ಸಿಡ್ನಿಯಲ್ಲಿ ಭಾರತ ಕ್ರಿಕೆಟ್ ತಂಡವು ಹಲವು ಬಾರಿ ವೀರೋಚಿತ ಪ್ರದರ್ಶನ ನೀಡಿದ್ದರೂ ದಕ್ಕಿದ್ದು ಒಂದೇ ಗೆಲುವು

Update: 2025-01-01 16:11 GMT

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ : ಮೆಲ್ಬರ್ನ್ ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ 184 ರನ್ ಅಂತರದಿಂದ ಆಘಾತಕಾರಿ ಸೋಲನುಭವಿಸಿರುವ ಭಾರತ ಕ್ರಿಕೆಟ್ ತಂಡವು ಐದು ಪಂದ್ಯಗಳ ಸರಣಿಯಲ್ಲಿ ಸದ್ಯ 1-2ರಿಂದ ಹಿನ್ನಡೆಯಲ್ಲಿದೆ. ರೋಹಿತ್ ಪಡೆ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಬೇಕಾದರೆ ಸಿಡ್ನಿಯಲ್ಲಿ ಆಸ್ಟ್ರೇಲಿಯವನ್ನು ಸೋಲಿಸಬೇಕಾಗಿದೆ.

ಜನವರಿ 3ರಿಂದ ಬ್ಲಾಕ್ಬಸ್ಟರ್ ಪಿಂಕ್ ಟೆಸ್ಟ್ ಪಂದ್ಯವು ಆರಂಭವಾಗಲಿದ್ದು, ಉಭಯ ತಂಡಗಳು ಅಂತಿಮ ಹೋರಾಟಕ್ಕೆ ಸಜ್ಜಾಗಿವೆ.

ಮೆಲ್ಬರ್ನ್ ಟೆಸ್ಟ್ನಲ್ಲಿ ಮುಗ್ಗರಿಸಿದ ನಂತರ ಟೀಮ್ ಇಂಡಿಯಾವು ಸರಣಿ ಸಮಬಲಗೊಳಿಸಿ ಟ್ರೋಫಿ ಉಳಿಸಿಕೊಳ್ಳಲು ಕೆಲವು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಸಿಡ್ನಿಯಲ್ಲಿ ಕಳಪೆ ದಾಖಲೆ ಹೊಂದಿರುವುದು ಭಾರತ ತಂಡದ ಮೇಲೆ ಒತ್ತಡ ಹೆಚ್ಚಿಸಿದೆ. 1947ರ ನಂತರ ಸಿಡ್ನಿಯಲ್ಲಿ ಭಾರತ ತಂಡವು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಜಯ ಸಾಧಿಸಿದೆ.

ಪ್ರತಿಷ್ಠಿತ ಸಿಡ್ನಿ ಕ್ರಿಕೆಟ್ ಮೈದಾನ(ಎಸ್ಸಿಜಿ)ಶ್ರೀಮಂತ ಇತಿಹಾಸ ಹೊಂದಿದೆ. ಆದರೆ ಈ ಮೈದಾನದಲ್ಲಿ ಭಾರತದ ಟೆಸ್ಟ್ ದಾಖಲೆ ಕಳಪೆಯಾಗಿದೆ. ಈ ಮೈದಾನದಲ್ಲಿ ಸವಾಲುಗಳನ್ನು ಎದುರಿಸುವ ಜೊತೆಗೆ ಕೇವಲ ಗೆಲುವನ್ನು ಪಡೆದಿದೆ.

ಭಾರತ ತಂಡವು ಎಸ್ಸಿಜಿಯಲ್ಲಿ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈ ಪೈಕಿ 1ರಲ್ಲಿ ಜಯ, 5ರಲ್ಲಿ ಸೋಲು ಹಾಗೂ 7 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ.

