ನೊಂದವರ ಶಕ್ತಿ ಗೀತೆ ಹಾರ್ಪರ್
ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಎಲ್‌ಎಲ್‌ಬಿ ಪದವಿ ಪಡೆದಿರುವ ಎಂ. ಆರ್. ಕಮಲಾ ಕನ್ನಡದ ಮುಖ್ಯ ಕವಯಿತ್ರಿಗಳಲ್ಲಿ ಒಬ್ಬರು. ಶಕುಂತಳೋಪಖ್ಯಾನದ ಮೂಲಕ ಕಾವ್ಯಲೋಕದಲ್ಲಿ ಸುದ್ದಿ ಮಾಡಿದ ಇವರು, ಆಫ್ರಿಕನ್ ಮಹಿಳೆಯರ ಕವನಗಳನ್ನು ಕನ್ನಡಕ್ಕೆ ಪರಿಚಯಿಸಿದವರು. ಕತ್ತಲ ಹೂವಿನ ಹಾಡು ಕವನಗಳ ಸಂಪಾದನೆ ಕನ್ನಡ ಕಾವ್ಯ ಲೋಕಕ್ಕೆ ಮಹತ್ವದ ಕೊಡುಗೆಯಾಗಿದೆ. ಆಫ್ರಿಕನ್ ಮಹಿಳೆಯ ನೋವಿನ ಹಾಡುಗಳ ಕನ್ನಡಿಯಲ್ಲಿ ಕನ್ನಡದ ಕವಯಿತ್ರಿಯರು ತಮ್ಮ ಮುಖ ನೋಡಿಕೊಂಡರು. ಇವರ ಕಪ್ಪು ಹಕ್ಕಿಯ ಬೆಳಕಿನ ಹಾಡು, ಉತ್ತರ ನಕ್ಷತ್ರ, ರೋಸಾ ಪಾರ್ಕ್ಸ್ ಆತ್ಮಕತೆ, ಮಾಯಾ ಏಂಜೆಲೋ ಆತ್ಮಕತೆಗಳ ಅನುವಾದ ಜಾಗತಿಕ ದಮನಿತ ಸಮುದಾಯದ ಧ್ವನಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದೆ.
ಎಂ.ಆರ್. ಕಮಲಾ
ಹಾರ್ಪರ್ ಹಾಡುಕಟ್ಟಿದ್ದು ತನ್ನ ಜನರಿಗಾಗಿ. ಕತ್ತಿ, ಕುಡುಗೋಲುಗಳ ಕಾಳಗಕ್ಕೆ, ಕದನಕ್ಕಲ್ಲ. ಕಚ್ಚಾಟ, ಕೊಲೆಗಾಗಿ ಮೊದಲೇ ಅಲ್ಲ. ಅರೆಗಳಿಗೆಯಾದರು ತನ್ನವರಿಗೆ ಚಿಂತೆ ಇರದಂತೆ, ಹಳೆಯದೆಲ್ಲವನ್ನು ಮರೆತುಹೋಗುವಂತೆ, ಜೀವ ಸಮೃದ್ಧ ಭಾವ ಎದೆಯಲ್ಲಿ ಮೂಡುವಂತೆ ಹಾಡುಗಳನ್ನು ಬರೆಯುತ್ತ ಹೋದಳು. ಬಡವರಿಗೆ, ಕಣ್ಣು ಮಸುಕಾದವರಿಗೆ, ಅಸಹಾಯಕರಿಗೆ ಕವಿತೆ ಬರೆದಳು. ಸೋತು ಸೊರಗಿದ ಈ ಧರೆಗೆ ಒಂದು ಶುದ್ಧ, ಶಕ್ತಿ ಗೀತೆ ಬೇಕೆಂದು ಬಯಸಿದಳು. ಮತ್ತೆಂದೂ ವೇದನೆಯ ಅಪಸ್ವರ ಮೂಡದಂತೆ, ಯುದ್ಧ ಕೊಲೆಗಳು ನಿಲ್ಲುವಂತೆ, ಆದ ಗಾಯಗಳು ಮಾಯುವಂತೆ, ಮನುಜರ ಹೃದಯ ಮೆದುವಾಗಿ ಶಾಂತಿ ಮಂತ್ರವನ್ನು ಇಡೀ ವಿಶ್ವ ಪಠಿಸುವಂತೆ ಹಾಡು ಕಟ್ಟುತ್ತಲೇ ಹೋದಳು.
ಗುಲಾಮರ ಹರಾಜು ಆರಂಭವಾಗಿದೆ. ಹದಿ ಹರೆಯದ ಹುಡುಗಿಯರು ಬಿಕ್ಕಿ ಬಿಕ್ಕಿ ಅಳುತ್ತ ಹತಾಶೆ, ನಿರಾಶೆ, ಎದೆಯ ನೋವನ್ನೆಲ್ಲ ಕಕ್ಕುತ್ತಿದ್ದಾರೆ. ತಾಯಂದಿರ ಕಣ್ಣಲ್ಲಿ ಕಂಬನಿಯ ಧಾರೆ ಹರಿಯುತ್ತಿದೆ. ತಮ್ಮ ಕಂದಮ್ಮಗಳನ್ನು ಕಣ್ಣೆದುರಿಗೆ ಬಿಳಿಯರು ಕಿತ್ತೊಯ್ಯುತ್ತಿದ್ದಾರೆ. ಚಿನ್ನದ ನಾಣ್ಯವನ್ನು ಎಣಿಸುವ ಮಾರಾಟಗಾರರಿಗೆ ಇವರ ಕರುಳಿನ ಕೂಗು ಕೇಳುತ್ತಿಲ್ಲ. ಗಂಡನ ಬಗ್ಗೆ ಅಪಾರ ಪ್ರೀತಿಯಿರುವ ಹೆಣ್ಣೊಬ್ಬಳು ಅವನತ್ತಲೇ ನೋಡುತ್ತಿದ್ದಾಳೆ. ಆದರೆ ಅವನು ಅಸಹಾಯಕ. ಬಹುಶಃ ಈ ಕರಿಯ ಹೆಣ್ಣಿನ ಸಂಕಟವನ್ನು ಚಿತ್ರಿಸುವುದು ಯಾರಿಂದಲೂ ಸಾಧ್ಯವಿಲ್ಲ. ದೇವರು ಈ ಕರಿಯ ಬಣ್ಣ ಕೊಟ್ಟಿದ್ದೇ, ಹುಟ್ಟಿದ್ದೇ ತಪ್ಪು ಎಂಬ ಭಾವ ಅಲ್ಲಿದ್ದ ಗಂಡಸರನ್ನು ಆವರಿಸಿದೆ. ಈ ಶೋಕಾಚರಣೆಯ ಹಿಂಡಿನಲ್ಲಿ ಮಕ್ಕಳು ಕುಸಿದು ಹೋಗುತ್ತಿವೆ. ಪ್ರೀತಿಪಾತ್ರರನ್ನು ಎಳೆದೊಯ್ಯುತ್ತಿದ್ದಾರೆ. ಆ ನೋವು ಉಳಿದವರಿಗೆ ಅರ್ಥವಾಗುತ್ತಿಲ್ಲ. ಅವರೆಲ್ಲ ತಮ್ಮ ಎದೆಯ ಮೇಲೊಂದು ಹೊರೆಯ ಹೊತ್ತು ನಡೆಯುತ್ತಾರೆ. ಆ ಸಂಕಟ ತಿಳಿಯುವುದೇ ಇಲ್ಲ.
