ವಿಜಯ್ ಹಝಾರೆ ಟ್ರೋಫಿಯಲ್ಲಿ 5ನೇ ಜಂಟಿ ಗರಿಷ್ಠ ಸ್ಕೋರ್ ಗಳಿಸಿದ ಪಂಜಾಬ್
ಅಹ್ಮದಾಬಾದ್: ಸೌರಾಷ್ಟ್ರ ಕ್ರಿಕೆಟ್ ತಂಡದ ವಿರುದ್ದ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಇನಿಂಗ್ಸ್ವೊಂದರಲ್ಲಿ 400 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ 9ನೇ ತಂಡ ಎಂಬ ಕೀರ್ತಿಗೆ ಪಂಜಾಬ್ ತಂಡ ಪಾತ್ರವಾಗಿದೆ.
ಅಭಿಷೇಕ್ ಶರ್ಮಾ ನೇತೃತ್ವದ ಪಂಜಾಬ್ ತಂಡವು ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 424 ರನ್ ಗಳಿಸಿದೆ. ಭಾರತದ ಲಿಸ್ಟ್ ಎ ಕ್ರಿಕೆಟ್ ಪಂದ್ಯಾವಳಿಯಲ್ಲಿ ಐದನೇ ಜಂಟಿ ಗರಿಷ್ಠ ಮೊತ್ತ ದಾಖಲಿಸಿ ಮಧ್ಯಪ್ರದೇಶ ತಂಡದೊಂದಿಗೆ 5ನೇ ಸ್ಥಾನ ಹಂಚಿಕೊಂಡಿದ್ದಾರೆ. ಮಧ್ಯಪ್ರದೇಶ ತಂಡವು 2022ರಲ್ಲಿ ನಾಗಾಲ್ಯಾಂಡ್ ವಿರುದ್ಧ 424 ರನ್ ಗಳಿಸಿತ್ತು.
ಪಂಜಾಬ್ ಇನಿಂಗ್ಸ್ನಲ್ಲಿ ಅಭಿಷೇಕ್ ಹಾಗೂ ಪ್ರಭ್ಸಿಮ್ರಾನ್ ಸಿಂಗ್ ಶತಕಗಳನ್ನು ಗಳಿಸಿದ್ದು, ಮೊದಲ ವಿಕೆಟ್ಗೆ 298 ರನ್ ಸೇರಿಸಿದ್ದಾರೆ, ಇದು 2ನೇ ಜಂಟಿ ಗರಿಷ್ಠ ಜೊತೆಯಾಟವಾಗಿದೆ.
ವಿಜಯ್ ಹಝಾರೆ ಟ್ರೋಫಿಯಲ್ಲಿ ತಮಿಳುನಾಡು ತಂಡವು ಗರಿಷ್ಠ ಮೊತ್ತ ದಾಖಲಿಸಿದೆ. ತಮಿಳುನಾಡು 2022ರಲ್ಲಿ ಅರುಣಾಚಲಪ್ರದೇಶ ವಿರುದ್ಧ 2 ವಿಕೆಟ್ ನಷ್ಟಕ್ಕೆ 506 ರನ್ ಗಳಿಸಿತ್ತು. ಇನಿಂಗ್ಸ್ವೊಂದರಲ್ಲಿ 500 ರನ್ ಗಳಿಸಿದ ಏಕೈಕ ತಂಡ ಎನಿಸಿಕೊಂಡಿದೆ.
ವಿಜಯ್ ಹಝಾರೆ ಟ್ರೋಫಿಯಲ್ಲಿ ಗರಿಷ್ಠ ಸ್ಕೋರ್ ಗಳು
2022ರಲ್ಲಿ ಅರುಣಾಚಲಪ್ರದೇಶ ವಿರುದ್ಧ ತಮಿಳುನಾಡು 506/2
2021ರಲ್ಲಿ ಪಾಂಡಿಚೇರಿ ವಿರುದ್ಧ ಮುಂಬೈ 457/4
2023ರಲ್ಲಿ ಮಣಿಪುರದ ವಿರುದ್ಧ ಮಹಾರಾಷ್ಟ್ರ 427/6
2022ರಲ್ಲಿ ಸರ್ವಿಸಸ್ ವಿರುದ್ಧ ಬಂಗಾಳ 426/4
2022ರಲ್ಲಿ ನಾಗಾಲ್ಯಾಂಡ್ ವಿರುದ್ಧ ಮಧ್ಯಪ್ರದೇಶ 424/3
2024ರಲ್ಲಿ ಸೌರಾಷ್ಟ್ರದ ವಿರುದ್ಧ ಪಂಜಾಬ್ 424/5