ಭಾರತವು ಸಿಡ್ನಿಯಲ್ಲಿ ತನ್ನ ಏಕೈಕ ಗೆಲುವನ್ನು 1978ರಲ್ಲಿ ಬಿಷನ್ ಸಿಂಗ್ ಬೇಡಿ ನಾಯಕತ್ವದಲ್ಲಿ ಪಡೆದಿತ್ತು. ಬಿ.ಚಂದ್ರಶೇಖರ್ ಸ್ಪಿನ್ ಮೋಡಿಯ ನೆರವಿನಿಂದ ಭಾರತ ತಂಡವು ಆಸ್ಟ್ರೇಲಿಯವನ್ನು 131 ರನ್ಗೆ ಆಲೌಟ್ ಮಾಡಿತ್ತು. ಇನಿಂಗ್ಸ್ ಅಂತರದ ಗೆಲುವು ದಾಖಲಿಸಿತ್ತು.

ಆದರೆ ಈ ಮೈದಾನದಲ್ಲಿ ನಡೆದ ಇತರ ಪಂದ್ಯಗಳಲ್ಲಿ ಮಿಶ್ರ ಫಲಿತಾಂಶ ಪಡೆದಿದ್ದು, ಆಸ್ಟ್ರೇಲಿಯ ತಂಡವು ಭಾರತದ ವಿರುದ್ಧ ಮೇಲುಗೈ ಸಾಧಿಸಿತ್ತು.

2004ರಲ್ಲಿ ಸಿಡ್ನಿಯಲ್ಲಿ ಭಾರತವು ಸ್ಮರಣೀಯ ಪ್ರದರ್ಶನ ನೀಡಿತ್ತು. ಆಗ ಸಚಿನ್ ತೆಂಡುಲ್ಕರ್ ಅವರು ಔಟಾಗದೆ 241 ರನ್ ಗಳಿಸಿದ್ದರು. ತೆಂಡುಲ್ಕರ್ ರ ದ್ವಿಶತಕದ ಸಹಾಯದಿಂದ ಭಾರತ ತಂಡವು 7 ವಿಕೆಟ್ಗಳ ನಷ್ಟಕ್ಕೆ 705 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತ್ತು. ಸಿಡ್ನಿ ಮೈದಾನದಲ್ಲಿ ತನ್ನ ಗರಿಷ್ಠ ಮೊತ್ತ ದಾಖಲಿಸಿತ್ತು. ಎಸ್ಸಿಜಿ ಇತಿಹಾಸದಲ್ಲಿ ಇದು ಈಗಲೂ ಒಂದು ಗರಿಷ್ಠ ಸ್ಕೋರ್ ಆಗಿ ಉಳಿದುಕೊಂಡಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಎಸ್ಸಿಜಿಯಲ್ಲಿ ಭಾರತ ತಂಡ ಗಮನಾರ್ಹ ಪ್ರದರ್ಶನ ನೀಡಿದೆ. 2015, 2019 ಹಾಗೂ 2021ರಲ್ಲಿ ಡ್ರಾ ಸಾಧಿಸಿರುವ ಭಾರತವು ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು.

ಭಾರತ ತಂಡವು 2020-21ರ ಬಾರ್ಡರ್-ಗವಾಸ್ಕರ್ ಟ್ರೋಫಿಯ ವೇಳೆ ಎಸ್ಸಿಜಿಯಲ್ಲಿ ಕೊನೆಯ ಬಾರಿ ಆಡಿತ್ತು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ಪಂದ್ಯವು ಅತ್ಯಂತ ರೋಚಕವಾಗಿ ಡ್ರಾನಲ್ಲಿ ಕೊನೆಗೊಂಡಿತ್ತು.

ಸರಣಿಯ 3ನೇ ಟೆಸ್ಟ್ ಪಂದ್ಯವು 2021ರ ಜ.7ರಿಂದ 11ರ ತನಕ ನಡೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ತಂಡವು ಸ್ಟೀವನ್ ಸ್ಮಿತ್(131 ರನ್)ಹಾಗೂ ಲ್ಯಾಬುಶೇನ್(91 ರನ್)ಮಹತ್ವದ ಬ್ಯಾಟಿಂಗ್ ನೆರವಿನಿಂದ 338 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ತಂಡವು ಶುಭಮನ್ ಗಿಲ್(50 ರನ್)ಹಾಗೂ ಚೇತೇಶ್ವರ ಪೂಜಾರ(50 ರನ್)ಅರ್ಧಶತಕದ ಕೊಡುಗೆಯ ನೆರವಿನಿಂದ 244 ರನ್ ಗಳಿಸಿದ್ದರೂ ಮೊದಲ ಇನಿಂಗ್ಸ್ನಲ್ಲಿ ಗಮನಾರ್ಹ ಮುನ್ನಡೆ ಬಿಟ್ಟುಕೊಟ್ಟಿತ್ತು.