ಫ್ರಾನ್ಸಿಸ್ ಎಲೆನ್ ವ್ಯಾಟ್ ಕಿನ್ಸ್ ಹಾರ್ಪರ್ ಎಂಬ ಆಫ್ರಿಕನ್ ಅಮೆರಿಕನ್ ಕವಯಿತ್ರಿ ಗುಲಾಮರ ನೋವನ್ನು ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ಮುಟ್ಟುವಂತೆ ‘ಗುಲಾಮರ ಹರಾಜು’ ಎಂಬ ಕವನದಲ್ಲಿ ವಿವರಿಸಿದ್ದು ಹೀಗೆ. ಈಕೆ ಹುಟ್ಟಿದ್ದು ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿ. ಆಕೆಯ ತಂದೆ-ತಾಯಿಗಳೇನು ಗುಲಾಮರಾಗಿರಲಿಲ್ಲ. ಆದರೆ ಸ್ವತಂತ್ರರೂ ಕೂಡ ಆ ರಾಜ್ಯದಲ್ಲಿದ್ದ ಗುಲಾಮ ಕಾನೂನಿನಡಿ ತತ್ತರಿಸಿಹೋಗಿದ್ದರು. ಎಲೆನ್‌ಳ ಬಾಲ್ಯವೇನು ಹಿತಕರವಾಗಿರಲಿಲ್ಲ. ಮೂರು ವರ್ಷದ ಪುಟ್ಟ ಹುಡುಗಿಯಾಗಿದ್ದಾಗಲೇ ತನ್ನ ತಾಯಿಯನ್ನು ಕಳೆದುಕೊಂಡಳು. ಅವಳನ್ನು ಸಂತೈಸುವುದಕ್ಕೆ ಒಬ್ಬ ಸೋದರನೂ ಇರಲಿಲ್ಲ. ಕೊನೆಗೆ ಹಾರ್ಪರ್ ಚಿಕ್ಕಮ್ಮನ ಆಶ್ರಯ ಪಡೆದಳು. ಅವಳ ಚಿಕ್ಕಪ್ಪ ರೆವೆರೆಂಡ್ ವಿಲಿಯಮ್ ವ್ಯಾಟ್ ಕಿನ್ಸ್ ಹಾರ್ಪರ್ ಬಾಲ್ಟಿಮೋರ್‌ನ ಶಾಲೆಯೊಂದರಲ್ಲಿ ಸ್ವತಂತ್ರ ಕರಿಯರಿಗೆ ಪಾಠ ಹೇಳುತ್ತಿದ್ದರು. ಅಲ್ಲಿ ಎಲೆನ್ ಹದಿಮೂರು ವರ್ಷದವರೆಗೆ ವಿದ್ಯಾಭ್ಯಾಸ ಮಾಡಿದಳು. ಅಲ್ಲಿಂದ ಮುಂದೆ ಆಕೆ ಸ್ವಂತ ದುಡಿಮೆಯಲ್ಲಿ ತೊಡಗಬೇಕಾಯಿತು. ಬದುಕಿನ ಈ ಘಟ್ಟದಲ್ಲಿ ಹಲವಾರು ಬಾರಿ ಅಗ್ನಿಪರೀಕ್ಷೆಗೆ ಒಳಗಾದಳು. ಆದರೆ ದಯಾಳು ಒಡತಿಯ ಔದಾರ್ಯದಿಂದಾಗಿ ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವ ಅವಕಾಶ ದೊರೆತಿತ್ತು. ಪರಿಶ್ರಮ ಮತ್ತು ಪ್ರತಿಭೆಗಳ ಸಂಗಮದಂತಿದ್ದ ಅವಳ ಗದ್ಯ ಪದ್ಯಗಳ ಪುಟ್ಟ ಸಂಕಲನ ‘ಆಟಂ ಲೀವ್ಸ್’ ಎಂಬ ಹೆಸರಿನಲ್ಲಿ ಪ್ರಕಟಗೊಂಡಿತು.
