಂಡರಿ ಬಾರಿಸದೆ ಕೇವಲ 17 ರನ್ ಗಳಿಸಿ ಸರಣಿಯಲ್ಲಿ 3ನೇ ಬಾರಿ ಸ್ಕಾಟ್ ಬೋಲ್ಯಾಂಡ್‌ಗೆ ವಿಕೆಟ್ ಒಪ್ಪಿಸಿದರು.
2024ರ ಆರಂಭದಿಂದ ಕೊಹ್ಲಿ ಅವರು ಟೆಸ್ಟ್‌ನ ಮೊದಲ 5 ಇನಿಂಗ್ಸ್‌ಗಳಲ್ಲಿ 7ರ ಸರಾಸರಿಯಲ್ಲಿ 35 ರನ್ ಗಳಿಸಿದ್ದರು. ಈ ಅವಧಿಯಲ್ಲಿ ಗರಿಷ್ಠ ಸ್ಕೋರ್ 17. ಕೊಹ್ಲಿ ಅವರ ಮೊದಲ ಇನಿಂಗ್ಸ್ ಸ್ಕೋರ್:17, 7,5,0 ಹಾಗೂ 6.
ಕೇಶವ ಮಹಾರಾಜ್ ಅವರು 5 ಇನಿಂಗ್ಸ್‌ಗಳಲ್ಲಿ 5.4ರ ಸರಾಸರಿಯಲ್ಲಿ 27 ರನ್ ಗಳಿಸಿದ್ದಾರೆ,
ಇಂಗ್ಲೆಂಡ್ ಸ್ಪಿನ್ನರ್ ಶುಐಬ್ ಬಶೀರ್ 7 ಇನಿಂಗ್ಸ್‌ಗಳಲ್ಲಿ 8.33ರ ಸರಾಸರಿಯಲ್ಲಿ 25 ರನ್ ಗಳಿಸಿದ್ದು, 11 ಟಾಪ್ ಸ್ಕೋರಾಗಿದೆ.
ಬುಮ್ರಾ ಅವರ ಮೊದಲ ಇನಿಂಗ್ಸ್‌ನ ಸರಾಸರಿಯು ಕೊಹ್ಲಿಗಿಂತ ಉತ್ತಮವಾಗಿದೆ. ಬುಮ್ರಾ 2024ರ ನಂತರ 7 ಇನಿಂಗ್ಸ್‌ಗಳಲ್ಲಿ 70 ರನ್ ಗಳಿಸಿದ್ದು, 26 ಟಾಪ್ ಸ್ಕೋರಾಗಿದೆ.
5ನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಕೊಹ್ಲಿ ಸಹಿತ ಭಾರತದ ಅಗ್ರ ಸರದಿಯ ಆಟಗಾರರು ಪರದಾಟ ನಡೆಸಿದ್ದು, ರಿಷಭ್ ಪಂತ್(40), ರವೀಂದ್ರ ಜಡೇಜ(26)ಹಾಗೂ ಬುಮ್ರಾ(22)ಒಂದಷ್ಟು ಪ್ರತಿರೋಧ ಒಡ್ಡಿ ಭಾರತದ ಸ್ಕೋರನ್ನು 185ಕ್ಕೆ ತಲುಪಿಸಿದರು.