ಐಸಿಸಿ ಟೆಸ್ಟ್ ರ‍್ಯಾಂಕಿಂಗ್ | ಅಶ್ವಿನ್ ರ ಸಾರ್ವಕಾಲಿಕ ದಾಖಲೆ ಮುರಿದ ಜಸ್ಪ್ರಿತ್ ಬುಮ್ರಾ

Update: 2025-01-01 15:22 GMT

 ಅಶ್ವಿನ್ , ಜಸ್ಪ್ರಿತ್ ಬುಮ್ರಾ | PTI

ಹೊಸದಿಲ್ಲಿ: ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ವೈಯಕ್ತಿಕವಾಗಿ ಶ್ರೇಷ್ಠ ಪ್ರದರ್ಶನ ನೀಡಿದ್ದರೂ ತಂಡದ ಸೋಲಿನಿಂದ ಹತಾಶೆಯಲ್ಲಿರುವ ಭಾರತ ಕ್ರಿಕೆಟ್ ತಂಡದ ವೇಗದ ಜಸ್ಪ್ರಿತ್ ಬುಮ್ರಾ ಪಾಲಿಗೆ ಹೊಸ ವರ್ಷದ ಮೊದಲ ದಿನ ಸಿಹಿ ಸುದ್ದಿ ಯೊಂದು ಲಭಿಸಿದೆ.

ಮೆಲ್ಬರ್ನ್ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಗೊಂಚಲು ಪಡೆದು ಅಮೋಘ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಬಿಡುಗಡೆಯಾದ ಪುರುಷರ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್ ನಲ್ಲಿ ಗರಿಷ್ಠ ರೇಟಿಂಗ್ ಪಾಯಿಂಟ್ಸ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿರುವ ಬುಮ್ರಾ ಅವರು ತನ್ನ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

907 ರೇಟಿಂಗ್ ಪಾಯಿಂಟ್ಸ್ ಪಡೆದಿರುವ ಬುಮ್ರಾ ತನ್ನ ಹಿಂದಿನ ಸಾಧನೆಯನ್ನು ಉತ್ತಮಪಡಿಸಿಕೊಂಡರು. 904 ಪಾಯಿಂಟ್ಸ್ನೊಂದಿಗೆ ಬುಮ್ರಾ ಅವರು ಅಶ್ವಿನ್ರೊಂದಿಗೆ ಸಮಬಲ ಸಾಧಿಸಿದ್ದರು. ಇದೀಗ ಅಶ್ವಿನ್ ರ ಸಾರ್ವಕಾಲಿಕ ದಾಖಲೆಯನ್ನು ಬುಮ್ರಾ ಮುರಿದಿದ್ದಾರೆ. ಬುಮ್ರಾ ಇದೀಗ ಸಾರ್ವಕಾಲಿಕ ಶ್ರೇಷ್ಠರ ಪಟ್ಟಿಯಲ್ಲಿ ಇಂಗ್ಲೆಂಡ್ನ ಮಾಜಿ ಸ್ಪಿನ್ನರ್ ಡೆರೆಕ್ ಅಂಡರ್ವುಡ್ ಅವರೊಂದಿಗೆ 17ನೇ ಸ್ಥಾನ ಹಂಚಿಕೊಂಡಿದ್ದಾರೆ.

ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಟ್ರೋಫಿ ಹಾಗೂ ವರ್ಷದ ಟೆಸ್ಟ್ ಕ್ರಿಕೆಟ್ ಪ್ರಶಸ್ತಿಗೆ ಭಾರತದ ವೇಗಿ ಬುಮ್ರಾರನ್ನು ಐಸಿಸಿ ಕಿರುಪಟ್ಟಿಗೆ ಸೇರಿಸಿದೆ.

ಇಂಗ್ಲೆಂಡ್ ಬೌಲರ್ ಗಳಾದ ಸಿಡ್ನಿ ಬಾರ್ನೆಸ್(932) ಹಾಗೂ ಜಾರ್ಜ್ ಲೋಹ್ಮಾನ್(931)ಶತಮಾನದ ಹಿಂದೆ ಸಾರ್ವಕಾಲಿಕ ರ‍್ಯಾಂಕಿಂಗ್ ನಲ್ಲಿ ಮೊದಲೆರಡು ಸ್ಥಾನ ಪಡೆದಿದ್ದು, ಆ ನಂತರ ಇಮ್ರಾನ್ ಖಾನ್(922) ಹಾಗೂ ಮುತ್ತಯ್ಯ ಮುರಳೀಧರನ್(920)ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಅವರು ಗ್ಲೆನ್ ಮೆಕ್ಗ್ರಾತ್(914 ಪಾಯಿಂಟ್ಸ್)ಅವರೊಂದಿಗೆ 5ನೇ ಸ್ಥಾನ ಹಂಚಿಕೊಂಡಿದ್ದಾರೆ. ಎಂಸಿಜಿಯಲ್ಲಿ ಭಾರತ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿ ಆಸ್ಟ್ರೇಲಿಯ ಜಯ ಸಾಧಿಸಲು ಪ್ರಮುಖ ಪಾತ್ರವಹಿಸಿದ ನಂತರ ಕಮಿನ್ಸ್ ರ‍್ಯಾಂಕಿಂಗ್ ನಲ್ಲಿ ಪ್ರಗತಿ ಕಂಡಿದ್ದಾರೆ.