ಆಕೆಯ ಅನೇಕ ಲೇಖನಗಳು ಸುದ್ದಿಪತ್ರಿಕೆಗಳಲ್ಲಿ ಪ್ರಕಟಗೊಂಡು ಚರ್ಚೆಗೆ ಒಳಗಾದವು. ಅವಳ ಅಗಾಧ ಪ್ರತಿಭೆಗೆ ಬೆರಗಾದವರು ಈ ಕೃತಿಗಳು ಅವಳದ್ದೇ ಅಲ್ಲವೇ ಎಂಬ ಸಂದೇಹವನ್ನೂ ವ್ಯಕ್ತಪಡಿಸಿದ್ದರು. ಮೂಲತಃ ಧಾರ್ಮಿಕ ಮನಸ್ಸಿನವಳಾಗಿದ್ದ ಹಾರ್ಪರ್ ಬರೆದ ಲೇಖನಗಳಲ್ಲಿ ನೈತಿಕತೆಗೆ ಒತ್ತು ಹೆಚ್ಚಾಗಿರುತ್ತಿತ್ತು. ‘ಬಾಲ್ಟಿಮೋರ್’ನ ಉಳಿದ ಜನರಂತೆ ನಾವೂ ಸಹಜ ಉಸಿರಾಡುತ್ತಿದ್ದೇವೆ ನಿಜ. ಆದರೆ ಯಾರ ಭಾಷೆಯನ್ನು ನಮ್ಮದೆಂದು ಮಾತನಾಡುತ್ತಿದ್ದೆವೋ, ಯಾರ ಧರ್ಮವನ್ನು ನಮ್ಮದೆಂದು ಭಾವಿಸಿ ಬದುಕುತ್ತಿದ್ದೆವೋ, ಯಾರ ರಕ್ತ ನಮ್ಮೆಂದಿಗೆ ಬೆರೆತುಹೋಗಿದೆಯೋ ಅವರೇ ನಮ್ಮೆಂದಿಗೆ ಅಪರಿಚಿತರಂತೆ ನಡೆದುಕೊಳ್ಳುತ್ತಿದ್ದಾರೆ. ನಾವು ಹುಟ್ಟಿದ ನೆಲದಲ್ಲಿ ಮನೆಯಿಲ್ಲದ ಅನಾಥರು. ನಮ್ಮ ಜನಾಂಗ ಹುಟ್ಟಿದ ದೇಶದಲ್ಲಿ ಅಪರಿಚಿತರು ಎಂದು ಮೇರಿಲ್ಯಾಂಡ್‌ನ ತನ್ನ ಜನರ ಸ್ಥಿತಿಗತಿಯ ಬಗ್ಗೆ ಅಪಾರ ನೋವನ್ನು ವ್ಯಕ್ತಪಡಿಸಿದ್ದಳು. ಆಕೆ ಗುಲಾಮ ತಾಯಿಯ ಚೀತ್ಕಾರವನ್ನು ಕಣ್ಣಾರೆ ಕಂಡಿದ್ದಳು. ಮಗುವನ್ನು ತಬ್ಬಿಕೊಂಡು ನಡುಗುತ್ತ ನಿಂತಿರುತ್ತಿದ್ದ ನರಪೇತಲಿಯ ಕಣ್ಣುಗಳಲ್ಲಿನ ದುಃಖ, ಭಯ ಅವಳನ್ನು ಕಂಗೆಡಿಸಿತ್ತು. ಒಂಬತ್ತು ತಿಂಗಳು ಹೊತ್ತು, ಹೆತ್ತು ಸಲಹಿದರೂ ಆ ಮಗು ಅವಳ ಪಾಲಿಗೆ ಇರಲಿಲ್ಲ, ಅವಳದ್ದೇ ರಕ್ತ ನರನಾಡಿಯಲ್ಲಿ ಹರಿದರೂ ಆ ಮಗು ಇನ್ನು ಮುಂದೆ ಅವಳದ್ದಲ್ಲ. ಯಾವುದೋ ಕ್ರೂರ ಕೈ ಕಸಿದುಕೊಂಡು ಹೋಗುತ್ತದೆ ಎಂಬ ಕಟು ವಾಸ್ತವವನ್ನು ಜೀರ್ಣಿಸಿಕೊಳ್ಳುವುದು ತಾಯಿಯಷ್ಟೇ ಹಾರ್ಪರ್‌ಳಿಗೂ ಕಷ್ಟವಾಗಿತ್ತು. ಎಳೆದೊಯ್ದವನನ್ನು ಮತ್ತೆಂದೂ ನೋಡದಂತೆ ಬದುಕಬೇಕಾದ ಆ ಹೆಣ್ಣುಮಗಳಿಗೆ ಇನ್ನು ಬೆಳಗಿಲ್ಲ ಎನ್ನುವುದನ್ನು ಅವಳು ಅರಿತಿದ್ದಳು.
1850ರಲ್ಲಿ ಬಾಲ್ಟಿಮೋರ್‌ನಿಂದ ಸ್ವತಂತ್ರ ರಾಜ್ಯವನ್ನು ಅರಸಿ ಹೋದವಳು ಒಹಾಯೋದಲ್ಲಿ ನೆಲೆಸಿದಳು. ಕೊಲಂಬಸ್‌ನ ‘ಯೂನಿಯನ್ ವಿಶ್ವವಿದ್ಯಾನಿಲಯ’ದಲ್ಲಿ ಗೃಹವಿಜ್ಞಾನವನ್ನು ಬೋಧಿಸಲು ಅವಳನ್ನು ಕರೆಸಿಕೊಳ್ಳಲಾಯಿತು. ವೃತ್ತಿಶಿಕ್ಷಣ ವಿಭಾಗದಲ್ಲಿ ಕೆಲಸ ಮಾಡಿದ ಮೊತ್ತಮೊದಲ ಕಪ್ಪು ಮಹಿಳೆ ಹಾರ್ಪರ್. ನಂತರ ಆಕೆ ಲಿಟ್ಲ್ ಯಾರ್ಕ್‌ನಲ್ಲಿ ಬೋಧಕಿಯಾದಳು. ಆಕೆ ಲಿಟ್ಲ್ ಯಾರ್ಕ್‌ನಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ ಅಂಡರ್ ಗ್ರೌಂಡ್ ರೈಲ್ ರೋಡ್ (ಭೂಗತ ರೈಲು ರಸ್ತೆ) ಮೂಲಕ ತಪ್ಪಿಸಿಕೊಂಡು ಹೋಗುತ್ತಿದ್ದ ಗುಲಾಮರ ಪಾಡನ್ನು ನೋಡಿದ್ದಳು. ಗುಲಾಮರ ಮೇಲಿನ ಭಯಾನಕ ಕಾನೂನುಗಳ ಅರಿವಿದ್ದೂ ಅವರು ಧೃತಿಗೆಟ್ಟಿರಲಿಲ್ಲ. ಈ ಗುಲಾಮರು ನಡೆದಾಡುವ ಆಸ್ತಿಗಳು, ಕಾಮನ ಬಿಲ್ಲಿನ ಕಿರೀಟ ಧರಿಸಿರುವ ನಯಾಗಾರದಿಂದ ಹಿಡಿದು ಚಿಮ್ಮುವ ಮೆಕ್ಸಿಕನ್ ಕೊಲ್ಲಿಯವರೆಗೆ, ಮರ್ಮರಿಸುವ ಅಟ್ಲಾಂಟಿಕ್ ಸಾಗರದಿಂದ ತಡೆಯಿಲ್ಲದೆ ಬೋರ್ಗರೆವ ಪೆಸಿಫಿಕ್ ಸಾಗರದವರೆಗೆ ಪಲಾಯನ ಮಾಡುವ, ಬಡ, ಹಸಿವಿನಿಂದ ಕಂಗೆಟ್ಟ ಗುಲಾಮರಿಗೆ ಅರೆಕ್ಷಣ ನಿಂತು ವಿಶ್ರಮಿಸುವಷ್ಟು ಸ್ಥಳವಿಲ್ಲ ಎಂದು ನೊಂದುಕೊಂಡಿದ್ದಳು.
