ರೋಹಿತ್ ಶರ್ಮಾರ ಅನುಪಸ್ಥಿತಿ ‘‘ಭಾವನಾತ್ಮಕ’’ ನಿರ್ಧಾರ: ರಿಷಭ್ ಪಂತ್
ಸಿಡ್ನಿ : ಆಸ್ಟ್ರೇಲಿಯ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾರ ಅನುಪಸ್ಥಿತಿಯು ‘‘ಭಾವನಾತ್ಮಕ’’ ನಿರ್ಧಾರವಾಗಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್ ಶುಕ್ರವಾರ ಹೇಳಿದ್ದಾರೆ.
37 ವರ್ಷದ ಭಾರತೀಯ ನಾಯಕ ಹಾಲಿ ಸರಣಿಯುದ್ದಕ್ಕೂ ರನ್‌ಗಾಗಿ ಪರದಾಡಿದ್ದರು. ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಅವರ ಅನುಪಸ್ಥಿತಿಯು ತಂಡದಿಂದ ಅವರು ಹೊರಗುಳಿಯುವ ಸಾಧ್ಯತೆಯ ಸೂಚನೆಯನ್ನು ನೀಡಿತ್ತು.
ರೋಹಿತ್ ತಂಡದ ಹಿತವನ್ನು ಗಮನದಲ್ಲಿಟ್ಟುಕೊಂಡು ‘‘ವಿಶ್ರಾಂತಿ ಪಡೆಯುವ ನಿರ್ಧಾರ’’ವನ್ನು ತೆಗೆದುಕೊಂಡಿದ್ದಾರೆ ಎಂದು ಟಾಸ್ ವೇಳೆ ಉಸ್ತುವಾರಿ ನಾಯಕ ಜಸ್‌ಪ್ರಿತ್ ಬುಮ್ರಾ ಹೇಳಿದರು.
‘‘ಇದು ಖಂಡಿತವಾಗಿಯೂ ಭಾವನಾತ್ಮಕ ನಿರ್ಧಾರವಾಗಿದೆ. ಯಾಕೆಂದರೆ ಅವರು ತುಂಬಾ ಸಮಯ ತಂಡದ ನಾಯಕನಾಗಿದ್ದರು’’ ಎಂದು ಮೊದಲ ದಿನದ ಆಟದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಪಂತ್ ಹೇಳಿದರು.
ರೋಹಿತ್‌ರ ನಾಯಕತ್ವವನ್ನು ಪಂತ್ ಶ್ಲಾಘಿಸಿದರು. ರೋಹಿತ್‌ರನ್ನು ತಂಡದಿಂದ ಹೊರಗಿಡುವುದು ತಂಡಾಡಳಿತದ ನಿರ್ಧಾರವಾಗಿತ್ತು ಎಂಬ ಸೂಚನೆಯನ್ನೂ ಅವರು ನೀಡಿದರು.
‘‘ನಾವು ಅವರನ್ನು ತಂಡದ ನಾಯಕನಾಗಿ ನೋಡುತ್ತೇವೆ. ಆದರೆ, ನಾವು ಭಾಗಿಯಾಗದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದು ತಂಡಾಡಳಿತದ ನಿರ್ಧಾರವಾಗಿದೆ. ನಾನು ಆ ನಿರ್ಧಾರದ ಭಾಗವಾಗಿಲ್ಲ’’ ಎಂದು ಅವರು ಹೇಳಿದರು.
ನಿವೃತ್ತಿ ನಿರ್ಧಾರದ ಆರಂಭ?: ರವಿ ಶಾಸ್ತ್ರಿ
ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಗೊಳ್ಳುವ ನಿರ್ಧಾರಕ್ಕೆ ರೋಹಿತ್ ಚಾಲನೆ ನೀಡಿರಬಹುದು ಎಂದು ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ 67 ಟೆಸ್ಟ್‌ಗಳನ್ನು ಆಡಿದ್ದಾರೆ.
‘‘‘ಈ ಪಂದ್ಯದಲ್ಲಿ ತಂಡದಿಂದ ಹೊರಗುಳಿಯಲು ನಾನು ಸಿದ್ಧನಿದ್ದೇನೆ’ ಎಂದು ನಾಯಕನೊಬ್ಬ ಹೇಳುವುದು ಕೂಡ ದಿಟ್ಟ ನಿರ್ಧಾರವಾಗಿದೆ’’ ಎಂದು ಫಾಕ್ಸ್ ಸ್ಪೋರ್ಟ್ಸ್‌ನಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಶಾಸ್ತ್ರಿ ಹೇಳಿದರು.
‘‘ಮುಂದೆ ಸ್ವದೇಶದಲ್ಲಿ ಟೆಸ್ಟ್ ಸರಣಿ ಏನಾದರೂ ಇದ್ದಿದ್ದರೆ, ಆಡುವುದನ್ನು ಮುಂದುವರಿಸುವ ಬಗ್ಗೆ ಅವರು ಯೋಚಿಸುವ ಸಾಧ್ಯತೆಯಿತ್ತು. ಆದರೆ, ಈ ಟೆಸ್ಟ್‌ನ ಕೊನೆಯಲ್ಲಿ ಅವರು ನಿವೃತ್ತಿ ಘೋಷಿಸಬಹುದು ಎಂದು ನನಗನಿಸುತ್ತದೆ’’ ಎಂದರು.
‘‘ಭಾರತದಲ್ಲಿ ಯುವ ಕ್ರಿಕೆಟಿಗರಿಲ್ಲ ಎಂದಲ್ಲ. ನೇಪಥ್ಯದಲ್ಲಿ ಅತ್ಯುತ್ತಮ ಆಟಗಾರರಿದ್ದಾರೆ. ಅವರನ್ನು ಬೆಳೆಸಲು ಇದು ಸಕಾಲ. ಇದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ. ಎಲ್ಲದಕ್ಕೂ ಸಮಯ ಎಂಬುದಿದೆ’’ ಎಂದು ಮಾಜಿ ಕ್ರಿಕೆಟಿಗ ಹೇಳಿದರು.
ಕಳೆದ ವರ್ಷ ಭಾರತ ಟಿ20 ವಿಶ್ವಕಪ್ ಗೆದ್ದ ಬಳಿಕ, ರೋಹಿತ್ ಟಿ20 ಅಂತರ್‌ರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾಗಿದ್ದಾರೆ. ಅವರು ಏಕದಿನ ಪಂದ್ಯಗಳಲ್ಲಿ ಆಡುವುದನ್ನು ಮುಂದುವರಿಸಿದ್ದಾರೆ.