ಆಸ್ಟ್ರೇಲಿಯ ತಂಡವು ತನ್ನ 2ನೇ ಇನಿಂಗ್ಸ್ ಅನ್ನು 6 ವಿಕೆಟ್ಗೆ 312 ರನ್ಗೆ ಡಿಕ್ಲೇರ್ ಮಾಡಿ ಭಾರತದ ಗೆಲುವಿಗೆ 407 ರನ್ ಕಠಿಣ ಗುರಿ ನೀಡಿತ್ತು. 5ನೇ ದಿನದಾಟದ ಆರಂಭದಲ್ಲಿ ಭಾರತ ತಂಡವು ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ವಿಕೆಟ್ಗಳನ್ನು ಕಳೆದುಕೊಂಡಿತು. ಆದರೆ ಮಧ್ಯಮ ಹಾಗೂ ಕೆಳ ಸರದಿಯ ಆಟಗಾರರು ಪ್ರತಿರೋಧ ಒಡ್ಡಿದ ಕಾರಣ ಪಂದ್ಯವು ರೋಚಕ ಘಟ್ಟ ತಲುಪಿತ್ತು.

ರಿಷಭ್ ಪಂತ್ 118 ಎಸೆತಗಳಲ್ಲಿ 97 ರನ್ ಗಳಿಸಿ ಪ್ರತಿ ಹೋರಾಟ ನೀಡಿದರೆ, ಹಿರಿಯ ಆಟಗಾರ ಚೇತೇಶ್ವರ ಪೂಜಾರ 77 ರನ್ ಗಳಿಸಿದ್ದರು. ಗಾಯಗೊಂಡಿದ್ದ ಹೊರತಾಗಿಯೂ ಹನುಮ ವಿಹಾರಿ(ಔಟಾಗದೆ 23,161 ಎಸೆತ) ಹಾಗೂ ಅಶ್ವಿನ್(ಔಟಾಗದೆ 39, 128 ಎಸೆತ) ಅವರು 42 ಓವರ್ ಬ್ಯಾಟಿಂಗ್ ಮಾಡಿ ಭಾರತ ಮರೆಯಲಾರದ ಡ್ರಾ ಸಾಧಿಸುವಲ್ಲಿ ನೆರವಾಗಿದ್ದರು. ಈ ಪಂದ್ಯವು ಭಾರತದ ಟೆಸ್ಟ್ ಇತಿಹಾಸದ ಸ್ಮರಣೀಯ ಮೈಲಿಗಲ್ಲಾಗಿದೆ.

ಈ ಫಲಿತಾಂಶವು ಬ್ರಿಸ್ಬೇನ್ನಲ್ಲಿ ದಾಖಲಾದ ಐತಿಹಾಸಿಕ ಸರಣಿ ಗೆಲುವಿಗೆ ವೇದಿಕೆಯಾಯಿತು.

2021ರ ಎಸ್ಸಿಜಿ ಟೆಸ್ಟ್ ಪಂದ್ಯವು ಭಾರತದ ಹೋರಾಟದ ಮನೋಭಾವ ಹಾಗೂ ವಿದೇಶಿ ನೆಲದಲ್ಲಿ ಎಲ್ಲ ಅಡೆತಡೆಗಳನ್ನು ಮೀರಿ ಸಂಕೇತವಾಗಿ ಉಳಿದುಕೊಂಡಿದೆ.

►ಎಸ್ಸಿಜಿಯಲ್ಲಿ ಭಾರತದ ಟೆಸ್ಟ್ ದಾಖಲೆ

ಆಡಿದ ಒಟ್ಟು ಪಂದ್ಯಗಳು: 13

ಗೆಲುವು: 1

ಸೋಲು: 5

ಡ್ರಾ: 7

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News