ಲಿಟ್ಲ್ ಯಾರ್ಕ್‌ನ ವೃತ್ತಿ ಶಿಕ್ಷಣ ವಿಭಾಗದಲ್ಲಿ ಬೋಧಿಸುತ್ತಿದ್ದಾಗಲೂ ತನ್ನ ಜನಾಂಗದ ಕಲ್ಯಾಣದ ಬಗ್ಗೆಯೇ ಚಿಂತಿಸುತ್ತಿದ್ದಳು. ಆ ಸಮಯದಲ್ಲಿ ದಾಸ್ಯ ವಿರೋಧಿ ಗುಂಪಿಗೆ ಸೇರುವುದರ ಜೊತೆಗೆ ಉಪನ್ಯಾಸಕಿ ಯಾಗಿ ಕೆಲಸ ನಿರ್ವಹಿಸುವ ಅವಕಾಶವೂ ಅವಳಿಗೆ ದೊರೆಯಿತು. ಅವಳ ಹುಟ್ಟು ನೆಲವಾದ ಮೇರಿ ಲ್ಯಾಂಡ್, ಉತ್ತರದಿಂದ ಸ್ವತಂತ್ರ ಕಪ್ಪು ಜನರು ರಾಜ್ಯವನ್ನು ಪ್ರವೇಶಿಸದಂತೆ ಕಾನೂನು ಮಾಡಿತು. ಹಾಗೆ ಪ್ರವೇಶಿಸಿದವರನ್ನು ಸೆರೆಮನೆಗೆ ತಳ್ಳಿ ಗುಲಾಮರಂತೆ ಮಾರಾಟ ಮಾಡಲಾಗುತ್ತಿತ್ತು. ಈ ಕಾನೂನನ್ನು ಉಲ್ಲಂಘಿಸಿ ಹೋದ ಸ್ವತಂತ್ರ ಕರಿಯನೊಬ್ಬ ಸೆರೆಮನೆ ಸೇರಿ ಗುಲಾಮರಂತೆ ಮಾರಾಟವಾಗಿದ್ದ. ಆತ ತಪ್ಪಿಸಿಕೊಳ್ಳಲು ನಡೆಸಿದ ಯತ್ನ ವಿಫಲವಾಗಿತ್ತು. ಕೊನೆಗವನು ಗುಲಾಮಗಿರಿಯ ಬದುಕಿಗೆ ಒಗ್ಗಿಕೊಳ್ಳಲಾಗದೆ ಸತ್ತೇ ಹೋದನೆಂಬ ವರದಿ ಬಂದಿತ್ತು. ಈ ಬಗ್ಗೆ ಹಾರ್ಪರ್ ಹೀಗೆ ಪ್ರತಿಕ್ರಿಯಿಸಿದ್ದಳು. ‘ಅವನ ಗೋರಿಯ ಮೇಲೆ ಆಣೆಯಿಟ್ಟು ಹೇಳುತ್ತೇನೆ. ನಾನಿನ್ನು ನನ್ನ ಜೀವನವನ್ನು ದಾಸ್ಯ ವಿರೋಧಿ ಕಾರ್ಯಕ್ಕೆ ಸಮರ್ಪಿಸಿಕೊಂಡಿದ್ದೇನೆ. ನನ್ನ ಬುದ್ಧಿ-ಭಾವ, ಚೈತನ್ಯ ಮತ್ತು ಪ್ರತಿಭೆಗಳೆಲ್ಲವನ್ನು ಜನಾಂಗದ ವಿಮುಕ್ತಿಗಾಗಿಯೇ ಬಳಸಬೇಕೆಂದು ದೇವರು ಬಹುಶಃ ನನ್ನ ಹಣೆಯಲ್ಲಿ ಬರೆದಿದ್ದಾನೆ.’ ಆಕೆ ಫಿಲಿಡೆಲ್ಫಿಯ, ನ್ಯೂ ಬೆಡ್ ಪ್ರೋರ್ಡ್, ಬಾಸ್ಟನ್‌ಗೆ ಭೇಟಿ ನೀಡಿದಳು. ಮೈನ್‌ನ ದಾಸ್ಯ ವಿರೋಧಿ ಸಮಾಜ ಆಕೆಯನ್ನು ಖಾಯಂ ಉಪನ್ಯಾಸಕಿಯಾಗಿ ನೇಮಿಸಿಕೊಂಡಿತು. ದಾಸ್ಯ ವಿಮುಕ್ತಿಯ ಹೋರಾಟಕ್ಕೆ ಆಕೆ ಅನಿವಾರ್ಯವೆನ್ನುವಂತೆ ಎಲ್ಲ ಬಾಗಿಲುಗಳು ತೆರೆದುಕೊಂಡವು. ಎರಡು ವರ್ಷಗಳ ಕಾಲ ಸತತವಾಗಿ ಪೂರ್ವ ರಾಜ್ಯಗಳನ್ನು ಸುತ್ತಿ ತನ್ನ ಕಾರ್ಯದಲ್ಲಿ ಯಶಸ್ಸನ್ನು ಕಂಡಳು. ಒಹಾಯೋದ ರಕ್ತಸಿಕ್ತ ದುರಂತವಾದ ಮಾರ್ಗರೇಟ್ ಗಾರ್ನರ್‌ರ ಸೆರೆ ಮತ್ತು ಹತ್ಯೆ ಹಾರ್ಪರ್‌ಳ ಮನಸ್ಸನ್ನು ತುಂಬಾ ನೋಯಿಸಿ, ‘ಅಪರಾಧಿಯನ್ನು, ನಡುಗುವ ಗುಲಾಮನನ್ನು ತನ್ನೊಳಗೆ ಅವಿತಿರಿಸಿಕೊಳ್ಳಲು ಪವಿತ್ರ ಆಶ್ರಯದಾಣಗಳನ್ನು ರೋಮ್ ಹೊಂದಿತ್ತು. ಜುಡಿಯಾಗೆ ತನ್ನದೇ ನಗರಗಳಿದ್ದವು. ಆದರೆ ಊರ ತುಂಬಾ ಚರ್ಚ್‌ಗಳು, ಪ್ರಾರ್ಥಿಸಲು ಪವಿತ್ರಸ್ಥಾನಗಳನ್ನೇ ಹೊಂದಿರುವ ಒಹಾಯೊ ಮಾನವ ಹಕ್ಕುಗಳಿಂದ ವಂಚಿತರಾಗಿ, ತುಳಿತಕ್ಕೊಳಗಾದ ಮುಗ್ಧರಿಗೆ ಒಂದು ರಾತ್ರಿ ಆಶ್ರಯ ಕೊಡುವ ದೇವಾಲಯಗಳನ್ನೇ ಹೊಂದಿಲ್ಲ’ ಎಂದು ಅತ್ಯಂತ ಸಾಂಕೇತಿಕವಾಗಿ ದಾಖಲಿಸಿದ್ದಳು.