2025ರ ಮೊದಲ ರ‍್ಯಾಂಕಿಂಗ್ ನ ಆಲ್ರೌಂಡರ್ ಗಳ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿರುವ ಕಮಿನ್ಸ್ ತನ್ನ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ. 2019ರ ಆಗಸ್ಟ್ ನಲ್ಲಿ 5ನೇ ಸ್ಥಾನ ಪಡೆದಿದ್ದರು.

ಭಾರತ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ 49 ಹಾಗೂ 41 ರನ್ ಗಳಿಸಿದ್ದ ಕಮಿನ್ಸ್ ಅವರು ಬ್ಯಾಟರ್ ಗಳ ರ‍್ಯಾಂಕಿಂಗ್ ನಲ್ಲಿ 97ನೇ ಸ್ಥಾನ ತಲುಪಿದ್ದಾರೆ. ಬೌಲಿಂಗ್ ರ‍್ಯಾಂಕಿಂಗ್ ನಲ್ಲಿ 837 ರೇಟಿಂಗ್ ಪಾಯಿಂಟ್ಸ್ನೊಂದಿಗೆ 3ನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 52 ರನ್ ಗೆ 6 ವಿಕೆಟ್ಗಳನ್ನು ಕಬಳಿಸಿದ್ದ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಮಾರ್ಕೊ ಜಾನ್ಸನ್ 5ನೇ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನದ ವೇಗಿ ಮುಹಮ್ಮದ್ ಅಬ್ಬಾಸ್ 23ನೇ ಸ್ಥಾನ ಪಡೆದು ರ‍್ಯಾಂಕಿಂಗ್ ಪಟ್ಟಿಗೆ ಮರು ಪ್ರವೇಶಿಸಿದ್ದಾರೆ. ಬೌಲಿಂಗ್ ರ‍್ಯಾಂಕಿಂಗ್ ನಲ್ಲಿ ನಸೀಂ ಶಾ, ಪ್ಯಾಟರ್ಸನ್, ಸ್ಕಾಟ್ ಬೋಲ್ಯಾಂಡ್ ಹಾಗೂ ಬ್ರಿಯಾನ್ ಬೆನ್ನೆಟ್ ಏರಿಕೆ ಕಂಡಿದ್ದಾರೆ.

ದಕ್ಷಿಣ ಆಫ್ರಿಕಾದ ವಿರುದ್ಧ 84 ರನ್ ಗಳಿಸಿದ ಪಾಕಿಸ್ತಾನದ ಸೌದ್ ಶಕೀಲ್ ಬ್ಯಾಟಿಂಗ್ ರ‍್ಯಾಂಕಿಂಗ್ ನಲ್ಲಿ ಆರನೇ ಸ್ಥಾನ ತಲುಪಿದ್ದಾರೆ. 4ನೇ ಟೆಸ್ಟ್ ನಲ್ಲಿ 140 ರನ್ ಗಳಿಸಿದ್ದ ಆಸ್ಟ್ರೇಲಿಯದ ಸ್ಟೀವ್ ಸ್ಮಿತ್ 7ನೇ ಸ್ಥಾನಕ್ಕೇರಿದರು. ಭಾರತದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ 854 ರೇಟಿಂಗ್ ಪಾಯಿಂಟ್ಸ್ನೊಂದಿಗೆ 4ನೇ ಸ್ಥಾನ ಪಡೆದಿದ್ದಾರೆ.

ಪಾಕ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದ ದಕ್ಷಿಣ ಆಫ್ರಿಕಾದ ಮರ್ಕ್ರಮ್ 16ನೇ ಸ್ಥಾನಕ್ಕೇರಿದರೆ, ಭಾರತದ ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ 53ನೇ ಸ್ಥಾನಕ್ಕೇರಿದ್ದಾರೆ. ಝಿಂಬಾಬ್ವೆಯ ಸೀನ್ ವಿಲಿಯಮ್ಸ್ 653 ಅಂಕದೊಂದಿಗೆ 19ನೇ ಸ್ಥಾನಕ್ಕೇರಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News