ವಿಶ್ವ ಬ್ಲಿಝ್ ಚಾಂಪಿಯನ್‌ಶಿಪ್ ಪ್ರಶಸ್ತಿ ಹಂಚಿಕೊಂಡ ಕಾರ್ಲ್‌ಸನ್, ನೆಪೊಮ್ನಿಯಾಚ್ಚಿ
ನ್ಯೂಯಾರ್ಕ್: ಐತಿಹಾಸಿಕ ಬೆಳವಣಿಗೆಯೊಂದರಲ್ಲಿ ಹಾಲಿ ವಿಶ್ವ ಬ್ಲಿಝ್ ಚೆಸ್ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್, ನ್ಯೂಯಾರ್ಕ್‌ನ ವಾಲ್ ಸ್ಟ್ರೀಟ್‌ನಲ್ಲಿ ನಡೆದ 2024ರ ವಿಶ್ವ ಬ್ಲಿಝ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಬುಧವಾರ ರಶ್ಯದ ಇಯಾನ್ ನೆಪೊಮ್ನಿಯಾಚ್ಚಿ ಜೊತೆಗೆ ಹಂಚಿಕೊಂಡಿದ್ದಾರೆ. ಪ್ರಶಸ್ತಿಯನ್ನು ಹಂಚಿಕೊಂಡ ಘಟನೆ ಚೆಸ್ ಇತಿಹಾಸದಲ್ಲಿ ಹಿಂದೆಂದೂ ನಡೆದಿಲ್ಲ.
ಫಲಿತಾಂಶವನ್ನು ನಿರ್ಧರಿಸುವ ಸಡನ್ ಡೆತ್‌ನಲ್ಲಿ ಉಭಯ ಆಟಗಾರರು ಬೆನ್ನು ಬೆನ್ನಿಗೆ ಮೂರು ಪಂದ್ಯಗಳನ್ನು ಡ್ರಾಗೊಳಿಸಿದ ಬಳಿಕ ಪ್ರಶಸ್ತಿಯನ್ನು ಇಬ್ಬರು ಆಟಗಾರರಲ್ಲಿ ಹಂಚುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
ಅದಕ್ಕೂ ಮೊದಲು, ಕಾರ್ಲ್‌ಸನ್ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಫೈನಲ್‌ಗೆ ಚಾಲನೆ ನೀಡಿದರು. ಬಳಿಕ ಗೆಲ್ಲಲು ಅವರಿಗೆ ಒಂದು ಡ್ರಾ ಸಾಕಾಗಿತ್ತು. ಆದರೆ ನೆಪೊಮ್ನಿಯಾಚ್ಚಿ ಅಮೋಘ ಪ್ರತಿಹೋರಾಟವನ್ನು ನೀಡಿದರು. ಅವರು ಎರಡು ಪಂದ್ಯಗಳನ್ನು ಗೆದ್ದರು. ಅಂತಿಮ ಸ್ಕೋರ್ 2.0-2.0ಯಲ್ಲಿ ಸಮಬಲವಾದಾಗ ಸಡನ್ ಡೆತ್ ಅನಿವಾರ್ಯವಾಯಿತು.
ಬಳಿಕ ನಡೆದ ಮೂರು ಸಡನ್ ಡೆತ್ ಪಂದ್ಯಗಳಲ್ಲಿ ಉಭಯ ಆಟಗಾರರು ಸಮಾನವಾಗಿ ಹೋರಾಡಿದರು. ಆಗ ಪ್ರಶಸ್ತಿಯನ್ನು ಹಂಚಿಕೊಳ್ಳುವ ಪ್ರಸ್ತಾವವನ್ನು ಕಾರ್ಲ್‌ಸನ್, ನೆಪೊಮ್ನಿಯಾಚ್ಚಿ ಮುಂದಿಟ್ಟರು. ಅದಕ್ಕೆ ಚೆಸ್‌ನ ಜಾಗತಿಕ ಆಡಳಿತ ಮಂಡಳಿ ಅಂತಿಮ ಮುದ್ರೆಯನ್ನು ಒತ್ತಿತು.
ಫೈನಲ್ ಪಂದ್ಯವು 2021ರ ಕ್ಲಾಸಿಕಲ್ ವಿಶ್ವ ಚಾಂಪಿಯನ್‌ಶಿಪ್ ಪಂದ್ಯದ ಪುನರಾವರ್ತನೆಯಾಗಿತ್ತು. ಆ ಫೈನಲ್‌ನಲ್ಲಿ ನೆಪೊಮ್ನಿಯಾಚ್ಚಿ ಅವರು ಕಾರ್ಲ್‌ಸನ್ ವಿರುದ್ಧ ಸೋಲನುಭವಿಸಿದ್ದರು.
ಇದರೊಂದಿಗೆ, ನಿರಂತರವಾಗಿ ದ್ವಿತೀಯ ಸ್ಥಾನಿಯಾಗುವ ನೆಪೊಮ್ನಿಯಾಚ್ಚಿ ಅವರ ಶಾಪವೂ ಕೊನೆಯಾಯಿತು. ಅವರು ಏಳು ಬಾರಿ ಫೈನಲ್‌ನಲ್ಲಿ ಎಡವಿದ್ದರು.
ಅವರು 2013, 2015 ಮತ್ತು 2021ರ ವಿಶ್ವ ರ್ಯಾಪಿಡ್ ಚಾಂಪಿಯನ್‌ಶಿಪ್‌ನಲ್ಲಿ, 2014ರ ವಿಶ್ವ ಬ್ಲಿಝ್ ಚಾಂಪಿಯನ್‌ಶಿಪ್‌ನಲ್ಲಿ, 2022ರ ವಿಶ್ವ ಫಿಶರ್ ರ್ಯಾಂಡಮ್ ಚಾಂಪಿಯನ್‌ಶಿಪ್‌ನಲ್ಲಿ ಹಾಗೂ 2021 ಮತ್ತು 2023ರ ಕ್ಲಾಸಿಕಲ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾರೆ.
ಇದು ಕಾರ್ಲ್‌ಸನ್‌ರ ಎಂಟನೇ ಬ್ಲಿಝ್ ಪ್ರಶಸ್ತಿಯಾಗಿದೆ.