ಆಕೆಯನ್ನು ಉಪನ್ಯಾಸವೊಂದಕ್ಕೆ ಪೋರ್ಟ್‌ಲ್ಯಾಂಡ್‌ಗೆ ಆಹ್ವಾನಿಸಿದ್ದಾಗ, ದೈನಿಕ ಪತ್ರಿಕೆಯೊಂದು ಅವಳ ಬಗ್ಗೆ ಹೀಗೆ ಗೌರವಪೂರ್ವಕ ವರದಿ ಮಾಡಿತ್ತು. ‘ಆಕೆ ಯುದ್ಧ ಮತ್ತು ಪುನರ್‌ನಿರ್ಮಾಣ ಕಾರ್ಯದಲ್ಲಿ ಕಪ್ಪು ಜನಾಂಗದ ಬೇಡಿಕೆಗಳು ಎಂಬ ವಿಚಾರದ ಬಗ್ಗೆ ಅರ್ಧ ಗಂಟೆ ಮಾತನಾಡಿದರು. ಉತ್ಸಾಹದಿಂದ ಭಾಷಣವನ್ನು ಕಿವಿಗೊಟ್ಟು ಕೇಳುವವರು ಅಪರೂಪವೇ. ಆದರೆ ಮಿಸೆಸ್ ಹಾರ್ಪರ್‌ರ ಸ್ಪಷ್ಟ ಉಚ್ಚಾರಣೆ, ಶುದ್ಧ ಭಾಷೆ, ಹಿತವಾದ ಕಂಠ ಪ್ರೇಕ್ಷಕರನ್ನು ಮೋಡಿಗೊಳಿಸಿತು. ಅವರಾಡಿದ ಮಾತುಗಳನ್ನು ಸಂಗ್ರಹಿಸಿ ಬರೆಯುವುದು ಅವರಿಗೆ ಮಾಡುವ ಅನ್ಯಾಯ. ಯಾರಿಗಾದರೂ ಹೆಮ್ಮೆ ತರುವಂಥ ಭಾಷಣವನ್ನು ಪೋರ್ಟ್ ಲ್ಯಾಂಡ್‌ನ ಕೇಳುಗರು ಬಯಸಿದ್ದರು. ಭಾಷಣವೆಂದರೆ ಆನಾ ಡಿಕನ್ಸನ್ ಎಂದುಕೊಂಡಿದ್ದೆವು. ಈಕೆ ಅವಳ ಕಪ್ಪು ಸೋದರಿಯೆಂದರೆ ತಪ್ಪಾಗಲಾರದು’. ಆ ದಿನಗಳಲ್ಲಿ ಜಾನ್ ಬ್ರೌನ್ ನೀಡಿದ ಹೊಡೆತ ಇಡೀ ದೇಶದಲ್ಲಿ ಕ್ಷೋಭೆೆಯುಂಟು ಮಾಡಿತ್ತು. ಮಿಸೆಸ್ ಹಾರ್ಪರ್ ಮೇಲೆ ಇದು ತೀವ್ರ ಪರಿಣಾಮ ಉಂಟುಮಾಡಿತ್ತು. ಮರಣದಂಡನೆಯ ಶಿಕ್ಷೆಯನ್ನು ನಿರೀಕ್ಷಿಸುತ್ತ ಸೆರೆಮನೆಯಲ್ಲಿ ಕೊಳೆಯುತ್ತಿದ್ದ ಬ್ರೌನ್‌ನ ಗೆಳೆಯರಿಗೆ ಮತ್ತು ಮಿಸೆಸ್ ಬ್ರೌನ್‌ಗೆ ಸಹಾನುಭೂತಿಯ ಪತ್ರವೊಂದನ್ನು ಬರೆದಿದ್ದಳು. ‘ದೇವರು, ನಮ್ಮೆಲ್ಲರ ದೇವರು, ಶೋಧನೆಯ ಸಮಯದಲ್ಲಿ ನಿಮ್ಮೆಂದಿಗೆ ಇರಲಿ. ಬ್ರೌನ್‌ನ ಮರಣ ದಂಡನೆಯ ದಿನಗಳನ್ನು ಎಣಿಸುತ್ತ ಸಂಕಟ ಅನುಭವಿಸುತ್ತಿದ್ದ ಆತನ ಪತ್ನಿಯೊಂದಿಗೆ ಎರಡು ವಾರಗಳಿದ್ದಳು.
