ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್| ಕೊನೆಯ ಟೆಸ್ಟ್‌ಕ್ಕೆ ಸಿಡ್ನಿ ಪಿಚ್‌ನ ಭರದ ಸಿದ್ಧತೆ

Update: 2025-01-01 16:24 GMT

ಸಾಂದರ್ಭಿಕ ಚಿತ್ರ | PC : PTI

ಸಿಡ್ನಿ : ಪ್ರವಾಸಿ ಭಾರತ ಹಾಗೂ ಆಸ್ಟ್ರೇಲಿಯ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯವು ಶುಕ್ರವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಪಂದ್ಯದ ಪಿಚ್ ಬಗ್ಗೆ ಕ್ಯುರೇಟರ್ ಮಾಹಿತಿ ನೀಡಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದ ಅಧಿಕೃತ ಎಕ್ಸ್ ಖಾತೆಯಲ್ಲಿ ಬುಧವಾರ ವೀಡಿಯೊವೊಂದನ್ನು ಹಾಕಲಾಗಿದೆ. ‘‘ಅಂತಿಮ ಹಂತದ ಸಿದ್ಧತೆಗೆ ಇನ್ನು ಎರಡು ದಿನಗಳು ಬಾಕಿ ಇವೆ. ಇಂದು ಬೆಳಗ್ಗೆ ನಾವು ಪಿಚ್‌ನ ಹೊದಿಕೆಯನ್ನು ತೆಗೆದಿದ್ದೇವೆ. ಸುಮಾರು 7 ಮಿಲಿಮೀಟರ್‌ನಷ್ಟು ಕಡಿತ ಮಾಡಿದ್ದೇವೆ. ಅದರ ಮೇಲೆ ರೋಲ್ ಹಾಯಿಸಲಾಗಿದೆ. ಪಿಚ್‌ನ ಈ ಹಂತದವರೆಗೆ ತೃಪ್ತಿಯಿದೆ’’ ಎಂದು ವೀಡಿಯೊದಲ್ಲಿ ಕ್ಯುರೇಟರ್ ಆ್ಯಡಮ್ ಲೂಯಿಸ್ ಹೇಳಿದ್ದಾರೆ.

‘‘ಪಿಚ್ ಮೇಲೆ ಸ್ವಲ್ಪ ನೀರು ಹಾಯಿಸಲಾಗಿದೆ. ಸಿಡ್ನಿಯಲ್ಲಿ ಇಂದು ಬಿಸಿ ವಾತಾವರಣ ಇದೆ. ಹಾಗಾಗಿ, ಪಿಚ್‌ನ ಮೇಲ್ಭಾಗದಲ್ಲಿ ಸ್ವಲ್ಪ ತೇವಾಂಶವನ್ನು ಬಿಡುತ್ತೇವೆ. ನಾಳೆ ಸ್ವಲ್ಪ ಹೆಚ್ಚು ಭಾರದ ರೋಲ್ ಹಾಯಿಸುತ್ತೇವೆ. ಸ್ವಲ್ಪ ಬಣ್ಣವನ್ನು ತೆಗೆಯಲಾಗುವುದು’’ ಎಂದು ಅವರು ತಿಳಿಸಿದ್ದಾರೆ.

ಐದು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯ 2-1 ಅಂತರದಿಂದ ಮುಂದಿದೆ. ಸರಣಿಯನ್ನು ಸಮಬಲಗೊಳಿಸಲು ಭಾರತವು ಸಿಡ್ನಿ ಟೆಸ್ಟನ್ನು ಗೆಲ್ಲಬೇಕಾಗಿದೆ. ಸರಣಿಯು ಸಮಬಲಗೊಂಡರೆ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಭಾರತ ಉಳಿಸಿಕೊಳ್ಳಲಿದೆ.

1947ರಿಂದ 2021ರವರೆಗೆ ಭಾರತವು ಸಿಡ್ನಿಯಲ್ಲಿ 13 ಟೆಸ್ಟ್‌ಗಳನ್ನು ಆಡಿದೆ. ಆದರೆ, ಒಂದರಲ್ಲಿ ಮಾತ್ರ ಗೆದ್ದಿದೆ. ಅದು ಐದು ಪಂದ್ಯಗಳಲ್ಲಿ ಸೋಲನುಭವಿಸಿದ್ದು, ಉಳಿದ 7 ಪಂದ್ಯಗಳನ್ನು ಡ್ರಾಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News