ಆಸ್ಟ್ರೇಲಿಯ ವಿರುದ್ಧದ ಐದನೇ ಟೆಸ್ಟ್ | ಭಾರತ ತಂಡದ ಆಡುವ 11ರ ಬಳಗದಿಂದ ರೋಹಿತ್ ಶರ್ಮಾಗೆ ಕೊಕ್?

Update: 2025-01-02 11:42 GMT

ರೋಹಿತ್ ಶರ್ಮಾ (PTI)

ಸಿಡ್ನಿ: ಆಸ್ಟ್ರೇಲಿಯ ವಿರುದ್ಧ ಶುಕ್ರವಾರದಿಂದ ಆರಂಭವಾಗಲಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದ ಭಾರತ ಕ್ರಿಕೆಟ್ ತಂಡದ ಆಡುವ 11ರ ಬಳಗದಿಂದ ರೋಹಿತ್ ಶರ್ಮಾರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. 

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಕಳೆದ ಕೆಲವು ಟೆಸ್ಟ್ ಇನಿಂಗ್ಸ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರು.

ವೈಯಕ್ತಿಕ ಕಾರಣದಿಂದಾಗಿ ಮೊದಲ ಟೆಸ್ಟ್ ಪಂದ್ಯದಿಂದ ವಂಚಿತರಾಗಿದ್ದ ರೋಹಿತ್ ಅವರು ಅಡಿಲೇಡ್‌ನಲ್ಲಿ ನಡೆದಿದ್ದ 2ನೇ ಟೆಸ್ಟ್ ಪಂದ್ಯದ ವೇಳೆ ತಂಡಕ್ಕೆ ವಾಪಸಾಗಿದ್ದರು.

2ನೇ ಹಾಗೂ 3ನೇ ಟೆಸ್ಟ್ ಪಂದ್ಯದಲ್ಲಿ ಮಧ್ಯಮ ಸರದಿಯಲ್ಲಿ ಬ್ಯಾಟಿಂಗ್ ಮಾಡಿದ್ದ ರೋಹಿತ್ ಅವರು ಮೆಲ್ಬರ್ನ್ ಟೆಸ್ಟ್‌ನಲ್ಲಿ ಇನಿಂಗ್ಸ್ ಆರಂಭಿಸಲು ನಿರ್ಧರಿಸಿದ್ದರು. ಈ ಹೆಜ್ಜೆಯಿಂದಾಗಿ ಟೀಮ್ ಮ್ಯಾನೇಜ್‌ಮೆಂಟ್ ಶುಭಮನ್ ಗಿಲ್‌ರನ್ನು ಆಡುವ 11ರ ಬಳಗದಿಂದ ಹೊರಗಿಟ್ಟಿತು. ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರೂ ರೋಹಿತ್ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದರು.

37ರ ಹರೆಯದ ರೋಹಿತ್ ಅವರು ಸಿಡ್ನಿ ಪಂದ್ಯದ ನಂತರ ಟೆಸ್ಟ್ ಕ್ರಿಕೆಟಿಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ ಎಂದು ಕಳೆದ ವಾರ ʼಟೈಮ್ಸ್ ಆಫ್ ಇಂಡಿಯಾʼ ವರದಿ ಮಾಡಿತ್ತು. ಸದ್ಯ ಕಳಪೆ ಫಾರ್ಮ್‌ನಿಂದಾಗಿ ರೋಹಿತ್ ಅವರು ಹೊಸ ವರ್ಷದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಡುವ 11ರ ಬಳಗದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಚಿಂತಕರ ಚಾವಡಿಯು ಮುಂಬೈ ಬ್ಯಾಟರ್‌ನನ್ನು ಸರಣಿಯ ಕೊನೆಯ ಪಂದ್ಯದಿಂದ ಹೊರಗಿಡುವ ದಿಟ್ಟ ನಿರ್ಧಾರ ಕೈಗೊಂಡಿದೆ.

ರೋಹಿತ್ ಕಳೆದ ಕೆಲವು ಸಮಯದಿಂದ ಕಳಪೆ ಫಾರ್ಮ್‌ನಲ್ಲಿದ್ದು, ಈಗ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ರೋಹಿತ್ ಅವರು 5 ಇನಿಂಗ್ಸ್‌ಗಳಲ್ಲಿ 6.20ರ ಸರಾಸರಿಯಲ್ಲಿ ಕೇವಲ 31 ರನ್ ಗಳಿಸಿದ್ದರು.

2024ರ ಆರಂಭದಿಂದ ರೋಹಿತ್ 14 ಪಂದ್ಯಗಳಲ್ಲಿ ಆಡಿದ್ದು, 24.76ರ ಸರಾಸರಿಯಲ್ಲಿ ಎರಡು ಶತಕ ಹಾಗೂ ಎರಡು ಅರ್ಧಶತಕಗಳ ಸಹಿತ ಕೇವಲ 619 ರನ್ ಗಳಿಸಿದ್ದಾರೆ. 2024ರ ಮಾರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ 103 ರನ್ ಗಳಿಸಿದ ನಂತರ ರೋಹಿತ್ ಅವರು ರನ್‌ಗಾಗಿ ಪರದಾಟ ನಡೆಸುತ್ತಿದ್ದಾರೆ. ಧರ್ಮಶಾಲಾದಲ್ಲಿ ಶತಕ ಗಳಿಸಿದ ನಂತರ ರೋಹಿತ್ ಅವರು 15 ಇನಿಂಗ್ಸ್‌ಗಳಿಂದ 10.26ರ ಸರಾಸರಿಯಲ್ಲಿ ಕೇವಲ 154 ರನ್ ಗಳಿಸಿದ್ದು, ನ್ಯೂಝಿಲ್ಯಾಂಡ್ ವಿರುದ್ಧ ಬೆಂಗಳೂರಿನಲ್ಲಿ ಗರಿಷ್ಠ 52 ರನ್ ಗಳಿಸಿದ್ದರು.

ಗುರುವಾರ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಹಾಜರಾಗಿರಲಿಲ್ಲ. ಕೋಚ್ ಗೌತಮ್ ಗಂಭೀರ್ ಅವರು ಆಡುವ 11ರ ಬಳಗದ ಕುರಿತು ಪ್ರತಿಕ್ರಿಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News