ಈ ಹೊತ್ತಿಗಾಗಲೇ ಅವಳ ಆರೋಗ್ಯ ಹದಗೆಡುತ್ತಿತ್ತು. ತಾನು ಬಾಲ್ಯವನ್ನು ಕಳೆದ ನೆಲಕ್ಕಾಗಿ, ಮನೆಗಾಗಿ ಅವಳ ಹೃದಯ ಹಂಬಲಿಸುತ್ತಿತ್ತು. ಆದರೆ ಗುಲಾಮರ ರಾಜ್ಯದಲ್ಲಿ ತಾನು ಸಾಯುವುದನ್ನು ಮಾತ್ರ ಇಷ್ಟಪಡಲಿಲ್ಲ. ‘ನಾನು ದಮನಕ್ಕೆ ಒಳಗಾದವರ ಮಧ್ಯೆಯೇ ಬದುಕಿದ್ದೇನೆ. ಉತ್ತರಕ್ಕೆ ಪಲಾಯನ ಮಾಡುತ್ತಿದ್ದ ಗುಲಾಮನನ್ನು ಸೆರೆಹಿಡಿದಾಗೆಲ್ಲ ಸಂಕಟ ಅನುಭವಿಸಿದ್ದೇನೆ. ದಕ್ಷಿಣದಲ್ಲಿ ಗುಲಾಮರನ್ನು ಬೇಟೆಯಾಡಿ ಶಿಕ್ಷಿಸಿದಾಗೆಲ್ಲ ನನ್ನ ಸ್ವಾತಂತ್ರಕ್ಕೆ ಹೊಡೆತ ಬಿದ್ದಂತೆ ತತ್ತರಿಸಿದ್ದೇನೆ. ಉತ್ತರ ಮತ್ತು ದಕ್ಷಿಣ ಮಾಡಿದ ಪಾಪದ ಫಲವನ್ನು ಅನುಭವಿಸಲೇಬೇಕು’ ಎಂದಿದ್ದಳು. 1860ರಲ್ಲಿ ಸಿನ್ ಸಿನಾಟಿ ನಗರದಲ್ಲಿ ಆಕೆ ಪೆಂಟಾನ್ ಹಾರ್ಪರ್ ಎಂಬ ಒಹಾಯೋದ ವಿಧುರನನ್ನು ವಿವಾಹವಾದಳು. ಸಂಸಾರ ಬಂಧನಕ್ಕೆ ಸಿಲುಕಿದ ಮೇಲೆ ಮೊದಲಿನಂತೆ ಪ್ರವಾಸಗಳನ್ನು ಕೈಗೊಳ್ಳಲಾಗದಿದ್ದರೂ ದಾಸ್ಯವಿರೋಧಿ ಚಟುವಟಿಕೆಗಳಲ್ಲಿ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಕಳೆದುಕೊಳ್ಳಲಿಲ್ಲ. ಆಕೆ ದಾಂಪತ್ಯದ ಸವಿಯನ್ನು ಉಂಡಿದ್ದು ಅಲ್ಪಕಾಲವೇ. ಆಕೆಯ ಪತಿ 1864 ರಲ್ಲಿ ತೀರಿ ಹೋದ.
ಅಂತರ್ಯುದ್ಧ ಸಮಯದಲ್ಲಿ ಸ್ವಾತಂತ್ರಕ್ಕಾಗಿ ನಡೆದ ಹೋರಾಟದಲ್ಲಿ ಉಪನ್ಯಾಸಗಳನ್ನು ನೀಡುವ, ಬರೆಯುವ ಯಾವ ಅವಕಾಶವನ್ನು ಅವಳು ತಪ್ಪಿಸಿಕೊಳ್ಳಲಿಲ್ಲ. ಮಾನವ ಹಕ್ಕುಗಳು, ಶಿಕ್ಷಣ ಮತ್ತು ಸಮಾನ ಕಾನೂನಿಗಾಗಿ ಆಕೆ ಸಮರವನ್ನೇ ಸಾರಿದ್ದಳು. ವಿಷಮ ಪರಿಸ್ಥಿತಿಗಳಲ್ಲೂ ಧೈರ್ಯಗೆಡದೆ ದಕ್ಷಿಣದ ಯಾತ್ರೆಗಳನ್ನು ಕೈಗೊಂಡಿದ್ದಳು. ತೋಟಗಳಲ್ಲಿನ ಜೋಪಡಿಗಳಲ್ಲಿ ವಾಸವಾಗಿದ್ದ ಬಡ ಸ್ವತಂತ್ರ ಕರಿಯರಿಂದ ಹಿಡಿದು ನಗರಗಳಲ್ಲಿ, ಚರ್ಚ್ ಗಳಲ್ಲಿ, ಶಾಸನಸಭೆಗಳಲ್ಲಿ ಭಾಗಿಯಾಗಿದ್ದವರನ್ನೆಲ್ಲ ಭೇಟಿಯಾಗಿದ್ದಳು. ನಿರ್ಭಯವಾಗಿ, ಒಂಟಿಯಾಗಿ, ದಕ್ಷಿಣದಲ್ಲಿ ಓಡಾಡುವಾಗ ಅವಳು ತನ್ನ ಹೃದಯದ ನಂಬಿಕೆಯನ್ನು ಮಾತ್ರ ನೆಚ್ಚಿಕೊಂಡಂತೆ ಇತ್ತು. ಆಕೆ ಭಾಷಣ ಮಾಡುವಾಗ ಜನವೆಲ್ಲ ಅವಳೊಬ್ಬಳು ಗಂಡಸು, ಆಕೆ ಕರಿಯಳಲ್ಲ, ಬಿಳಿಯಳಿರಬಹುದು. ಮುಖಕ್ಕೆ ಮಸಿ ಹಚ್ಚಿ ಅವಳನ್ನು ಕರೆದು ತಂದಿದ್ದಾರೆ ಎನ್ನುತ್ತಿದ್ದರು. ತನ್ನ ಗೆಳತಿಗೆ ಬರೆದ ಪತ್ರದಲ್ಲಿ, ‘ನಾನು ಮಾತಾಡಿ ಮಾತಾಡಿ ಬಿದ್ದು ಹೋಗುವಷ್ಟು ಬಳಲಿದ್ದೇನೆ. ಆದರೂ ನನ್ನ ಜನಾಂಗದೊಂದಿಗೆ ಹೊಸಯುಗದ ಹೊಸ್ತಿಲಲ್ಲಿ ನಿಂತಿದ್ದೇನೆ. ನನಗಿಂತ ತಿಳಿದವರು ಬೇಕಾದಷ್ಟು ಜನರಿರಬಹುದು. ನಾನು ನನ್ನ ಅಲ್ಪಜ್ಞಾನದೊಂದಿಗೆ ನನ್ನ ಜನಾಂಗವನ್ನು ಒಂದು ಹೆಜ್ಜೆಯಾದರೂ ಮುನ್ನಡೆಸಲು ಸಾಧ್ಯವೇ ಎಂದು ಯೋಚಿಸುತ್ತಿದ್ದೇನೆ. ನನ್ನ ಜನ ಕುರುಬನಿಲ್ಲದ ಕುರಿಮಂದೆಯಂತಾಗಿದ್ದಾರೆ. ಹೆಣ್ಣುಮಕ್ಕಳೊಂದಿಗೆ ಖಾಸಗಿಯಾಗಿ ಮಾತಾಡ ಬೇಕೆಂದಿದ್ದೇನೆ. ಅವರ ಹೆಣ್ಣುಮಕ್ಕಳು, ಅಭಿವೃದ್ಧಿ ಇತ್ಯಾದಿಗಳ ಬಗ್ಗೆ ತಿಳಿಹೇಳಬೇಕಾಗಿದೆ. ಇದೀಗ ನಮ್ಮ ಹೆಣ್ಣುಮಕ್ಕಳು ತಲೆಯೆತ್ತಿ ನಿಂತು, ಅಡುಗೆ ಬೇಯಿಸುವ ಒಲೆಗಳ ಅಡಿಯಲ್ಲೇ ಪ್ರಗತಿಯ ವೇದಿಕೆಯನ್ನು ನಿರ್ಮಿಸಬೇಕು’ ಎಂದಿದ್ದಳು.
ಆಕೆಯದು ಉದಾತ್ತ ಮನೋಭಾವ, ಶಕ್ತಿಶಾಲಿ ಮುಖಭಾವ. ಅತ್ಯಂತ ಆರೋಗ್ಯದ ಕಳೆಯನ್ನು ಅವಳ ಮುಖ ಸೂಸುತ್ತಿತ್ತು. ಪುಟ್ಟ ಕೈಗಳನ್ನು ಮೇಜಿಗಾನಿಸಿಕೊಂಡು ಮಾತಿಗೆ ನಿಲ್ಲುತ್ತಿದ್ದ ಅವಳ ಕೈಗಳಲ್ಲಿ ಟಿಪ್ಪಣಿಗಳಿರುತ್ತಿರಲಿಲ್ಲ. ಅವಳದು ಗಂಭೀರ ನಿಲುವು. ಅರ್ಥವಿರದ ತತ್ವಗಳನ್ನು ಎಂದೂ ಹೇಳುತ್ತಿರಲಿಲ್ಲ. ಅವಳ ಮಾತುಗಳು ಹೃದಯವನ್ನು ಮುಟ್ಟುವಂತಿರುತ್ತಿದ್ದವು. ಇನ್ನೂರು ವರ್ಷಗಳ ನೋವು ಅವಳ ದನಿಯಲ್ಲಿ ನಿಟ್ಟುಸಿರಂತೆ ಹೊಮ್ಮುತ್ತಿತ್ತು. ಅವಳ ಕಣ್ಣಿನ ಪ್ರತಿ ವೇದನೆಯ ನೋಟ ತನ್ನ ಜನಾಂಗಕ್ಕಾಗಿರುವ ಅನ್ಯಾಯವನ್ನು ಹೇಳುತ್ತಿತ್ತು. ಅವಳ ಮಾತುಗಳನ್ನು ಕೇಳುತ್ತಿದ್ದವರ ಎದೆಯೊಳಗೆ ತಣ್ಣನೆಯ ಕ್ರೌರ್ಯ ಹರಿದಂತಾಗುತ್ತಿತ್ತು. ಈಕೆಯ ತಾಯಿ ಸತ್ತಾಗ ರಕ್ಷಣೆ ಸಿಗದಿದ್ದರೆ ಬಹುಶಃ ಇವಳು ಹರಾಜಿನ ಕಟ್ಟೆಯ ಮೇಲೆ ನಿಲ್ಲಬೇಕಾಗುತ್ತಿತ್ತು. ಈಕೆಯ ಶಕ್ತಿಶಾಲಿ ಚೈತನ್ಯ, ಬುದ್ಧಿಮತ್ತೆ, ಪರಿಶುದ್ಧ ವ್ಯಕ್ತಿತ್ವ ಎಲ್ಲವು ಹರಾಜಾಗಿ ಹೋಗುತ್ತಿತ್ತು ಎಂದು ನನಗೆ ಅನಿಸುತ್ತಿತ್ತು ಎಂದು ಫಿಲಿಡೆಲ್ಫಿಯಾದಲ್ಲಿ ನೀಡಿದ ಉಪನ್ಯಾಸದ ಬಗ್ಗೆ ನ್ಯೂಯಾರ್ಕ್‌ನ ಗ್ರೇಸ್ ಗ್ರೀನ್‌ವುಡ್ ಅಭಿಪ್ರಾಯಪಟ್ಟಿದ್ದರು. ಹಾರ್ಪರ್‌ಳ ಸಾಹಿತ್ಯದ ಕೌಶಲವನ್ನು ಆಕೆ ಪ್ರಕಟಿಸಿರುವ ಪುಸ್ತಕಗಳಾದ ‘ಮೋಸಿಸ್’, ‘ಎ ಸ್ಟೋರಿ ಆಫ್ ದಿ ನೈಲ್’, ‘ಡಿ ಡೈಯಿಂಗ್ ಬಾಂಡ್ಸ್ ಮನ್’, ‘ಎಲಿಸಾ ಹ್ಯಾರಿಸ್ ಕ್ರಾಸಿಂಗ್ ದಿ ಐಸ್’ ಮುಂತಾದ ಕೃತಿಗಳಲ್ಲಿ ಕಾಣಬಹುದಾಗಿದೆ.
ಹಾರ್ಪರ್ ಹಾಡುಕಟ್ಟಿದ್ದು ತನ್ನ ಜನರಿಗಾಗಿ. ಕತ್ತಿ, ಕುಡುಗೋಲುಗಳ ಕಾಳಗಕ್ಕೆ, ಕದನಕ್ಕಲ್ಲ. ಕಚ್ಚಾಟ, ಕೊಲೆಗಾಗಿ ಮೊದಲೇ ಅಲ್ಲ. ಅರೆಗಳಿಗೆಯಾದರು ತನ್ನವರಿಗೆ ಚಿಂತೆ ಇರದಂತೆ, ಹಳೆಯದೆಲ್ಲವನ್ನು ಮರೆತು ಹೋಗುವಂತೆ, ಜೀವ ಸಮೃದ್ಧ ಭಾವ ಎದೆಯಲ್ಲಿ ಮೂಡುವಂತೆ ಹಾಡುಗಳನ್ನು ಬರೆಯುತ್ತ ಹೋದಳು. ಬಡವರಿಗೆ, ಕಣ್ಣು ಮಸುಕಾದವರಿಗೆ, ಅಸಹಾಯಕರಿಗೆ ಕವಿತೆ ಬರೆದಳು. ಸೋತು ಸೊರಗಿದ ಈ ಧರೆಗೆ ಒಂದು ಶುದ್ಧ, ಶಕ್ತಿ ಗೀತೆ ಬೇಕೆಂದು ಬಯಸಿದಳು. ಮತ್ತೆಂದೂ ವೇದನೆಯ ಅಪಸ್ವರ ಮೂಡದಂತೆ, ಯುದ್ಧ ಕೊಲೆಗಳು ನಿಲ್ಲುವಂತೆ, ಆದ ಗಾಯಗಳು ಮಾಯುವಂತೆ, ಮನುಜರ ಹೃದಯ ಮೆದುವಾಗಿ ಶಾಂತಿ ಮಂತ್ರವನ್ನು ಇಡೀ ವಿಶ್ವ ಪಠಿಸುವಂತೆ ಹಾಡು ಕಟ್ಟುತ್ತಲೇ ಹೋದಳು.
ಹೂಳಿಬಿಡಿರಿ ನನ್ನ ಸ್ವತಂತ್ರ ನೆಲದಲ್ಲಿ
ನಿಮಗಿಷ್ಟ ಬಂದ ಕಡೆ ನನ್ನ ಗೋರಿಯ ತೋಡಿ
ಎತ್ತದ ಪರ್ವತವೋ, ತಗ್ಗು ನೆಲವೋ
ಘೋರ ದಾಸ್ಯದ ನಾಡನೊಂದುಳಿದು
ಯಾವ ಮೂಲೆಯಾದರು ಸರಿ ಹೂಳಿಬಿಡಿ
ಗುಲಾಮ ಹೆಜ್ಜೆದನಿ ಕೇಳಿಯೂ ಕೇಳದಂತೆ
ಮಲಗಬಲ್ಲೆನೇ ಗೋರಿಯೊಳಗೆ ತಣ್ಣಗೆ
ನನ್ನ ಗೋರಿಗವನ ನೆರಳು ಸೋಕಿದರೂ ಸಾಕು
ಮಂಕು ಕವಿು ನಡುಕ ಮೂಡುವುದು ನನಗೆ
ಸರಪಳಿಯ ಕಟ್ಟಿ ಎಳೆದೊಯ್ಯುವುದನು
ಕಂಡರಿನ್ನೆಷ್ಟು ಜೀವ ಕಳಕಳಿಸಬಹುದು
ನಡನಡುಗು ಗಾಳಿಯಲಿ ಶಾಪದಂತೆ
ಎದೆಬಿರಿವ ತಾಯದನಿ ಕೇಳಬಹುದು
ಚಾವಟಿಯ ಪ್ರತಿ ಏಟು ರಕ್ತ ಹೀರುವುದನು
ಮುದು್ದ ಪಾರಿವಾಳ ಗೂಡಿಂದ ಜಾರುವುದನು
ಅವ್ವನೆದೆಯಿಂದ ಕಂದಮ್ಮಗಳ ಕಿತ್ತೊಯ್ಯುವುದನು
ಅಯ್ಯೋ, ನೋಡಿದರೂ ನೋಡದೆ ಇರಲಾರೆನು
ಬೇಟೆ ನಾಯಿಗಳು ಕಿತ್ತು ತಿನ್ನುವುದನ್ನು
ನೋಡಿದರೆ ಎನ್ನೆದೆ ನಡುದೇನು
ಹಿಡಿದು ತಂದವರ ಅಳಲು ಕೇಳಬಲ್ಲೆನೇ ನಾನು
ಬಿದ್ದು ಬೇಡಿಕೊಳುವುದ ನೋಡಲಾರೆನು
ತಾಯ ರಕ್ಷೆಯಿರದ ಹೆಣ್ಣುಮಕ್ಕಳ ಯೌವನವ
ಹರಾಜಿಗಿಡುವುದನು ನೋಡಿದರೆ ಸಾಕು
ನನ್ನೆದೆಯು ಹಾುವುದು, ಕಣ್ಣು ಕಾಂತಿಗೆಡುವುದು
ಸತ್ತಿರುವ ಕೆನ್ನೆಯು ಕೆಂಪೇರುವುದು ಅವಮಾದಿಂದ
ಎಲ್ಲಿ ವುನುಜರ ಹಕ್ಕು ಘಾಸಿಗೊಳಗಾಗದೋ
ಅಲ್ಲಿ ನಿದ್ರಿಸುವೆ ಗೆಳೆಯರೆ ನಿಶ್ಚಿಂತೆಯಿಂದ
ಎಲ್ಲಿ ಸೆದರನು ಸೋದರನೆ ಆಗುವನೋ
ಅಲ್ಲಿ ನಿದ್ರಿಸುವೆ ಗೆಳೆಯರೆ ನೆಮ್ಮದಿಯಿಂದ
ದ